ಕನ್ನಡತಿ‌ ಬಾನುಮುಷ್ತಾಕ್ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪ್ರದಾನ

ಲಂಡನ್: ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಅವರು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪಾತ್ರ ರಾಗಿದ್ದು,ಈ‌ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡತಿ.

ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ ಅಂತರಾಷ್ಟ್ರೀಯ ಬೂಕರ್
ಪ್ರಶಸ್ತಿ ಲಭ್ಯವಾಗಿದೆ.

ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ವಿಶೇಷ. ಬೂಕರ್ ಪ್ರಶಸ್ತಿ 50 ಸಾವಿರ ಪೌಂಡ್‌ (ಅಂದಾಜು 57.28 ಲಕ್ಷ ರೂ.) ಒಳಗೊಂಡಿದೆ. ಇದೇ ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿತ್ತು.

1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು.

ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕತೆಯನ್ನು ಬರೆಯಲಾಗಿತ್ತು.

ಮೇ 21ರಂದು ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಶಸ್ತಿಯನ್ನು ಬಾನು ಮುಷ್ತಾಕ್ ಅವರಿಗೆ ಪ್ರದಾನ ಮಾಡಲಾಯಿತು.

ಈ ವೇಳೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮುಷ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ.

ಯಾವ ಕಥೆಯೂ ಸಣ್ಣದಲ್ಲ, ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿತು ಎಂದು ಹೇಳಿದ್ದಾರೆ.

ನನ್ನ ಸುಂದರವಾದ ಭಾಷೆಗೆ ದೊರೆತ ಎಂತಹ ಸೊಗಸಾದ ಗೆಲುವು ಇದು ಎಂದು ಅನುವಾದಕಿ ಭಸ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.

ಫ್ರೆಂಚ್‌ನಿಂದ ಅನುವಾದವಾದ ಎರಡು ಕೃತಿಗಳು, ಜಪಾನ್‌, ಇಟಾಲಿಯನ್‌ ಹಾಗೂ ಡ್ಯಾನಿಷ್‌ ಭಾಷೆಯ ತಲಾ ಒಂದು ಕೃತಿ ಶಾರ್ಟ್‌ ಲಿಸ್ಟ್‌ ನಲ್ಲಿದ್ದವು.

ಬೂಕರ್ ಪ್ರಶಸ್ತಿ ಪಡೆದ ಬಾನು ಮುಸ್ತಾಕ್ ಅವರಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ,ಡಾ.ಜಿ.ಪರಮೇಶ್ವರ್,ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡತಿ‌ ಬಾನುಮುಷ್ತಾಕ್ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪ್ರದಾನ Read More

ಯುಕೆ, ಫ್ರಾನ್ಸ್ ಮತ್ತು ಕೆನಡಾ ನಾಯಕರ ಆಕ್ಷೇಪಕ್ಕೆ‌ ನೆತನ್ಯಾಹು ಖಂಡನೆ

ಇಸ್ರೇಲ್, ಟೆಲ್​ ಅವೀವ್: ಇಡೀ ಗಾಜಾವನ್ನು ಆಕ್ರಮಿಸಿಕೊಳ್ಳುವುದಾಗಿ ಇಸ್ರೇಲ್ ಹೇಳಿದ್ದಕ್ಕೆ ಯುಕೆ, ಫ್ರಾನ್ಸ್ ಮತ್ತು ಕೆನಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು,ಈ ಮೂರೂ ದೇಶಗಳ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಖಂಡಿಸಿದ್ದಾರೆ.

ಅಕ್ಟೋಬರ್ 7, 2023 ರಂದು ನಡೆದ ಘಟನೆ ನಿರ್ಲಕ್ಷಿಸಿ, ನಮ್ಮ ಮೇಲಿನ ದಾಳಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.

ಹಮಾಸ್ ವಿರುದ್ಧ ಸಂಪೂರ್ಣ ಗೆಲುವು ಸಾಧಿಸುವುದು ಇಸ್ರೇಲ್‌ನ ಗುರಿ ಎಂದು ನೆತನ್ಯಾಹು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್ ಸಂಪೂರ್ಣ ವಿಜಯ ಸಾಧಿಸುವವರೆಗೆ ಕಾನೂನುಬದ್ಧ ವಿಧಾನಗಳ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಮತ್ತು ಹೋರಾಡುವುದನ್ನು ಮುಂದುವರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಮಾಸ್ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮೊದಲು ರಕ್ಷಣಾತ್ಮಕ ಯುದ್ಧವನ್ನು ನಿಲ್ಲಿಸಬೇಕು ಎಂದು ನೇತನ್ಯಾಹು ಇದೇ ವೇಳೆ ಒತ್ತಾಯಿಸಿದ್ದಾರೆ.

2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಗೆ ಈ ಎಲ್ಲ ರಾಷ್ಟ್ರಗಳ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ನಾವು ನಮ್ಮ ರಕ್ಷಣೆಗಾಗಿ ನಡೆಸುತ್ತಿರುವ ದಾಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಭವಿಷ್ಯದಲ್ಲಿ ಹೆಚ್ಚಿನ ದಾಳಿಗಳಿಗೆ ಆಹ್ವಾನ ನೀಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಗಿಡಿಯಾನ್ಸ್ ಚಾರಿಯಟ್ಸ್’ ಎಂದು ಕರೆಯಲ್ಪಡುವ ಇಸ್ರೇಲಿ ಸೇನೆಯಿಂದ ನಡೆಯುತ್ತಿರುವ ಭೂ ಸೇನೆಯ ಕಾರ್ಯಾಚರಣೆಯನ್ನು ಯುಕೆ, ಫ್ರಾನ್ಸ್ ಮತ್ತು ಕೆನಡಾ ಖಂಡಿಸಿದ್ದು, ಈ ಬಗ್ಗೆ ಜಂಟಿ ಹೇಳಿಕೆ ನೀಡಿವೆ. ಈ ದಾಳಿಯು ಗಾಜಾದಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದು ಹೇಳಿವೆ.

ಮಾನವೀಯ ನೆರವು ಗಾಜಾವನ್ನು ತಲುಪುವುದನ್ನು ತಡೆಯುವ ಇಸ್ರೇಲಿ ನಿರ್ಬಂಧಗಳನ್ನು ತೆಗೆದುಹಾಕುವಂತೆ ಈ ರಾಷ್ಟ್ರಗಳು ಇಸ್ರೇಲ್​​ ಗೆ ಸೂಚಿಸಿವೆ.

ಇಸ್ರೇಲ್ ಇದೇ ರೀತಿ ಮುಂದುವರಿದರೆ ಖಂಡಿತವಾಗಿಯೂ ಇದಕ್ಕೆ ಪ್ರತಿಕ್ರಿಯೆ ಇರುತ್ತದೆ ಎಂದು ಈ ರಾಷ್ಟ್ರಗಳ ನಾಯಕರು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಿಡಿಯಾನ್ಸ್ ಚಾರಿಯಟ್ಸ್ ಎಂಬ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಇಡೀ ಗಾಜಾ ಹಿಡಿತದಲ್ಲಿಟ್ಟುಕೊಳ್ಳುವುದಾಗಿ ಘೋಷಿಸಿದ್ದಾರೆ.

ಯುಕೆ, ಫ್ರಾನ್ಸ್ ಮತ್ತು ಕೆನಡಾ ನಾಯಕರ ಆಕ್ಷೇಪಕ್ಕೆ‌ ನೆತನ್ಯಾಹು ಖಂಡನೆ Read More

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್​ಗೆ ಪ್ರಾಸ್ಟೇಟ್ ಕ್ಯಾನ್ಸರ್

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

ಅವರಿಗೆ 82 ವರ್ಷ. ಬೈಡನ್ ಅವರ ಮೂಳೆಗಳಿಗೆ ಕ್ಯಾನ್ಸರ್ ಹರಡಿದೆ. ಜೋ ಬೈಡನ್ ಅವರ ಕಚೇರಿ ಈ ಮಾಹಿತಿಯನ್ನು ತಿಳಿಸಿದೆ.

ಜೋ ಬೈಡನ್ ಅವರ ಗಂಭೀರ ಆರೋಗ್ಯ ಸ್ಥಿತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದುಃಖ ವ್ಯಕ್ತಪಡಿಸಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವ ಸುದ್ದಿ ಕೇಳಿ ತೀವ್ಯ ದುಃಖವಾಗಿದೆ. ಬೈಡನ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ

ಜೋ ಬೈಡನ್​ಗೆ ಅವರಿಗೆ ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆ ಎದುರಾಗಿತ್ತು, ಹಾಗಾಗಿ ಶುಕ್ರವಾರ ವೈದ್ಯರನ್ನು ಭೇಟಿಯಾಗಿದ್ದರು. ವೈದ್ಯರು ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ರಿಪೋರ್ಟ್​ ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದರು.

ರಾಜಕೀಯದಲ್ಲಿ ದೀರ್ಘ ಅನುಭವ ಜೋ ಬೈಡೆನ್ 2021 ರಿಂದ 2025 ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದರು. 2024 ರಲ್ಲಿ, ಅವರು ತಮ್ಮ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಮತ್ತೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದರು.

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್​ಗೆ ಪ್ರಾಸ್ಟೇಟ್ ಕ್ಯಾನ್ಸರ್ Read More

ಲಷ್ಕರ್‌ ಪ್ರಮುಖ ಭಯೋತ್ಪಾದಕ ಸೈಫುಲ್ಲಾ ಖಾಲಿದ್‌ ಹ*ತ್ಯೆ

ಪಾಕಿಸ್ತಾನ: ನಮ್ಮ ದೇಶದ ಮೂರು ಪ್ರಮುಖ ದಾಳಿಗಳ ಹಿಂದಿನ ಲಷ್ಕರ್‌ನ ಪ್ರಮುಖ ಭಯೋತ್ಪಾದಕ ಸೈಫುಲ್ಲಾ ಖಾಲಿದ್‌ನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತರು ಹತ್ಯೆ ಮಾಡಿದ್ದಾರೆ.

ಕೆಲವು ಅಪರಿಚಿತ ಬಂಧೂಕುದಾರಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

2001ರಲ್ಲಿ ರಾಂಪುರದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿ, 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಕಾಂಗ್ರೆಸ್ ಮೇಲಿನ ದಾಳಿ ಮತ್ತು 2006ರಲ್ಲಿ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿ ಮೇಲಿನ ಈ ಪ್ರಮುಖ ದಾಳಿಗಳಲ್ಲಿ ಖಾಲಿದ್ ಪ್ರಮುಖ ಸಂಚುಕೋರನಾಗಿದ್ದ.

ಐದು ವರ್ಷಗಳ ಅವಧಿಯಲ್ಲಿ ನಡೆಸಲಾದ ಈ ದಾಳಿಗಳು ಅನೇಕ ಜೀವಗಳನ್ನು ಬಲಿ ಪಡೆದಿತ್ತು.

ಖಾಲಿದ್ ಹಲವಾರು ವರ್ಷಗಳ ಕಾಲ ನೇಪಾಳದಲ್ಲಿ ನೆಲೆಸಿದ್ದ.ಅಲ್ಲದೆ ಸ್ಥಳೀಯ ಮಹಿಳೆಯನ್ನು ವಿವಾಹವಾಗಿದ್ದ. ನೇಪಾಳದವನಾದ ಈತ ಲಷ್ಕರ್-ಎ-ತೊಯ್ಬಾದ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದನೆಂದು ಹೇಳಲಾಗಿದೆ.

ಇತ್ತೀಚೆಗೆ, ಖಾಲಿದ್ ತನ್ನ ಅಡಗುತಾಣವನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಮಟ್ಲಿಗೆ ಸ್ಥಳಾಂತರಿಸಿದ್ದನು. ಆತನ ಮುಖ್ಯ ಗಮನವು ಭಯೋತ್ಪಾದಕ ಕಾರ್ಯಾಚರಣೆಗಳಿಗೆ ನೇಮಕಾತಿ ಮತ್ತು ನಿಧಿಸಂಗ್ರಹಣೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಲಷ್ಕರ್‌ ಪ್ರಮುಖ ಭಯೋತ್ಪಾದಕ ಸೈಫುಲ್ಲಾ ಖಾಲಿದ್‌ ಹ*ತ್ಯೆ Read More

ಕಡೆಗೂ ಪಾಕ್ ಮೇಲೆ‌ ಭಾರತದ ದಾಳಿ ಒಪ್ಪಿಕೊಂಡ ಪ್ರಧಾನಿ ಶೆಹಬಾಜ್ ಷರೀಫ್

ಇಸ್ಲಾಮಾಬಾದ್: ಪಾಕಿಸ್ತಾನದ ವಾಯುನೆಲೆಗಳ ಮೇಲಿನ ಭಾರತದ ದಾಳಿಯನ್ನು ಕಡೆಗೂ ಪಾಕ್​ ಪ್ರಧಾನಿ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ.

ಭಾರತದ ದಾಳಿಯನ್ನು ಇದುವರೆಗೂ ನಿರಾಕರಿಸುತ್ತಲೇ ಬಂದಿದ್ದ ಶೆಹಬಾಜ್ ಮೇ 10ರಂದು ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ತಾಣಗಳನ್ನು ಹೊಡೆದುರುಳಿಸಿವೆ ಎಂದು ತಿಳಿಸಿದ್ದಾರೆ.

ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡಿರುವ ಷರೀಫ್, ಮೇ 10ರಂದು ಬೆಳಗಿನ ಜಾವ 2.30ರ ವೇಳೆ, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನನಗೆ ಕರೆ ಮಾಡಿ ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳನ್ನು ಹೊಡೆದಿರುಳಿಸಿದ್ದಾಗಿ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.

ದಾಳಿಯ ವೇಳೆ ನಮ್ಮ ವಾಯುಪಡೆಯು ದೇಶವನ್ನು ಉಳಿಸಲು ಸ್ಥಳೀಯ ತಂತ್ರಜ್ಞಾನ ಮತ್ತು ಚೀನೀ ಜೆಟ್‌ಗಳನ್ನು ಬಳಸಿತ್ತು. ಆದರೆ, ಭಾರತದ ಕ್ಷಿಪಣಿಗಳು ತಮ್ಮ ಗುರಿ ಸಾಧಿಸಿ ಹೊಡೆದುರುಳಿಸಿವೆ ಎಂದು ದೃಢಪಡಿಸಿದ್ದಾರೆ ಎಂದು ಶಹಬಾಜ್ ತಿಳಿಸಿದ್ದಾರೆ.

ಈ ಕುರಿತು ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಜನರಲ್ ಅಸಿಮ್ ಮುನೀರ್ ಅವರು ಬೆಳಗಿನ ಜಾವ 2:30ಕ್ಕೆ ತಮಗೆ ಕರೆ ಮಾಡಿ ಭಾರತ ನೂರ್ ಖಾನ್ ವಾಯುನೆಲೆ ಮತ್ತು ಇತರ ಹಲವಾರು ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ತಿಳಿಸಿದ್ದರು ಎಂದು ಒಪ್ಪಿಕೊಂಡಿದ್ದಾರೆ ಎಂದು ಬರೆದಿದ್ದಾರೆ.

ಏಪ್ರಿಲ್ 22ರಂದು ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಗೆ ಪ್ರತಿಯಾಗಿ ಭಾರತ ಮೇ 7ರಂದು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಕೈಗೊಂಡಿತ್ತು.

ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ, ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್​​ ಉಗ್ರ ಸಂಘಟನೆಗಳ ನಂಟಿರುವ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದವು.

ಆದರೆ ಪಾಕಿಸ್ತಾನವು ನಿಯಂತ್ರಣ ರೇಖೆ ಮತ್ತು ಜಮ್ಮು ಮತ್ತು ಕಾಶ್ಮೀರದ ಗಡಿಯಾಚೆಗೆ ಶೆಲ್ ಮತ್ತು ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತದ ಸೈನಿಕರು ಪಾಕಿಸ್ತಾನದ 11 ವಾಯುನೆಲೆಗಳಲ್ಲಿ ರಾಡಾರ್ ಮೂಲಸೌಕರ್ಯ, ಸಂವಹನ ಕೇಂದ್ರಗಳು ಮತ್ತು ವಾಯುನೆಲೆಗಳ ಮೇಲೆ ಸಂಘಟಿತ ಕ್ಷಿಪಣಿ ದಾಳಿ ಮಾಡಿತ್ತು.

ಕಡೆಗೂ ಪಾಕ್ ಮೇಲೆ‌ ಭಾರತದ ದಾಳಿ ಒಪ್ಪಿಕೊಂಡ ಪ್ರಧಾನಿ ಶೆಹಬಾಜ್ ಷರೀಫ್ Read More

ಪಾಕಿಸ್ತಾನ ನಾಶ ಮಾಡುತ್ತೇವೆ: ಬಲೂಚ್ ನಾಯಕರ ಪ್ರತಿಜ್ಞೆ

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ದಂಗೆ ಜೋರಾಗುತ್ತಿದ್ದು, ಪಾಕಿಸ್ತಾನವನ್ನು ಸರ್ವನಾಶ ಮಾಡುತ್ತೇವೆ ಎಂದು ಬಲೂಚ್ ಬಂಡುಕೋರರು ಪ್ರತಿಜ್ಞೆ ಮಾಡಿದ್ದಾರೆ.

ಇಡೀ ಜಗತ್ತು ನೋಡುವಂತಹ ಇತಿಹಾಸವನ್ನು ನಾವು ರಚಿಸಲಿದ್ದೇವೆ ಎಂದು ಬಲೂಚಿಸ್ತಾನ್ ಸೇನೆ ಹೇಳಿಕೊಂಡಿದೆ.

ಬಲೂಚಿಸ್ತಾನ್ ಎಂದಿಗೂ ಪಾಕಿಸ್ತಾನದ ಭಾಗವಾಗಿರಲಿಲ್ಲ ಎಂದು ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಹೇಳಿದ್ದಾರೆ. ಪಾಕಿಸ್ತಾನ ಸರ್ಕಾರದಿಂದ ದಶಕಗಳಿಂದ ನಡೆದ ವೈಮಾನಿಕ ಬಾಂಬ್ ದಾಳಿ, ನಾಪತ್ತೆ ಪ್ರಕರಣಗಳು ಮತ್ತು ನರಮೇಧವನ್ನು ಅವರು ಉಲ್ಲೇಖಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ, ಬಲೂಚಿಸ್ತಾನ್ ಮತ್ತು ಅಲ್ಲಿನ ಜನ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಲೂಚಿಸ್ತಾನ ಪ್ರಜಾಸತ್ತಾತ್ಮಕ ಗಣರಾಜ್ಯದ ಜನರು ಭಾರತದ ಜನರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ ಎಂದು ಅವರು ಹೇಳಿದ್ದಾರೆ,

ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ, ಆದರೆ ಬಲೂಚಿಸ್ತಾನ್ ಮತ್ತು ಅದರ ಜನರು ಭಾರತ ಸರ್ಕಾರದ ಜೊತೆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಬ್ಬಂಟಿಯಲ್ಲ, ನಿಮಗೆ 6 ಕೋಟಿ ಬಲೂಚ್ ದೇಶಭಕ್ತರ ಬೆಂಬಲವಿದೆ ಎಂದೂ ಮೀರ್ ಯಾರ್ ಹೇಳಿದ್ದಾರೆ.

ಬಲೂಚಿಸ್ತಾನದ ಜನರಿಗೆ ಬೇಷರತ್ತಾದ ನೈತಿಕ ಬೆಂಬಲ ನೀಡಿದ್ದಕ್ಕಾಗಿ ಭಾರತದ ಜನರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಮಿರ್ ಹೇಳಿದ್ದು, ಬಲೂಚಿಸ್ತಾನದ ಇತಿಹಾಸ ಬರೆಯಲ್ಪಟ್ಟಾಗಲೆಲ್ಲಾ, ನಿಮ್ಮ ಕೊಡುಗೆಯನ್ನು ಸುವರ್ಣಾಕ್ಷರಗಳಲ್ಲಿ ಉಲ್ಲೇಖಿಸಲಾಗುತ್ತದೆ. ಭಾರತದ ಶಾಂತಿ ಮತ್ತು ಸಮೃದ್ಧಿಯನ್ನು ನಾನು ಬಯಸುತ್ತೇನೆ ಎಂದಿದ್ದಾರೆ.

ದಶಕಗಳಿಂದ ಪಾಕಿಸ್ತಾನ ಸರ್ಕಾರ, ಸೇನೆಯ ದೌರ್ಜನ್ಯದ ವಿರುದ್ಧದ ಬಲೂಚ್ ಜನರ ಹೋರಾಟಕ್ಕೆ ಇಂದು ಮುಕ್ತಿ ಸಿಕ್ಕಿದೆ. ಮಲಯ
ಸ್ವಾತಂತ್ರ್ಯ ಘೋಷಿಸಿಕೊಂಡ ನಂತರ ಬಲೂಚ್ ನಾಯಕರು ಪ್ರತ್ಯೇಕ ಬಲೂಚ್ ನಕ್ಷೆ, ಧ್ವಜವನ್ನು ಪ್ರದರ್ಶಿಸಿದ್ದಾರೆ.

ಜತೆಗೆ ದೆಹಲಿಯಲ್ಲಿ ಅಧಿಕೃತ ರಾಯಭಾರ ಕಚೇರಿ ತೆರೆಯಲು ಬಲೂಚಿಸ್ತಾನಕ್ಕೆ ಅವಕಾಶ ಕೊಡಬೇಕು ಎಂದು ಅಲ್ಲಿನ ನಾಯಕರು ಮನವಿ ಮಾಡಿದ್ದಾರೆ.

ಪಾಕಿಸ್ತಾನ ನಾಶ ಮಾಡುತ್ತೇವೆ: ಬಲೂಚ್ ನಾಯಕರ ಪ್ರತಿಜ್ಞೆ Read More

ಆಕಸ್ಮಿಕವಾಗಿ ಗಡಿ ದಾಟಿ ಪಾಕ್ ಸೇನೆಯಿಂದ ಬಂಧಿತನಾದ ಯೋಧ ಪೂರ್ಣಮ್ ವಾಪಸು

ಪಾಕಿಸ್ತಾನ: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಬಿಎಸ್​ಎಫ್​ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕ್ ಬಿಡುಗಡೆ ಮಾಡಿದೆ.

ವಾಘಾ ಗಡಿ ಮೂಲಕ ಅವರು ಭಾರತಕ್ಕೆ ಹಿಂದಿರುಗಿದ್ದಾರೆ.

ಪೂರ್ಣಮ್ ಕುಮಾರ್ ಶಾ ಅವರನ್ನು ಬುಧವಾರ ಭಾರತೀಯ ಅಧಿಕಾರಿಗಳಿಗೆ ಪಾಕ್ ಸೇನೆ ಹಸ್ತಾಂತರಿಸಲಾಗಿದೆ.

ಅಮೃತಸರದ ಅಟ್ಟಾರಿಯಲ್ಲಿರುವ ಜಂಟಿ ಚೆಕ್ ಪೋಸ್ಟ್‌ನಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಹಸ್ತಾಂತರ ಪ್ರಕ್ರಿಯೆ ನಡೆಯಿತು ಮತ್ತು ಕೆಲ ಶಿಷ್ಟಾಚಾರಗಳನ್ನು ಅನುಸರಿಸಿ ಶಾಂತಿಯುತವಾಗಿ ಹಸ್ತಾಂತರ ನಡೆಸಲಾಯಿತು ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಈಗ ಭದ್ರತಾ ಅಧಿಕಾರಿಗಳು ಶಾ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಏಪ್ರಿಲ್ 23 ರಂದು ಪಂಜಾಬ್‌ನ ಫಿರೋಜ್‌ಪುರ ಬಳಿ ಅಂತಾರಾಷ್ಟ್ರೀಯ ಗಡಿಯನ್ನು ಅಜಾಗರೂಕತೆಯಿಂದ ದಾಟಿದ ನಂತರ 182 ನೇ ಬೆಟಾಲಿಯನ್‌ನ ಬಿಎಸ್‌ಎಫ್ ಜವಾನ್ ಶಾ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದರು.

ಆಕಸ್ಮಿಕವಾಗಿ ಗಡಿ ದಾಟಿದ ಭಾರತೀಯ ಯೋಧನನ್ನು ಬಂಧಿಸಿದ ಪಾಕಿಸ್ತಾನ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಭೂಪ್ರದೇಶಕ್ಕೆ ಬಿಎಸ್‌ಎಫ್ ಕಾನ್‌ಸ್ಟೆಬಲ್ ಆಕಸ್ಮಿಕವಾಗಿ ದಾಟಿಹೋಗಿದ್ದರು.

ಪಾಕಿಸ್ತಾನ ರೇಂಜರ್‌ಗಳು ಭಾರತೀಯ ಪಡೆಗಳೊಂದಿಗಿನ ಎಲ್ಲಾ ಧ್ವಜ ಸಭೆಗಳನ್ನು ಸ್ಥಗಿತಗೊಳಿಸಿದ್ದರು.

ಶಾ ಸೇನಾ ಸಮವಸ್ತ್ರ ಧರಿಸಿದ್ದರು ಜತೆಗೆ ಸೇವಾ ಬಂದೂಕು ಹೊಂದಿದ್ದರು. ರೈತರೊಂದಿಗೆ ಇದ್ದ ಇವರು, ವಿಶ್ರಾಂತಿಗಾಗಿ ನೆರಳು ಅರಸಿ ಹೊರಟಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಡಿ ದಾಟಿಬಿಟ್ಟಿದ್ದರು.
ಕೂಡಲೇ ಅವರನ್ನು ಪಾಕಿಸ್ತಾನಿ ಸೇನೆ ವಶಕ್ಕೆ ಪಡೆದಿತ್ತು.

ಇಂಥ ಘಟನೆಗಳು ಎರಡೂ ಕಡೆಯಿಂದ ಆಗಾಗ ನಡೆಯುತ್ತಲೇ ಇರುತ್ತವೆ. ಹೀಗಾಗಿ ಇದು ವಿಶೇಷ ಪ್ರಕರಣವಲ್ಲ. ಆದರೆ ಪಹಲ್ಗಾಮ್ ಘಟನೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿರುವುದರಿಂದ ಈ ಘಟನೆ ಮಹತ್ವ ಪಡೆದುಕೊಂಡಿದೆ.

ಆಕಸ್ಮಿಕವಾಗಿ ಗಡಿ ದಾಟಿ ಪಾಕ್ ಸೇನೆಯಿಂದ ಬಂಧಿತನಾದ ಯೋಧ ಪೂರ್ಣಮ್ ವಾಪಸು Read More

ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಸೇರಿ 25 ಪ್ರಮುಖರಿಗೆ ಹೆಚ್ಚಿನ ಭದ್ರತೆ

ನವದೆಹಲಿ: ಆಪರೇಷನ್ ಸಿಂಧೂರದ ಬಳಿಕ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೇರಿ 25 ಪ್ರಮುಖರಿಗೆ ಭದ್ರತೆ ಹೆಚ್ಚಿಸಲಾಗಿದೆ.

ಅಷ್ಟೂ ಮಂದಿಗೂ ಬುಲೆಟ್ ಪ್ರೂಫ್ ಕಾರು, ಕಮಾಂಡೋ ಸೆಕ್ಯೂರಿಟಿಯನ್ನು ನೀಡಲಾಗಿದೆ.

ಏ.22ರಂದು ನಡೆದ ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಜೋರಾಗಿದ್ದು, ಕದನ ವಿರಾಮ ಘೋಷಣೆಯಾದ ಬಳಿಕ ವಿದೇಶಾಂಗ ಸಚಿವಾಲಯದ ವಿನಂತಿ ಮೇರೆಗೆ 25 ಪ್ರಮುಖರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

25 ವಿಐಪಿಗಳ ಪಟ್ಟಿಯನ್ನು ತಯಾರಿಸಲಾಗಿದ್ದು,ಈ ಪಟ್ಟಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಜೆ.ಪಿ ನಡ್ಡಾ, ಭೂಪೇಂದರ್ ಯಾದವ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಸುಧಾಂಶು ತ್ರಿವೇದಿ ಹಾಗೂ ಬಿಜೆಪಿಯ ಪ್ರಮುಖ ನಾಯಕ ಮುರಳಿ ಮನೋಹರ್ ಜೋಶಿ ಅವರ ಹೆಸರಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ Z ಸೆಕ್ಯೂರಿಟಿ ಹೊಂದಿರುವ ಜೈಶಂಕರ್ ಅವರಿಗೆ ಮತ್ತೆ ಭದ್ರತೆ ಹೆಚ್ಚಿಸಲಾಗಿದ್ದು, ಒಂದು ಬುಲೆಟ್ ಪ್ರೂಫ್ ಕಾರು, 4-6 ಕಮಾಂಡೋ ಸೇರಿ 22 ಸಿಬ್ಬಂದಿ, ಭದ್ರತೆಗೆ ಬೆಂಗಾವಲು ವಾಹನಗಳು, 33 ಸಿಆರ್‌ಪಿಎಫ್ ಕಮಾಂಡೋ ಹಾಗೂ ದಿನದ 24/7 ಭದ್ರತೆ ನೀಡಲಾಗಿದೆ. ಜೊತೆಗೆ ದೆಹಲಿಯಲ್ಲಿರುವ ಸರ್ಕಾರಿ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಭದ್ರತೆಗಾಗಿ ಒದಗಿಸುತ್ತಿರುವ ಕಾರುಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇರಿಸುವಂತೆ ಹಾಗೂ ಭದ್ರತಾ ಸಿಬ್ಬಂದಿಗೆ ಫೈರಿಂಗ್ ಹಾಗೂ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಕುರಿತು ತರಬೇತಿ ನೀಡುವಂತೆ ಸೂಚಿಸಲಾಗಿದೆ.

ಮೇ 7ರಂದು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನಲ್ಲಿ ಪಾಕ್‌ನ 9 ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಲಾಗಿತ್ತು.

ಪಾಕ್ ನಿಯಂತ್ರಣ ರೇಖೆ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಅಪ್ರಚೋದಿತ ಶೆಲ್ ದಾಳಿ ನಡೆಸಿತು. ಮೇ 10ರಂದು, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ. ಇದರ ನಡುವೆ 25 ಮಂದಿಗೆ ಬಿಗಿ‌ ಭದ್ರತೆ ಹೆಚ್ಚಿಸಲಾಗಿದೆ.

ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಸೇರಿ 25 ಪ್ರಮುಖರಿಗೆ ಹೆಚ್ಚಿನ ಭದ್ರತೆ Read More

ಪಶ್ಚಿಮ ಆಫ್ರಿಕಾ ಬುರ್ಕಿನಾ ಫಾಸೊದಲ್ಲಿ ಜಿಹಾದಿ ದಾಳಿ,100ಕ್ಕೂ ಹೆಚ್ಚು ಸಾ*ವು

ಪಶ್ಚಿಮ ಆಫ್ರಿಕಾ: ಪಶ್ಚಿಮ ಆಫ್ರಿಕಾದ
ಉತ್ತರ ಬುರ್ಕಿನಾ ಫಾಸೊ ದಲ್ಲಿರುವ ಜಿಹಾದಿ ಗುಂಪು ಮಿಲಿಟರಿ ನೆಲೆಗಳು ಮತ್ತು ಜಿಬೊ ನಗರ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ದಾಳಿ ಮಾಡಿದ್ದು 100 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಸೈನಿಕರು. ಬುರ್ಕಿನಾ ಫಾಸೊದ ಅತ್ಯಂತ ಹಾನಿಗೊಳಗಾದ ಪ್ರದೇಶದಲ್ಲಿರುವ ವ್ಯಕ್ತಿಯೊಬ್ಬರು ಮಿಲಿಟರಿ ನೆಲೆ ಮತ್ತು ಜಿಬೊ ನಗರ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ದಾಳಿ ನಡೆದಿದೆ ಎಂದು ಹೇಳಿದರು.

ಈ ದಾಳಿಯಲ್ಲಿ ತನ್ನ ತಂದೆ ಕೂಡ ಸಾವನ್ನಪ್ಪಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳಿದ್ದಾಳೆ.

ಅಲ್-ಖೈದಾ ಸಂಬಂಧಿತ ಜಿಹಾದಿ ಸಂಘಟನೆ ಜಮಾತ್ ನಸ್ರ್ ಅಲ್-ಇಸ್ಲಾಂ ವಾಲ್-ಮುಸ್ಲಿಮೀನ್ ಅಥವಾ ಜೆಎನ್‌ಐಎಂ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.ಈ ಸಂಘಟನೆ ಸಹೇಲ್ ಪ್ರದೇಶದಲ್ಲಿ ಸಕ್ರಿಯವಾಗಿದೆ.

ದೇಶದ ಜನಸಂಖ್ಯೆ 23 ಮಿಲಿಯನ್. ಈ ದೇಶವು ಆಫ್ರಿಕಾದ ಸಹೇಲ್ ಪ್ರದೇಶದಲ್ಲಿದೆ, ಇಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ನಡೆಯುತ್ತಲೇ ಇರುತ್ತದೆ.

ಭಾನುವಾರ ಬೆಳಗ್ಗೆ 6 ಗಂಟೆಗೆ ಅನೇಕ ಸ್ಥಳಗಳಲ್ಲಿ ದಾಳಿಗಳು ಏಕಕಾಲದಲ್ಲಿ ನಡೆದಿದೆ. ಜೆಎನ್​ಐಎಂ ಹೋರಾಟಗಾರರು ಎಂಟು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು. ಜಿಬೊದಲ್ಲಿ ಅತಿದೊಡ್ಡ ದಾಳಿ ನಡೆದಿದ್ದು, ಅಲ್ಲಿ ಜೆಎನ್‌ಐಎಂ ಹೋರಾಟಗಾರರು ಮಿಲಿಟರಿ ಶಿಬಿರಗಳು ಮತ್ತು ಭಯೋತ್ಪಾದನಾ ನಿಗ್ರಹ ಘಟಕದ ಶಿಬಿರದ ಮೇಲೆ ದಾಳಿ ಮಾಡಿದರು.

ಪಶ್ಚಿಮ ಆಫ್ರಿಕಾ ಬುರ್ಕಿನಾ ಫಾಸೊದಲ್ಲಿ ಜಿಹಾದಿ ದಾಳಿ,100ಕ್ಕೂ ಹೆಚ್ಚು ಸಾ*ವು Read More

ಶ್ರೀಲಂಕಾದಲ್ಲಿ ಕಂದರಕ್ಕೆ ಬಸ್‌ ಉರುಳಿ 21 ಮಂದಿ ಸಾ*ವು

ಶ್ರೀಲಂಕಾ: ಶ್ರೀಲಂಕಾದ ಕೋಟ್ಮಲೆಯ ಗೆರಾಂಡಿಯೆಲ್ಲಾ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 21 ಜನರು ಸಾವನ್ನಪ್ಪಿದ್ದಾರೆ.

ಈ ಅಪಘಾತದಲ್ಲಿ 35 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕತರಗಮದಿಂದ ಕುರುಗಾಲಿಗೆ ಹೋಗುತ್ತಿದ್ದ ಖಾಸಗಿ ಬಸ್, ಮಳೆಯಿಂದ ಕೂಡಿದ ಅಂಕುಡೊಂಕಾದ ರಸ್ತೆಯಲ್ಲಿ ಜಾರಿ ಕಂದರಕ್ಕೆ ಉರುಳಿದೆ.

ವಾಹನವು 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ವರದಿಯಾಗಿದೆ. ವೇಗದ ಚಾಲನೆ ಮತ್ತು ಅಪಾಯಕಾರಿ ರಸ್ತೆಯಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾಂತ್ರಿಕ ವೈಫಲ್ಯ ಅಥವಾ ಚಾಲಕ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆಯೆ ಎಂಬ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ.

ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು, ತುರ್ತು ಸೇವೆಗಳು ಮತ್ತು ಗ್ರಾಮಸ್ಥರ ರಕ್ಷಣಾ ಪ್ರಯತ್ನಗಳು ಗಂಟೆಗಳ ಕಾಲ ತೆಗೆದುಕೊಳ್ಳಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಕಂದರಕ್ಕೆ ಬಸ್‌ ಉರುಳಿ 21 ಮಂದಿ ಸಾ*ವು Read More