ಜೋರ್ಡಾನ್ ಗೆ ಬಂದ ಮೋದಿ:ಆತ್ಮೀಯವಾಗಿ ಸ್ವಾಗತಿಸಿದ ಜಾಫರ್ ಹಸನ್

ಜೋರ್ಡಾನ್: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಸೋಮವಾರ ಜೋರ್ಡಾನ್ ರಾಜಧಾನಿ ಅಮ್ಮನ್‌ನಲ್ಲಿ ಬಂದಿಳಿದರು,ಈ ವೇಳೆ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಮೋದಿ‌ ಅವರ ಪ್ರವಾಸದಲ್ಲಿ ಇಥಿಯೋಪಿಯಾ ಮತ್ತು ಒಮಾನ್ ಕೂಡ ಸೇರಿವೆ.
ಜೋರ್ಡಾನ್ ಪ್ರಧಾನಿ ಜಾಫರ್ ಹಸನ್ ಅವರು ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.

ಜೋರ್ಡಾನ್ ಭೇಟಿಯು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವದೊಂದಿಗೆ ಹೊಂದಿಕೆಯಾಗಿದೆ, ಇದು ದ್ವಿಪಕ್ಷೀಯ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯ ಮೈಲಿಗಲ್ಲಾಗಿದೆ.

ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಡಿಸೆಂಬರ್ 15 ರಿಂದ 16 ರವರೆಗೆ ಜೋರ್ಡಾನ್‌ನಲ್ಲಿ ಇರಲಿದ್ದಾರೆ.

ಈ ಸಮಯದಲ್ಲಿ ಅವರು ಭಾರತ-ಜೋರ್ಡಾನ್ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಲು ಮತ್ತು ಪ್ರಾದೇಶಿಕ ಅಭಿವೃದ್ಧಿಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಭಾರತ ಮತ್ತು ಜೋರ್ಡಾನ್ ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಾಮರ್ಥ್ಯ ವೃದ್ಧಿಯಲ್ಲಿ ಸಹಕರಿಸುತ್ತಿವೆ.

2021 ರಲ್ಲಿ ಉದ್ಘಾಟನೆಯಾದ ಭಾರತ-ಜೋರ್ಡಾನ್ ಮಾಹಿತಿ ತಂತ್ರಜ್ಞಾನದ ಶ್ರೇಷ್ಠತಾ ಕೇಂದ್ರವು ತರಬೇತಿಯನ್ನು ಗುರಿಯಾಗಿರಿಸಿಕೊಂಡ ಒಂದು ಪ್ರಮುಖ ಉಪಕ್ರಮವಾಗಿದೆ ಎಂದು ಬಿಂಬಿಸಲಾಗಿದೆ.

ಜೋರ್ಡಾನ್ ಗೆ ಬಂದ ಮೋದಿ:ಆತ್ಮೀಯವಾಗಿ ಸ್ವಾಗತಿಸಿದ ಜಾಫರ್ ಹಸನ್ Read More

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಗುಂಡಿನ ದಾಳಿ, 10 ಮಂದಿ ಬಲಿ

ಸಿಡ್ನಿ: ಆಸ್ಟ್ರೇಲಿಯದ ಸಿಡ್ನಿಯ ಬೊಂಡಿ ಬೀಚ್​ನಲ್ಲಿ ದುಷ್ಕರ್ಮಿಗಳು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಬಲಿಯಾಗಿದ್ದಾರೆ.

ದಾಳಿ ವೇಳೆ ಪೊಲೀಸರು ಹಾಗೂ ಇಬ್ಬರು ಗನ್ ಮೆನ್ ಗಳು ಕೂಡಾ ಮೃತಪಟ್ಟಿದ್ದಾರೆ.ಒಬ್ಬ ಗನ್ ಮ್ಯಾನ್ ಸ್ಥಿತಿ ಚಿಂತಾಜನಕವಾಗಿದೆ.15 ಮಂದಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿಯಲ್ಲಿ ಸುಮಾರು 50 ಗುಂಡುಗಳು ಹಾರಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಘಟನೆ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಆಂತೋನಿ ಆಲಬೆನಸ್ ದುಃಖ ವ್ಯಕ್ತಪಡಿಸಿದ್ದು,ಇದು ಆಘಾತಕಾರಿ ಘಟನೆ ಎಂದು ತಿಳಿಸಿದ್ದಾರೆ.

ರಕ್ಷಣಾ ಕಾರ್ಯ ಮುಂದುವರಿದಿದೆ,ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಗುಂಡಿನ ದಾಳಿ, 10 ಮಂದಿ ಬಲಿ Read More

H-1B ವೀಸಾ ಅರ್ಜಿಗಳಿಗೆ 100,000 ಡಾಲರ್​ ಶುಲ್ಕ: ಟ್ರಂಪ್‌ ವಿರುದ್ಧ ಮೊಕದ್ದಮೆ

ವಾಶಿಂಗ್ಟನ್:‌ H-1B ವೀಸಾ ಅರ್ಜಿಗಳಿಗೆ ಅಗತ್ಯವಿರುವ ಹೊಸ ಶುಲ್ಕ 100,000 ಡಾಲರ್​ ಶುಲ್ಕ ವಿಧಿಸಿರುವ ಟ್ರಂಪ್​ ಆದೇಶವನ್ನು ಪ್ರಶ್ನಿಸಿ ಅಮೆರಿಕದ ಇಪ್ಪತ್ತು ರಾಜ್ಯಗಳು ಮೊಕದ್ದಮೆ ಹೂಡಿವೆ.

ಈ ನೀತಿ ಕಾನೂನುಬಾಹಿರವಾಗಿದ್ದು, ಪ್ರಮುಖ ಸಾರ್ವಜನಿಕ ಸೇವೆಗಳಿಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ ಎಂದು ಪ್ರತಿಪಾದಿಸಲಾಗಿದೆ.

ಈ ವೀಸಾ ಯೋಜನೆಯನ್ನು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಶಾಲೆಗಳು ವ್ಯಾಪಕವಾಗಿ ಬಳಸುತ್ತಿವೆ. ಈ ಶುಲ್ಕ ಹೆಚ್ಚಳವು ಹೆಚ್ಚು ಕೌಶಲ್ಯಪೂರ್ಣ ವಿದೇಶಿ ಕೆಲಸಗಾರರನ್ನು ನೇಮಿಸಿಕೊಳ್ಳಲು ಬಯಸುವ ಉದ್ಯೋಗದಾತರ ಮೇಲೆ ಭಾರೀ ಹೊರೆಯಾಗುತ್ತದೆ ಎಂದು ಅರ್ಜಿಯಲ್ಲಿ
ತಿಳಿಸಲಾಗಿದೆ.

ಟ್ರಂಪ್ ಆಡಳಿತವು ಶುಲ್ಕ ವಿಧಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬೊಂಟಾ ಹೇಳಿದ್ದಾರೆ.

ಪ್ರಪಂಚದಾದ್ಯಂತದ ಕೌಶಲ್ಯಪೂರ್ಣ ಪ್ರತಿಭೆಗಳು ನಮ್ಮ ಕಾರ್ಯಪಡೆಗೆ ಸೇರಿದಾಗ ಅವರು ರಾಜ್ಯವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ.

ಅಧ್ಯಕ್ಷ ಟ್ರಂಪ್ ವಿಧಿಸಿರುವ ಈ ಅಕ್ರಮ 100,000 ಡಾಲರ್​ ಶುಲ್ಕವು ಕ್ಯಾಲಿಫೋರ್ನಿಯಾದ ಸಾರ್ವಜನಿಕ ಸಂಸ್ಥೆಗಳ ಮೇಲೆ ಅನಗತ್ಯ ಹೊರೆಯನ್ನು ಹೆಚ್ಚುವಂತೆ ಮಾಡುತ್ತಿದೆ. ಇದು ಪ್ರಮುಖ ವಲಯಗಳಲ್ಲಿ ಕಾರ್ಮಿಕರ ಕೊರತೆಯನ್ನು ಉಲ್ಬಣಗೊಳಿಸುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬಂಟಾ ಮತ್ತು ಮ್ಯಾಸಚೂಸೆಟ್ಸ್ ಅಟಾರ್ನಿ ಜನರಲ್ ಆಂಡ್ರಿಯಾ ಜಾಯ್ ಕ್ಯಾಂಪ್ಬೆಲ್ ಅವರು ಈ ಮೊಕದ್ದಮೆ ಹೂಡಿದ್ದಾರೆ.

ಜೊತೆಗೆ ಅರಿಜೋನಾ, ಕೊಲೊರಾಡೋ, ಕನೆಕ್ಟಿಕಟ್, ಡೆಲವೇರ್, ಹವಾಯಿ, ಇಲಿನಾಯ್ಸ್, ಮೇರಿಲ್ಯಾಂಡ್, ಮಿಚಿಗನ್, ಮಿನ್ನೇಸೋಟ, ನೆವಾಡಾ, ನಾರ್ತ್ ಕೆರೊಲಿನಾ, ನ್ಯೂಜೆರ್ಸಿ, ನ್ಯೂಯಾರ್ಕ್, ಒರೆಗಾನ್, ರೆಡ್​ ಐಲ್ಯಾಂಡ್,ವರ್ಮೊಂಟ್, ವಾಷಿಂಗ್ಟನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳ ಅಟಾರ್ನಿ ಜನರಲ್‌ಗಳು ಸಹ ಮೊಕದ್ದಮೆ ದಾಖಲಿಸಿವೆ.

H-1B ವೀಸಾ ಅರ್ಜಿಗಳಿಗೆ 100,000 ಡಾಲರ್​ ಶುಲ್ಕ: ಟ್ರಂಪ್‌ ವಿರುದ್ಧ ಮೊಕದ್ದಮೆ Read More

ಜಪಾನ್​ನಲ್ಲಿ ಮತ್ತೆ 6.7 ತೀವ್ರತೆಯ ಪ್ರಬಲ ಭೂಕಂಪನ

ಟೋಕಿಯೋ: ಉತ್ತರ ಜಪಾನ್​ ಕರಾವಳಿಯಲ್ಲಿ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ.

ಈ ಪ್ರದೇಶದಲ್ಲಿ ಇದಕ್ಕೂ ಮುನ್ನಾ ದಿನ ಸಂಭವಿಸಿದ ಭೂಕಂಪಕ್ಕಿಂತ ಇದು ಪ್ರಬಲವಾಗಿದ್ದು,50 ಜನರು ಗಾಯಗೊಂಡಿದ್ದಾರೆ.

ಶುಕ್ರವಾರ ಸಂಭವಿಸಿದ ಭೂಕಂಪನದ ತೀವ್ರತೆ 6.7ರಷ್ಟಿದ್ದು, ಒಂದು ಮೀಟರ್​ ಎತ್ತರದ ಸುನಾಮಿ ಅಲೆಗಳು ಉತ್ತರ ಫೆಸಿಫಿಕ್​ ಕರಾವಳಿಗೆ ಅಪ್ಪಳಿಸಬಹುದೆಂದು ಜಪಾನ್​ ಹವಾಮಾನ ಸಂಸ್ಥೆ ತಿಳಿಸಿದೆ.
ಹೊಕ್ಕೈಡೊದ ಮುಖ್ಯ ಉತ್ತರ ದ್ವೀಪ ಮತ್ತು ಅಮೋರಿ ಪ್ರದೇಶದಲ್ಲಿ 20 ಸೆಂ.ಮೀ ಅಲೆಗಳು ದಾಖಲಾಗಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಕೂಡ ಭೂಕಂಪನ 6.7ರಷ್ಟು ತೀವ್ರತೆಯಲ್ಲಿ ಸಂಭವಿಸಿದ್ದು, ಕೇಂದ್ರಬಿಂದು ಹೊನ್ಶು ಮುಖ್ಯದ್ವೀಪದ ಇವಾಟೆ ಪ್ರಾಂತ್ಯದ ಕುಜಿ ನಗರದಿಂದ 130 ಕಿಲೋ ಮೀಟರ್​ ದೂರದಲ್ಲಿದೆ ಎಂದು ತಿಳಿಸಿದೆ.

ಗುರುವಾರ ಸಂಭವಿಸಿದ ಭೂಕಂಪನದ ಬೆನ್ನಲ್ಲೇ ಜನರ ಸ್ಥಳಾಂತರಕ್ಕೆ ಆದೇಶ ನೀಡಲಾಗಿತ್ತು. ಅಒಮೊರಿಯಲ್ಲಿನ ಹೈ ಸ್ಟೀಟ್​ ಟವರ್​ 70ಮೀಟರ್​​ನಷ್ಟು ಹಾನಿಗೊಂಡಿದೆ. ಇದರಿಂದ ಟವರ್ ಕುಸಿಯುವ ಅಪಾಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಾದೇಶಿಕ ಪರಮಾಣು ಸೌಲಭ್ಯದಲ್ಲಿ ತಕ್ಷಣಕ್ಕೆ ಯಾವುದೇ ವ್ಯತ್ಯಯ ಕಂಡುಬಂದಿಲ್ಲ ಎಂದು ಪರಮಾಣು ನಿಯಂತ್ರಣ ಪ್ರಾಧಿಕಾರ ಹೇಳಿದೆ.

ಭೂಕಂಪದ ನಂತರ ಇನ್ನೊಂದು ವಾರದವರೆಗೆ ಇದೇ ರೀತಿಯ ಅಥವಾ ಹೆಚ್ಚಿನ ಗಾತ್ರದ ಮತ್ತೊಂದು ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಜೆಎಂಎ ಎಚ್ಚರಿಕೆ ನೀಡಿದೆ.

ಮುಖ್ಯ ದ್ವೀಪ ಹೊನ್ಶುವಿನ ಈಶಾನ್ಯ ತುದಿಯಲ್ಲಿರುವ ಸ್ಯಾನ್ರಿಕು ಪ್ರದೇಶ ಮತ್ತು ಪೆಸಿಫಿಕ್‌ಗೆ ಎದುರಾಗಿರುವ ಉತ್ತರ ದ್ವೀಪ ಹೊಕ್ಕೈಡೊ ಕೂಡ ಈ ಎಚ್ಚರಿಕೆಯ ವ್ಯಾಪ್ತಿಯಲ್ಲಿವೆ.

ಜಪಾನ್​ನಲ್ಲಿ ಮತ್ತೆ 6.7 ತೀವ್ರತೆಯ ಪ್ರಬಲ ಭೂಕಂಪನ Read More

ಅಮೆರಿಕದಲ್ಲಿ ಓದಿದ ವಿದ್ಯಾರ್ಥಿಗಳು ತವರಿಗೆ ಹೋಗುವುದು ನಾಚಿಕೆಗೇಡು: ಟ್ರಂಪ್​

ವಾಷಿಂಗ್ಟನ್: ನಮ್ಮಲ್ಲಿನ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ, ಪ್ರತಿಭೆ ಸಂಪಾದಿಸಿದ ವಿದೇಶಿ ವಿದ್ಯಾರ್ಥಿಗಳು ತವರೂರಿಗೆ ತೆರಳುವುದು ನಾಚಿಕೆಗೇಡಿನ ಸಂಗತಿ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಚಾಟಿ ಬೀಸಿದ್ದಾರೆ.

ಹೊಸ ವಲಸೆ ನೀತಿ ಟ್ರಂಪ್​ ಗೋಲ್ಡ್​ ಕಾರ್ಡ್​ ಜಾರಿ ಅನುಷ್ಠಾನ ಮಾಡಿದ ನಂತರ ಮಾತನಾಡಿದ ಟ್ರಂಪ್, ಭಾರತ ಮತ್ತು ಚೀನಾದ ವಿದ್ಯಾರ್ಥಿಗಳು ಅಮೆರಿಕದ ಉನ್ನತ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ನಂತರ ತಾಯ್ನಾಡಿಗೆ ಹಿಂತಿರುಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮಲ್ಲಿನ ಕಂಪನಿಗಳು ಅಂತಹ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಟ್ರಂಪ್ ಗೋಲ್ಡ್ ಕಾರ್ಡ್ ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಅಮೆರಿಕಕ್ಕೆ ಶ್ರೀಮಂತ ವ್ಯಕ್ತಿಗಳು ಬರುವಂತೆ ಮಾಡುವುದು ಗೋಲ್ಡ್ ಕಾರ್ಡ್​ ಹಿಂದಿನ ಉದ್ದೇಶ. ಜೊತೆಗೆ, ಇಲ್ಲಿ ವ್ಯಾಸಂಗ ಮಾಡಿ ಪ್ರತಿಭೆಯನ್ನು ಹೊತ್ತೊಯ್ಯಬಾರದು ಎಂಬುದು ನನ್ನ ಉದ್ದೇಶ. ಅಂಥವರನ್ನು ಇಲ್ಲಿಯೇ ಉಳಿಸಿಕೊಳ್ಳಲು ಸರ್ಕಾರ ಹೊಸ ವಲಸೆ ನೀತಿ ರೂಪಿಸಿದೆ. ಈ ಮೂಲಕ ಅಮೆರಿಕನ್ನರಿಗೂ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.

ನಮ್ಮ ಕಂಪನಿಗಳು ಉನ್ನತ ವಿಶ್ವವಿದ್ಯಾಲಯಗಳಾದ ವಾರ್ಟನ್, ಹಾರ್ವರ್ಡ್ ಮತ್ತು ಎಂಐಟಿಯಿಂದ ನೇಮಕ ಮಾಡಿಕೊಳ್ಳುವ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳಲು ಗೋಲ್ಡ್ ಕಾರ್ಡ್ ಖರೀದಿಸಬಹುದು ಎಂದು ಟ್ರಂಪ್ ಕರೆ ನೀಡಿದರು.

ಹೊಸ ಗೋಲ್ಡ್ ಕಾರ್ಡ್ ಯೋಜನೆ ಬುಧವಾರದಿಂಸ ಆರಂಭವಾಗಿದ್ದು,
ನಿನ್ನೆಯಿಂದಲೇ ಅರ್ಜಿಗಳನ್ನು ಆಹ್ವಾನಿಸಿದೆ.

ಅಮೆರಿಕದಲ್ಲಿ ಓದಿದ ವಿದ್ಯಾರ್ಥಿಗಳು ತವರಿಗೆ ಹೋಗುವುದು ನಾಚಿಕೆಗೇಡು: ಟ್ರಂಪ್​ Read More

ಕಾರಿನ ಮೇಲೆ ಇಳಿದ ವಿಮಾನ!

ಫ್ಲೋರಿಡಾ: ದೊಡ್ಡ‌ ವಿಮಾನವಾಗಲಿ,ಸಣ್ಣ ವಿಮಾನವಾಗಲಿ ಲ್ಯಾಂಡ್‌ ಆಗಲು ಏರ್ಪೋರ್ಟ್ ಇದ್ದೇ ಇರುತ್ತೆ,ಆದರೆ ಇಲ್ಲೊಂದು ವಿಮಾನ ಕಾರ್ ಮೇಲೆ ಇಳಿದಿದೆ!

ಫ್ಲೋರಿಡಾದಲ್ಲಿ ಸಣ್ಣ ವಿಮಾನವೊಂದು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಇಳಿದು ಅಪಘಾತಕ್ಕೀಡಾಗಿದೆ.

ಈ ವಿಮಾನ ಅಪಘಾತದಿಂದ ಬಹಳ ಸಮಯದವರೆಗೆ ಸಂಚಾರ ದಟ್ಟಣೆ ಉಂಟಾಯಿತು.

27 ವರ್ಷ ವಯಸ್ಸಿನ ಇಬ್ಬರು ಯುವಕರನ್ನು ಹೊತ್ತೊಯ್ಯುತ್ತಿದ್ದ ಸಿಂಗಲ್ ಎಂಜಿನ್ ಬೀಚ್‌ಕ್ರಾಫ್ಟ್ 55 ವಿಮಾನದ ಎಂಜಿನ್‌ನಲ್ಲಿ ತೊಂದರೆ ಉಂಟಾಗಿತ್ತು.

ಹಾಗಾಗಿ‌ ಒರ್ಲ್ಯಾಂಡೊ ಬಳಿ ಇಂಟರ್‌ಸ್ಟೇಟ್ 95 ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.

ಹಾಗಾಗಿ ವಿಮಾನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ಟೊಯೋಟಾ ಕ್ಯಾಮ್ರಿ ಕಾರಿನ ಮೇಲೆ ಅಪ್ಪಳಿಸಿತು.
ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಕಾರಿನ ಮೇಲೆ ಇಳಿದ ವಿಮಾನ! Read More

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ:ಕೆಲ ಮನೆಗಳು ನೆಲಸಮ

ಜಪಾನ್: ಉತ್ತರ ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಹಲವು ಮನೆಗಳು ನೆಲಸಮಗೊಂಡಿವೆ. ಜನರಲ್ಲಿ ಆತಂಕ ಮನೆ ಮಾಡಿದೆ.

ಸುನಾಮಿ ಅಲೆಗಳು ಎದ್ದಿವೆ. ಅಮೋರಿ ಕರಾವಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಪೆಸಿಫಿಕ್ ಮಹಾಸಾಗರದಲ್ಲಿ ರಾತ್ರಿ 11.15 ಕ್ಕೆ ಭೂಕಂಪ ಸಂಭವಿಸಿದೆ.

ಹಚಿನೋಹೆಯ ಹೋಟೆಲ್‌ನಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಇವಾಟೆ ಪ್ರಿಫೆಕ್ಚರ್‌ನ ಕುಜಿ ಬಂದರಿನಲ್ಲಿ 70 ಸೆಂ.ಮೀ.ವರೆಗಿನ ಸುನಾಮಿ ಅಲೆಗಳು ಎದ್ದಿವೆ.

ದುರ್ಬಲ ಪ್ರದೇಶಗಳಲ್ಲಿರುವ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ:ಕೆಲ ಮನೆಗಳು ನೆಲಸಮ Read More

ರಷ್ಯಾ- ಉಕ್ರೇನ್​ ನಡುವೆ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ

ಉಕ್ರೇನ್: ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು ಶಾಂತಿ ಪ್ರಸ್ತಾವನೆಯನ್ನು ಎರಡು ರಾಷ್ಟ್ರಗಳು ಒಪ್ಪಿವೆ. ಆದರೆ, ಈ ಶಾಂತಿ ಪ್ರಸ್ತಾವಕ್ಕೆ ಸಹಿ ಹಾಕಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಿದ್ಧರಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರ ಪಟ್ಟಿದ್ದಾರೆ.
ಅಮೆರಿಕ ಆಡಳಿತದ ಶಾಂತಿ ಪ್ರಸ್ತಾವನೆಯನ್ನು ಮಾರ್ಪಡಿಸುವಂತೆ ಈ ಹಿಂದೆಯೂ ಕೂಡ ಉಕ್ರೇನ್​ ಒತ್ತಾಯಿಸಿತ್ತು. ಹಾಗಾಗಿ ತಿದ್ದುಪಡಿಯ ಬಳಿಕ ಪ್ರಸ್ತಾವನೆಯ ಮೇಲಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕ ಮತ್ತು ಉಕ್ರೇನ್ ಸಮಾಲೋಚಕರು ಮೂರು ದಿನಗಳ ಮಾತುಕತೆ ನಡೆಸಿದ ನಂತರವೂ ಝೆಲೆನ್ಸ್ಕಿ ಒಪ್ಪಿಗೆ ನೀಡಿಲ್ಲ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್​, ಉಕ್ರೇನ್ ನಾಯಕ ಮಾತುಕತೆಗಳು ಮುಂದುವರಿಯುವುದನ್ನು ತಡೆಹಿಡಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಝೆಲೆನ್ಸ್ಕಿ ನಮ್ಮ ಪ್ರಸ್ತಾವನೆಯನ್ನು ಇನ್ನೂ ಓದಿಲ್ಲ ಎಂಬುದು ನಿರಾಶೆಯಾಗುತ್ತಿದೆ. ಈ ಪ್ರಸ್ತಾವನೆಯನ್ನು ಅವರ ಜನರು ಮೆಚ್ಚಿದ್ದಾರೆ. ರಷ್ಯಾ ಪ್ರಸ್ತಾವನೆಗೆ ಒಪ್ಪಿದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
ಆದರೆ, ಈ ಪ್ರಸ್ತಾವಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಕೂಡ ಸಾರ್ವಜನಿಕವಾಗಿ ಅನುಮೋದನೆ ನೀಡಿಲ್ಲ.
ಫ್ಲೋರಿಡಾದಲ್ಲಿ ಉಕ್ರೇನಿಯನ್ ನಿಯೋಗದೊಂದಿಗೆ ಅಮೆರಿಕದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಝೆಲೆನ್ಸ್ಕಿ ಅವರಿಗೆ ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಝೆಲೆನ್ಸ್ಕಿ ಪೋಸ್ಟ್ ಹಾಕುದ್ದು,ಉಕ್ರೇನ್ ಶಾಂತಿ ಸಾಧಿಸಲು ಅಮೆರಿಕದೊಂದಿಗೆ ದೃಢನಿಶ್ಚಯ ಹೊಂದಿದೆ ಎಂದು ತಿಳಿಸಿದ್ದಾರೆ.

ರಷ್ಯಾ- ಉಕ್ರೇನ್​ ನಡುವೆ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ Read More

ಅಲಾಸ್ಕಾ-ಕೆನಡಾದ ಯುಕಾನ್ ಪ್ರದೇಶದಲ್ಲಿ ಪ್ರಭಲ ಭೂಕಂಪ

ವಾಷಿಂಗ್ಟನ್‌: ಅಲಾಸ್ಕಾ ಮತ್ತು ಕೆನಡಾದ ಯುಕಾನ್ ಪ್ರದೇಶದ ನಡುವಿನ ಗಡಿಯ ಸಮೀಪ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.

ಕೇಂದ್ರಬಿಂದುವು ಅಲಾಸ್ಕಾದ ರಾಜಧಾನಿ ಜುನೌದಿಂದ ವಾಯುವ್ಯಕ್ಕೆ ಸುಮಾರು 370 ಕಿಲೋಮೀಟರ್ ದೂರದಲ್ಲಿ ಮತ್ತು ಕೆನಡಾದ ವೈಟ್‌ಹಾರ್ಸ್‌ನಿಂದ ಪಶ್ಚಿಮಕ್ಕೆ ಸುಮಾರು 250 ಕಿಲೋಮೀಟರ್ ದೂರದಲ್ಲಿತ್ತು. ಸಾವಿರಾರು ಕಿಲೋಮೀಟರ್ ದೂರದ ಜನರು ಭೂಮಿ ಕಂಪಿಸುತ್ತಿರುವಂತೆ ಅನುಭವಿಸಿದ್ದಾರೆ.ಆದರೆ‌ ಯಾವುದೇ‌ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಕೆನಡಾದ ವೈಟ್‌ಹಾರ್ಸ್‌ನಲ್ಲಿರುವ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಅಧಿಕಾರಿ ಕ್ಯಾಲಿಸ್ಟಾ ಮ್ಯಾಕ್‌ಲಿಯೋಡ್ ಭೂಕಂಪ ಕುರಿತು ನಡುಕವು ಸಾಕಷ್ಟು ಬಲವಾಗಿ ಅನುಭವಿಸಿದೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳು ನಡುಗಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಎರಡೂ ಪ್ರದೇಶಗಳಲ್ಲಿನ ಜನರು ತುಂಬಾ ಆತಂಕಕ್ಕೀಡಾಗಿದ್ದಾರೆ. ಭೂಕಂಪದ ಆಳವು ಸುಮಾರು 10 ಕಿಲೋಮೀಟರ್ ಎಂದು ವರದಿಯಾಗಿದೆ, ಅಂದರೆ ಅದು ಮೇಲ್ಮೈಗೆ ಬಹಳ ಹತ್ತಿರದಲ್ಲಿದೆ, ಇದು ಕಂಪನವನ್ನು ಇನ್ನಷ್ಟು ಅನುಭವಿಸುವಂತೆ ಮಾಡುತ್ತದೆ. ಹಲವಾರು ಸಣ್ಣ ನಂತರದ ಆಘಾತಗಳು ದಾಖಲಾಗಿದ್ದು, ಇದು ಜನರಲ್ಲಿ ಭಯ,ಆತಂಕವನ್ನು ಹೆಚ್ಚುಸುತ್ತಲೇ ಇದೆ.

ಭೂಕಂಪಕ್ಕೆ ಹತ್ತಿರದ ಕೆನಡಾದ ಪಟ್ಟಣ ಹೈನ್ಸ್ ಜಂಕ್ಷನ್ ಎಂದು ವರದಿಯಾಗಿದೆ, ಇದು ಕೇಂದ್ರಬಿಂದುದಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿದೆ. ಅಮೆರಿಕದ ಯಾಕುಟಾಟ್ ಪಟ್ಟಣವು ಕೇಂದ್ರಬಿಂದುದಿಂದ ಕೇವಲ 90 ಕಿಲೋಮೀಟರ್ ದೂರದಲ್ಲಿದೆ.
ಭೂಕಂಪದ ಕೇಂದ್ರಬಿಂದುವಿಗೆ ಹತ್ತಿರದಲ್ಲಿರುವ ಕೆನಡಾದ ಸಮುದಾಯವು ಹೈನ್ಸ್ ಜಂಕ್ಷನ್ ಆಗಿದ್ದು, ಸುಮಾರು 80 ಮೈಲುಗಳು (130 ಕಿಲೋಮೀಟರ್) ದೂರದಲ್ಲಿದೆ.

ಅಲಾಸ್ಕಾ-ಕೆನಡಾದ ಯುಕಾನ್ ಪ್ರದೇಶದಲ್ಲಿ ಪ್ರಭಲ ಭೂಕಂಪ Read More

ಶ್ರೀಲಂಕಾದಲ್ಲಿ ಭಾರೀ ಮಳೆ;ಭೂಕುಸಿತ-ಸಾವಿನ ಸಂಖ್ಯೆ 607ಕ್ಕೆ ಏರಿಕೆ

ಕೊಲೊಂಬೊ: ಈಗಾಗಲೇ ಭಾರಿ ಮಳೆ ಪ್ರವಾಹ ಮತ್ತು ಭೂ ಕುಸಿತಕ್ಕೆ ನಲುಗಿರುವ ಶ್ರೀಲಂಕಾದಲ್ಲಿ ಮತ್ತೆ ಬಾರಿ ಮಳೆಯಾಗಿದ್ದು, ಭಾರೀ ಭೂಕುಸಿತವಾಗಿದೆ.

ದಿತ್ವಾ ಚಂಡಮಾರುತದಿಂದ ಉಂಟಾದ ವಿಕೋಪಕ್ಕೆ ನಲುಗಿರುವ ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 607ಕ್ಕೆ ಏರಿದೆ.
ಭಾರಿ ಮಳೆಯಿಂದಾಗಿ ಬೆಟ್ಟಗಳು ಮತ್ತಷ್ಟು ನೀರಿನಿಂದ ಆವೃತ್ತವಾಗಿ ಅಸ್ಥಿರಗೊಳ್ಳಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಕಳೆದ 24 ಗಂಟೆಗಳಿಂದ ಸುಮಾರು 150ಮಿಲಿ ಮೀಟರ್​ಗಿಂತ ಹೆಚ್ಚಿನ ಮಳೆಯಾಗಿದ್ದು, ಇದು ಹೀಗೇ ಮುಂದುವರಿದರೆ, ಭೂ ಕುಸಿತ‌ ಹೆಚ್ಚಾಗಲಿದೆ.
ಈ ಪ್ರಕೃತಿ ವಿಕೋಪದಿಂದ 607 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ದೃಢಪಡಿಸಿದೆ. ಈ ಹಿಂದೆ ಲೆಕ್ಕಕ್ಕೆ ಸಿಗದ ಅನೇಕರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ, ಆದರೆ ಸಂತ್ರಸ್ತರ ಸಂಖ್ಯೆ ಎರಡು ಮಿಲಿಯನ್‌ಗಿಂತಲೂ ಹೆಚ್ಚಾಗಿದೆ.
ದಾಖಲೆಯ ಮಳೆಯಿಂದಾಗಿ ಪ್ರವಾಹ ಮತ್ತು ಮಾರಕ ಭೂಕುಸಿತಗಳು ಸಂಭವಿಸಿವೆ. ಈ ಪ್ರಕೃತಿ ವಿಕೋಪವು ಇತಿಹಾಸದಲ್ಲೇ ಅತ್ಯಂತ ಸವಾಲಿನ ನೈಸರ್ಗಿಕ ವಿಕೋಪ ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ತಿಳಿಸಿದ್ದಾರೆ.
ಶ್ರೀಲಂಕಾದ ಸೇನೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆಗೆ ಸಹಾಯ ಮಾಡಲು ಸಾವಿರಾರು ಸೈನಿಕರನ್ನು ನಿಯೋಜಿಸಿದೆ.

ಸಂತ್ರಸ್ತರಿಗೆ ಮನೆಗಳನ್ನು ಪುನರ್ನಿರ್ಮಿಸಲು ಮತ್ತು ಜೀವನೋಪಾಯವನ್ನು ಕಾಪಾಡಿಕೊಳ್ಳಲು ಉದಾರ ಪರಿಹಾರವನ್ನು ನೀಡಲು ದಿಸಾನಾಯಕೆ ಹಲವು ಕ್ರಮಗಳನ್ನು ಘೋಷಿಸಿದ್ದಾರೆ.

ಅವಘಡದಲ್ಲಿ ಸಿಲುಕಿಕೊಂಡಿದ್ದ ಸುಮಾರು 300 ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ಶ್ರೀಲಂಕಾದಲ್ಲಿ ಭಾರೀ ಮಳೆ;ಭೂಕುಸಿತ-ಸಾವಿನ ಸಂಖ್ಯೆ 607ಕ್ಕೆ ಏರಿಕೆ Read More