ಶತಮಾನದ ಹಳೆಯ ಮರಕ್ಕೆ ಕೊಡಲಿ ಪೆಟ್ಟು: ಪಾಲಿಕೆ ವಿರುದ್ಧ ಪ್ರತಿಭಟನೆ

Spread the love

ಮೈಸೂರು: ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿರುವ ಶತಮಾನದ ಹಳೆಯ ಮರ ಕಡಿಯಲು ಮುಂದಾಗಿರುವುದನ್ನು ಖಂಡಿಸಿ ಪರಿಸರ ಪ್ರೇಮಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆಯವರು ವಿಶಿಷ್ಟ ಪ್ರತಿಭಟನೆ ನಡೆಸಿದರು.

ಈ ಬೃಹತ್ ಗಾತ್ರದ ಮರದ ಸುತ್ತ ಇದ್ದ ಕಟ್ಟೆಯನ್ನು ದುರಸ್ತಿ ನೆಪದಲ್ಲಿ ಮರವನ್ನೇ ಕಡಿಯಲು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆಂದು ಪ್ರತಿಭಟನಾನಿರತರು ಕಿಡಿಕಾರಿದರು.

ಪರಿಸರ ಪ್ರೇಮಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ಸದಸ್ಯರು ಕಡಿದ ಮರದ ಬೇರನ್ನು ಹಿಡಿದು ಮರದ ಬುಡದಲ್ಲಿ ನಿಂತು ಅಧಿಕಾರಗಳ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಇತಿಹಾಸ ಇರುವ ಬೃಹದಾಕಾರದ ಮರದ ಬುಡಕ್ಕೆ ಕೊಡಲಿ ಪೆಟ್ಟು ಮಾಡಿರುವುದು ದುರಂತ ಎಂದು ಬೇಸರ ಪಟ್ಟರು.

ಅಭಿವೃದ್ಧಿ ನೆಪದಲ್ಲಿ ಮರಗಳ ಮಾರಣ ಹೋಮ ಮಾಡುತ್ತಾ ಬಂದಿದ್ದಾರೆ, ಕೇಳಲು ಹೋದರೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

ಇದನ್ನು ಪಾರಂಪರಿಕ ವೃಕ್ಷ ಎಂದು ಘೋಷಿಸಬೇಕು,ಈ ಮರಕ್ಕೆ ಕಟ್ಟಿರುವ ಕಟ್ಟಡ ಕೂಡಾ ಪಾರಂಪರಿಕ.
ಮೊದಲು ನಂಜ ರಾಜ ಬಹುದೂರ್ ಛತ್ರ ಕಾಮಗಾರಿಗಳನ್ನು ಶೀಘ್ರ ಮಾಡಬೇಕು, ಅನವಶ್ಯಕ ಇರುವ ಕಾಮಗಾರಿಗಳನ್ನು
ಕೈಬಿಟ್ಟು ಮರಗಳ ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಕೂಡಲೇ ಎಂದಿನಂತೆ ಮರವನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮುಖದಮೆ ದಾಖಲಿಸಬೇಕಾಗುತ್ತದೆ ಎಂದು ವಿನಯ್ ಕುಮಾರ್ ಎಚ್ಚರಿಸಿದರು,

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಜೀವದಾರ ರಕ್ತ ನಿಧಿ ಕೇಂದ್ರದ ಗಿರೀಶ್, ಯುವ ಮುಖಂಡರಾದ ಹರೀಶ್ ಗೌಡ, ಮಂಜುನಾಥ್ ಗೌಡ, ಸಂದೇಶ್, ರವಿಚಂದ್ರ, ಎಸ್ ಎನ್ ರಾಜೇಶ್, ನೀತು, ಸಂತೋಷ್, ಮತ್ತಿತರರು ಪಾಲ್ಗೊಂಡಿದ್ದರು.