ಇರಾನ್‌ನ ರಾಜೇ ಬಂದರಿನಲ್ಲಿ ಸ್ಪೋಟ:5 ಮಂದಿ ಸಾವು:500 ಕ್ಕೂ ಹೆಚ್ಚು ಮಂದಿಗೆ‌ ಗಾಯ

ಇರಾನ್​; ದಕ್ಷಿಣ ಇರಾನ್‌ನ ಬಂದರಿನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಹಠಾತ್ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆಕಾಶದೆತ್ತರಕ್ಕೆ ಚುಮ್ಮಿತು ಯಾರು ಏನಾಗಿದ್ದಾರೆ ಎಲ್ಲಿದ್ದಾರೆ ಎಂಬುದು ಕಾಣದಂತಾಗಿತ್ತು, ಅಬ್ಬಾಸ್ ನಗರದ ಹೊರಗಿನ ರಾಜೇ ಬಂದರಿನಲ್ಲಿ ಶನಿವಾರ ಈ ಸ್ಫೋಟ ಸಂಭವಿಸಿದೆ.

ರಾಜೇ ಬಂದರಿನಲ್ಲಿ ಹಲವಾರು ಕಂಟೇನರ್‌ಗಳಲ್ಲಿ ಸ್ಫೋಟ ಸಂಭವಿಸಿದೆ,
ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿ ಮೆಹರ್ದಾದ್ ಹಸನ್ಜಾದೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು,ರಾಜೇ ಬಂದರಿನಲ್ಲಿ ಸಂಗ್ರಹಿಸಲಾದ ಕೆಲವು ಪಾತ್ರೆಗಳು ಸ್ಫೋಟಗೊಂಡಾಗ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.

ಸ್ಫೋಟದ ತೀವ್ರತೆಗೆ ಘಟನಾ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕಟ್ಟಡಗಳ ಕಿಟಕಿಗಳು ಒಡೆದು ಹೋಗಿವೆ.

ರಾಜೇ ಬಂದರು ಮುಖ್ಯವಾಗಿ ಕಂಟೇನರ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ವಾರ್ಷಿಕವಾಗಿ 80 ಮಿಲಿಯನ್ ಟನ್ (72.5 ಮಿಲಿಯನ್ ಮೆಟ್ರಿಕ್ ಟನ್) ಸರಕುಗಳನ್ನು ರಫ್ತು ಮಾಡಲಾಗುತ್ತದೆ ಮತ್ತು ಆಮದು ಮಾಡಿಕೊಳ್ಳಲಾಗುತ್ತದೆ.

ಇರಾನ್‌ನ ರಾಜೇ ಬಂದರಿನಲ್ಲಿ ಸ್ಪೋಟ:5 ಮಂದಿ ಸಾವು:500 ಕ್ಕೂ ಹೆಚ್ಚು ಮಂದಿಗೆ‌ ಗಾಯ Read More

ಬಲೂಚ್ ಲಿಬರೇಶನ್ ಆರ್ಮಿ ದಾಳಿ:ಪಾಕ್ ಸೇನಾ ಬೆಂಗಾವಲು ಪಡೆಯ 10 ಮಂದಿ ಸಾವು

ಇಸ್ಲಾಮಾಬಾದ್‌: ಬಲೂಚಿಸ್ತಾನದ ಕ್ವೆಟ್ಟಾ ಬಳಿಯ ಮಾರ್ಗತ್ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲೆ ಬಲೂಚ್ ಲಿಬರೇಶನ್ ಆರ್ಮಿ ದಾಳಿ ನಡೆಸಿದ್ದು, ಪಾಕ್ ಸೇನೆಯ 10 ಸಿಬ್ಬಂದಿಯನ್ನು ಹತ್ಯೆ ಮಾಡಿದೆ.

ಬಲೂಚ್ ದಂಗೆಕೋರರಿಂದ ಪಾಕ್ ಸೇನೆಯ ಸುಬೇದಾರ್ ಶೆಹಜಾದ್ ಅಮೀನ್, ನಯಬ್ ಸುಬೇದಾರ್ ಅಬ್ಬಾಸ್, ಸಿಪಾಯಿ ಖಲೀಲ್, ಸಿಪಾಯಿ ಜಾಹಿದ್, ಸಿಪಾಯಿ ಖುರ್ರಂ ಮತ್ತು ಇತರರು ಹತ್ಯೆಗೀಡಾಗಿದ್ದಾರೆ.

ರಿಮೋಟ್-ನಿಯಂತ್ರಿತ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಈ ದಾಳಿ ನಡೆಸಲಾಗಿದ್ದು, ಆಕ್ರಮಿತ ಪಾಕಿಸ್ತಾನಿ ಸೇನೆಯ 10 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಗುಂಪಿನ ವಕ್ತಾರ ಜೀಯಂಡ್ ಬಲೂಚ್ ಹೇಳಿಕೆ ನೀಡಿದ್ದಾರೆ.

ಕ್ವೆಟ್ಟಾದ ಉಪ ನಗರ ಮಾರ್ಗತ್‌ನಲ್ಲಿ ಬಲೂಚ್ ಲಿಬರೇಶನ್ ಆರ್ಮಿ ಸ್ವಾತಂತ್ರ‍್ಯ ಹೋರಾಟಗಾರರು ಆಕ್ರಮಿತ ಪಾಕಿಸ್ತಾನಿ ಸೇನೆಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ರಿಮೋಟ್ ಕಂಟ್ರೋಲ್ಡ್ ಐಇಡಿ ದಾಳಿ ನಡೆಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಶತ್ರು ವಾಹನವನ್ನು ಸಂಪೂರ್ಣವಾಗಿ ನಾಶಗೊಳಿಸಲಾಗಿದೆ ಅದರಲ್ಲಿದ್ದ ಎಲ್ಲಾ 10 ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಜೀಯಂಡ್ ತಿಳಿಸಿದ್ದಾರೆ.

ಬಲೂಚ್ ಲಿಬರೇಶನ್ ಆರ್ಮಿ ದಾಳಿ:ಪಾಕ್ ಸೇನಾ ಬೆಂಗಾವಲು ಪಡೆಯ 10 ಮಂದಿ ಸಾವು Read More

ಮಾಸ್ಕೋ ಕಾರ್ ಬಾಂಬ್ ಸ್ಪೋಟ:ರಷ್ಯಾದ ಉನ್ನತ ಜನರಲ್ ಸಾವು

ಮಾಸ್ಕೋ: ಮಾಸ್ಕೋ ಬಳಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ರಷ್ಯಾದ ಉನ್ನತ ಜನರಲ್ ಸಾವನ್ನಪ್ಪಿದ್ದಾರೆ.

ರಷ್ಯಾ ವಿದೇಶಾಂಗ ಸಚಿವಾಲಯ ಇದನ್ನು ಭಯೋತ್ಪಾದಕ ಕೃತ್ಯ ಎಂದು ತಿಳಿಸಿದೆ.

ರಕ್ಷಣಾ ಸಚಿವಾಲಯದ ಜನರಲ್ ಸ್ಟಾಫ್‌ನ ಮುಖ್ಯ ಕಾರ್ಯಾಚರಣೆ ನಿರ್ದೇಶನಾಲಯದ ಉಪ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಯಾರೋಸ್ಲಾವ್ ಮೊಸ್ಕಾಲಿಕ್ ಅವರು ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಸ್ಪಷ್ಟಪಡಿಸಿವೆ.

ಸ್ಥಳದಲ್ಲಿ ಸಾಧನದ ತುಣುಕುಗಳು ಕಂಡುಬಂದಿದ್ದು ಅವುಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತನಿಖಾ ಸಮಿತಿಯ ವಕ್ತಾರೆ ಸ್ವೆಟ್ಲಾನಾ ಪೆಟರ್ಂಕೊ ಹೇಳಿದ್ದಾರೆ.

ಉಕ್ರೇನ್​​​​​ ನಲ್ಲಿ ಶಾಂತಿ ಸ್ಥಾಪಿಸಲು ಅಮೆರಿಕ ನೇತೃತ್ವದಲ್ಲಿ ಉಕ್ರೇನ್​ ಹಾಗೂ ರಷ್ಯಾ ಜತೆ ಯುಎಸ್ ರಾಯಭಾರಿ ಸ್ಟೀವ್ ವಿಟ್ಕಾಫ್ ಮಾತುಕತೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ರಷ್ಯಾದ ಈ ಉನ್ನತ ಮಿಲಿಟರಿ ಜನರಲ್​ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದೊಂದು ಭಯೋತ್ಪಾದಕ ಕೃತ್ಯ ಎಂದ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ತಿಳಿಸಿದ್ದಾರೆ.

ಮಾಸ್ಕೋ ಕಾರ್ ಬಾಂಬ್ ಸ್ಪೋಟ:ರಷ್ಯಾದ ಉನ್ನತ ಜನರಲ್ ಸಾವು Read More

ಬಿಎಸ್‌ಎಫ್ ಯೋಧನ ಬಂಧಿಸಿದ ಪಾಕ್

ಪಂಜಾಬ್: ಪಾಕಿಸ್ತಾನದ ಪಂಜಾಬ್ ಗಡಿಯನ್ನು ಆಕಸ್ಮಿಕವಾಗಿ ದಾಟಿದ ಬಿಎಸ್‌ಎಫ್ ಯೋಧರೊಬ್ಬರನ್ನು ಪಾಕಿಸ್ತಾನ ರೇಂಜರ್ಸ್ ಬಂಧಿಸಿದ್ದಾರೆ.

ತಕ್ಷಣ ಬಿಡುಗಡೆಗಾಗಿ ಎರಡು ಪಡೆಗಳ ನಡುವೆ ಧ್ವಜ ಸಭೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ ಪಾಕ್ ವಿರುದ್ಧ ಕೈಗೊಂಡಿದ್ದ ಕ್ರಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಗುರುವಾರ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ.

ವಾಘಾ ಗಡಿ ದಾಟುವಿಕೆಯನ್ನೂ ಮುಚ್ಚಿದೆ. ಭಾರತದೊಂದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿದೆ ಮತ್ತು ಸಿಂಧೂ ಜಲ ಒಪ್ಪಂದದಡಿಯಲ್ಲಿ ಪಾಕಿಸ್ತಾನಕ್ಕೆ ಬಿಡುವ ಉದ್ದೇಶಿತ ನೀರನ್ನು ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿಕೊಂಡಿದೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸಲು ಭಾರತದ ಕ್ರಮಕ್ಕೆ ದೇಶದ ಪ್ರತಿಕ್ರಿಯೆಯನ್ನು ರೂಪಿಸಲು ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಈ ಪ್ರಕಟಣೆಗಳನ್ನು ಮಾಡಲಾಗಿದೆ, ಸಭೆಯಲ್ಲಿ ಪ್ರಮುಖ ಮಂತ್ರಿಗಳು ಮತ್ತು ಮೂರು ಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಇದೀಗ ಆಕಸ್ಮಿಕವಾಗಿ ಪಾಕ್ ಗಡಿ ಪ್ರವೇಶಿಸಿದ ಯೋಧನನ್ನು ಪಾಕಿಸ್ತಾನ ಬಂಧಿಸಿರುವುದು ಆತಂಕಕ್ಕೆ ಕಾರಣವಾಗಿದೆ.ಪಿ.ಕೆ.ಸಿಂಗ್ ಎಂಬ ಯೋಧನನ್ನು ಪಾಕ್ ಹಿಡಿದಿಟ್ಟುಕೊಂಡಿದೆ.

ಪ್ರಧಾನಿ ಮೋದಿ ತಕ್ಷಣ ನಮ್ಮ ಯೋಧನನ್ನು ಬಿಟ್ಟು ಕಳುಹಿಸುವಂತೆ ಪಾಕ್ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.ಏನಾದೀತು ಎಂಬುದನ್ನು ಕಾದು ನೋಡಬೇಕಿದೆ.

ಬಿಎಸ್‌ಎಫ್ ಯೋಧನ ಬಂಧಿಸಿದ ಪಾಕ್ Read More

ಪಹಲ್ಗಾಮ್ ಉಗ್ರರ ದಾಳಿ: ವಿಶ್ವ ನಾಯಕರ ಖಂಡನೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಹಲವು ವಿಶ್ವ ನಾಯಕರು ಭಾರತದ ಪಹಲ್ಗಾಮ್​ ನಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿದ್ದಾರೆ.

ಜತೆಗೆ ಭಯೋತ್ಪಾದನೆಯ ವಿರುದ್ಧ ಭಾರತಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಟ್ರಂಪ್, ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಘೋರ ದಾಳಿಯಾಗಿದ್ದು, ಅಪರಾಧಿಗಳನ್ನು ಹೆಡೆಮುರಿ ಕಟ್ಟಲು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಒಟ್ಟಾಗಿ ನಿಂತಿವೆ ಎಂದಿದ್ದಾರೆ.

ಕಾಶ್ಮೀರದಿಂದ ತೀವ್ರ ಆತಂಕಕಾರಿ ಸುದ್ದಿ ಹೊರಬಂದಿದೆ. 26 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಗಾಯಗೊಂಡವರ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ ‌

ಇನ್ನು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಾಲುದಾರ ಭಾರತದೊಂದಿಗೆ ರಷ್ಯಾ ನಿಲ್ಲಲಿದೆ ಎಂದು ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಘೋಷಿಸಿದ್ದಾರೆ.

ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಪುಟಿನ್, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಭಾರತದ ಪ್ರವಾಸದಲ್ಲಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರಿಗೆ ಸಂತಾಪ ಸೂಚಿಸುತ್ತೇವೆ. ಕೆಲವು ದಿನಗಳಿಂದ ನಾನು ಭಾರತದಲ್ಲೇ ಇದ್ದೇನೆ. ಇಲ್ಲಿನ ಜನರು ಮತ್ತು ನಾಡಿನ ಸೌಂದರ್ಯವನ್ನು ಅನುಭವಿಸುತ್ತಿದ್ದೇನೆ. ಅದರ ನಡುವೆ ಈ ಭಯಾನಕ ದಾಳಿ ನಡೆದಿರುವುದು ಆಘಾತ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ತೀವ್ರ ದುಃಖಿತರಾಗಿದ್ದೇವೆ ಎಂದು ಇಟಲಿ ಪ್ರಧಾನಿ ಮೆಲೋನಿ ಹೇಳಿದ್ದಾರೆ. ಸಂತ್ರಸ್ತ ಕುಟುಂಬಗಳು, ಗಾಯಾಳುಗಳು, ಸರ್ಕಾರ ಮತ್ತು ಇಡೀ ಭಾರತೀಯ ಜನರ ಜೊತೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.

ಯುಎಇ, ಜರ್ಮನಿ, ಶ್ರೀಲಂಕಾ, ವಿಶ್ವಸಂಸ್ಥೆ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಕಾಶ್ಮೀರ ಉಗ್ರರ ದಾಳಿಯನ್ನು ಖಂಡಿಸಿ ಭಾರತದ ಪರ ನಿಲ್ಲುವುದಾಗಿ ಹೇಳಿವೆ.

ಪಹಲ್ಗಾಮ್ ಉಗ್ರರ ದಾಳಿ: ವಿಶ್ವ ನಾಯಕರ ಖಂಡನೆ Read More

ನಾಲ್ಕು ದಶಕಗಳ ಬಳಿಕ ಭಾರತದ ಪ್ರಧಾನಿ ಸೌದಿ ಅರೇಬಿಯಾಗೆ ಭೇಟಿ

ಜೆಡ್ಡಾ: ಸೌದಿ ಅರೇಬಿಯಾ ಮತ್ತು ಭಾರತದ ನಡುವೆ ಸ್ಥಿರತೆ ಮತ್ತು ಸಕಾರಾತ್ಮಕತೆಯು ರಕ್ಷಣಾ ಮತ್ತು ಭದ್ರತಾ ಒಪ್ಪಂದಗಳು ಎರಡು ದೇಶಗಳ ನಡುವಿನ ಪರಸ್ಪರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಇಂದಿನಿಂದ ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಮೋದಿ, ಭಾರತ ಮತ್ತು ಸೌದಿ ಅರೇಬಿಯಾ ಎರಡೂ ದೇಶಗಳು ಶಾಂತಿ ಮತ್ತು ಸ್ಥಿರತೆ ಕಾಪಾಡುವಲ್ಲಿ ಆಸಕ್ತಿ ಹೊಂದಿವೆ ಎಂದು ಹೇಳಿದರು.

ನಾಲ್ಕು ದಶಕಗಳ ಬಳಿಕ ಭಾರತದ ಪ್ರಧಾನಿ ಸೌದಿ ಅರೇಬಿಯಾಗೆ ಭೇಟಿ ನೀಡುತ್ತಿದ್ದು, ಭಾರತ-ಸೌದಿ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಸೌದಿ ಪ್ರವಾಸಕ್ಕೆ ಮುನ್ನ ಮಾತನಾಡಿರುವ ಪ್ರಧಾನಿ ಮೋದಿ, ಭದ್ರತಾ ಸಹಕಾರದಲ್ಲಿ ನಾವು ಸ್ಥಿರವಾದ ಪ್ರಗತಿಯನ್ನು ಕಂಡಿದ್ದು, ಇದರಲ್ಲಿ ಭಯೋತ್ಪಾದಕ ನಿಗ್ರಹ, ಭಯೋತ್ಪಾದಕರಿಗೆ ಹಣಕಾಸು ತಡೆ ಮತ್ತು ಮಾದಕವಸ್ತು ಕಳ್ಳಸಾಗಣೆಯನ್ನು ತಡೆಯನ್ನು ಹೊಂದಿದ್ದೇವೆ. ಸೈಬರ್​ ಸೆಕ್ಯೂರಿಟಿಯಲ್ಲಿ ಸಹಕಾರದಲ್ಲಿ ಅನ್ವೇಷಿಸುತ್ತಿದ್ದೇವೆ. ಕಳೆದ ವರ್ಷ ನಾವು ಮೊದಲ ಬಾರಿಗೆ ನಡೆಸಿದ ಭೂ ಪಡೆಗಳ ನಡುವಿನ ಜಂಟಿ ಕಸರತ್ತಿನಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.

ಕಳೆದೊಂದು ದಶಕದಿಂದ ರಕ್ಷಣಾ ಉತ್ಪಾದನೆಯಲ್ಲಿ ಭಾರತ ಆಳವಾದ ಮಾರ್ಗ ಅನುಸರಿಸಿದ್ದು, ಇಂದು ಭಾರತ ಗುಣಮಟ್ಟದ ಮದ್ದುಗುಂಡುಗಳು, ಸಣ್ಣ ಶಸ್ತ್ರಾಸ್ತ್ರಗಳು, ಟ್ಯಾಂಕ್‌ಗಳು, ಶಸ್ತ್ರಸಜ್ಜಿತ ವಾಹಕಗಳನ್ನು ತಯಾರಿಸುವ ಮಿಲಿಟರಿ ಕೈಗಾರಿಕಾ ಸಂಕೀರ್ಣವನ್ನು ಹೊಂದಿದೆ. ವಾಯುಪಡೆಗಾಗಿ ಡ್ರೋನ್‌ಗಳು, ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಮತ್ತು ಫೈಟರ್ ಜೆಟ್‌ಗಳನ್ನು ನಿರ್ಮಿಸುತ್ತಿದ್ದೇವೆ. ನೌಕಾಪಡೆಗಾಗಿ ಗಸ್ತು ದೋಣಿಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನವಾಹಕ ನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಈ ಮೂಲಕ ಕೇವಲ ದೇಶಕ್ಕೆ ಮಾತ್ರವಲ್ಲದೇ ಜಗತ್ತಿನೆಲ್ಲೆಡೆ 100 ದೇಶಗಳಿಗೆ ರಕ್ಷಣಾ ಸಾಧನಗಳನ್ನು ಪೂರೈಸುತ್ತಿದ್ದೇವೆ.

ಇದೀಗ ಸೌದಿ ಅರೇಬಿಯಾಗೆ ಕೆಲವು ರಕ್ಷಣಾ ಸಾಧನಗಳನ್ನು ಪೂರೈಸುತ್ತಿರುವುದು ಸಂತಸ ತಂದಿದೆ. ಖಾಸಗಿ ವಲಯದ ಸಂಬಂಧವನ್ನು ಎರಡೂ ದೇಶಗಳು ಬೆಂಬಲಿಸುತ್ತವೆ. ಖಾಸಗಿ ಹೂಡಿಕೆಗೆ ಮುಕ್ತವಾಗಿರುವ ಭಾರತದ ರಕ್ಷಣಾ ಉತ್ಪಾದನಾ ವಲಯದಲ್ಲಿ ಸೌದಿ ಹೂಡಿಕೆಯನ್ನು ನಾವು ಸ್ವಾಗತಿಸುತ್ತೇವೆ. ಭಾರತ ಇದೀಗ ಸೌದಿ ಜೊತೆಯಲ್ಲಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್​​ನಲ್ಲಿ ಜಂಟಿ ಯೋಜನೆ ಆವಿಷ್ಕರಿಸುತ್ತಿದೆ ಎಂದರು.

ಆರ್ಥಿಕ ಸಹಭಾಗಿತ್ವದಲ್ಲಿ ಶಕ್ತಿ ಪ್ರಮುಖ ಸ್ತಂಭವಾಗಿದೆ. ಸೌದಿ ಅರೇಬಿಯಾ ನಮಗೆ ಬಲವಾದ ಮತ್ತು ರಿಯಾಯಿತಿ ಶಕ್ತಿ ಭಾಗಿದಾರ ದೇಶವಾಗಿದೆ. ಭಾರತಕ್ಕೆ ಕಚ್ಛಾ ಮತ್ತು ಇತರೆ ಪೆಟ್ರೋಲಿಯಂ ಉತ್ಪನ್ನವನ್ನು ಪೂರೈಕೆ ಮಾಡುತ್ತಿರುವ ಪ್ರಮುಖ ದೇಶದಲ್ಲಿ ಒಂದಾಗಿದೆ. ಭಾರತವೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂದರೆ, ನಮ್ಮ ಶಕ್ತಿ ಪೂರೈಕೆ ನಿರಂತವಾಗಿ ಬೆಳವಣಿಗೆ ಹೊಂದಬೇಕು. ಶಕ್ತಿ ಭದ್ರತೆಯನ್ನು ಸೌದಿ ಅರೇಬಿಯಾ ನಮ್ಮ ಆತ್ಮೀಯ ಸಹಭಾಗಿತ್ವ ದೇಶವಾಗಿದ್ದು, ಕೇವಲ ಕೊಳ್ಳುವಿಕೆ- ಮಾರಾಟದ ಸಂಬಂಧಕ್ಕೆ ಮಾತ್ರ ಸೀಮಿತವಾಗದೇ ನಾವು ತಂತ್ರಗಾರಿಕೆ ಭಾಗಿತ್ವಕ್ಕೆ ಒಪ್ಪಿಗೆ ಸೂಚಿಸಿದ್ದೇವೆ. ರಿಫೈನರಿಸ್​ ಮತ್ತು ಪೆಟ್ರೋಕೆಮಿಕಲ್ಸ್​ನಲ್ಲಿ ಜಂಟಿ ಯೋಜನೆ ಅವಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾಲ್ಕು ದಶಕಗಳ ಬಳಿಕ ಭಾರತದ ಪ್ರಧಾನಿ ಸೌದಿ ಅರೇಬಿಯಾಗೆ ಭೇಟಿ Read More

ಪೋಪ್ ಫ್ರಾನ್ಸಿಸ್ ವಿಧಿವಶ

ವ್ಯಾಟಿಕನ್​ ಸಿಟಿ(ಯುರೋಪ್): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಅವರು ವಿಧಿವಶರಾಗಿದ್ದಾರೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ವ್ಯಾಟಿಕನ್ ಸಿಟಿಯ ಕಾರ್ಡಿನಲ್ ಕೆವಿನ್ ಫಾರೆಲ್ ಅವರು,ಆತ್ಮೀಯ ಸಹೋದರ, ಸಹೋದರಿಯರೇ, ಪೋಪ್​ ಫ್ರಾನ್ಸಿಸ್ ಅವರು ಮೃತಪಟ್ಟಿದ್ದಾರೆ ಎಂಬುದನ್ನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ. ಸೋಮವಾರ ಬೆಳಿಗ್ಗೆ 7.35 ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ.

ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿದ್ದ ಪೋಪ್ ಅವರು ಬಡವರು, ದೀನದಲಿತರಿಗಾಗಿ ಶ್ರಮಿಸಿದವರು.ಅವರಿಗೆ 88 ವರ್ಷಗಳಾಗಿತ್ತು.

ಇತ್ತೀಚೆಗೆ ಪೋಪ್ ಅವರು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದ ಬಗ್ಗೆ ಭಕ್ತರಲ್ಲಿ ತೀವ್ರ ಕಳವಳ ಮೂಡಿಸಿತ್ತು.

ಫೆಬ್ರವರಿ 14ರಂದು, ಪೋಪ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರಿಗೆ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ರಕ್ತಹೀನತೆಯಿಂದಲೂ ಬಳಲುತ್ತಿದ್ದ ಅವರಿಗೆ ರಕ್ತ ವರ್ಗಾವಣೆ ಮಾಡಲಾಗಿತ್ತು.

ಫೆಬ್ರವರಿ 22ರಂದು, ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರಿಗೆ ಕೃತಕ ಆಕ್ಸಿಜನ್​ ಅಳವಡಿಸಲಾಗಿತ್ತು. ಶ್ವಾಸಕೋಶ ಸಮಸ್ಯೆ ಮತ್ತು ಮೂತ್ರಪಿಂಡ ವೈಫಲ್ಯ ಕೂಡಾ ಉಂಟಾಗಿತ್ತು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ತಿಂಗಳುಗಳ ಕಾಲ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗಿತ್ತು.

16ನೇ ಬೆನೆಡಿಕ್ಟ್ ಅವರ ರಾಜೀನಾಮೆ ಬಳಿಕ ಪೋಪ್ ಫ್ರಾನ್ಸಿಸ್​ ಅವರು 2013ರಲ್ಲಿ ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿದ್ದರು. ಅವರ ಅಗಲಿಕೆಯಿಂದ ಹೊಸ ಪೋಪ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ.

ಪೋಪ್ ಫ್ರಾನ್ಸಿಸ್ ವಿಧಿವಶ Read More

ಟ್ರಂಪ್ ನೀತಿ ವಿರೋಧಿಸಿ ಭಾರಿ ಪ್ರತಿಭಟನೆ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದಾದ್ಯಂತ ಭಾರೀ ಪ್ರತಿಭಟನೆ ನಡೆಯಿತು.

ದೊಡ್ಡ ಮತ್ತು ಸಣ್ಣ ಸಮುದಾಯಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ಟ್ರಂಪ್ ನೀತಿ ದೇಶದ ಪ್ರಜಾಪ್ರಭುತ್ವದ ಆದರ್ಶಗಳಿಗೆ ಅಪಾಯ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ,ನಂತರ ಶ್ವೇತಭವನದ ಮುಂದೆ ರ್‍ಯಾಲಿ ನಡೆಸಲಾಯಿತು.

ಅಮೆರಿಕದ್ಯಂತ ಸುಮಾರು 400 ಪ್ರತಿಭಟನಾ
ರ್‍ಯಾಲಿಗಳನ್ನು ಯೋಜಿಸಲಾಗಿತ್ತು. ಪ್ರತಿಭಟನಾಕಾರರು ಫೆಡರಲ್ ಉದ್ಯೋಗ ಕಡಿತ, ಆರ್ಥಿಕ ನೀತಿಗಳು ಮತ್ತು ನಾಗರಿಕ ಸ್ವಾತಂತ್ರ್ಯ ಉಲ್ಲಂಘನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಪೋರ್ಟ್‌ಲ್ಯಾಂಡ್, ಓರೆಗಾನ್‌ಗಳ ಮುಖಾಂತರ ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿದರು, ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನೂರಾರು ಜನರು ಟ್ರಂಪ್‌ ಅವರನ್ನು ಪದಚ್ಯುತಿಗೊಳಿಸಿ, ಇಲ್ಲವೆ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಎಂದು ಸಮುದ್ರದಂಡೆಯ ಮರಳಿನ ಮೇಲೆ ಬರೆದು ಆಕ್ರೋಶದಿಂದ ಆಗ್ರಹಿಸಿದರು.

ಟ್ರಂಪ್ ನೀತಿ ವಿರೋಧಿಸಿ ಭಾರಿ ಪ್ರತಿಭಟನೆ Read More

ವಿಮಾನ ಹೈಜಾಕ್ ಮಾಡಲು ಬಂದು ಬಲಿಯಾದ ದಾಳಿಕೋರ

ಬೆಲೀಜ್: ಚಾಕು ತೋರಿಸಿ ವಿಮಾನವನ್ನು ಹೈಜಾಕ್ ಮಾಡಲು ಬಂದ ವ್ಯಕ್ತಿ ಪ್ರಯಾಣಿಕರೊಬ್ಬರು ಹಾರುಸಿದ ಗುಂಡಿಗೆ ಬಲಯಾದ ಘಟನೆ ಬೆಲೀಜ್​ನಲ್ಲಿ ನಡೆದಿದೆ.

ಅಮೆರಿಕದ ಪ್ರಜೆಯೊಬ್ಬ ಚಾಕು ತೋರಿಸಿ ವಿಮಾನ ಹೈಜಾಕ್ ಮಾಡಲು ಯತ್ನಿಸಿದ್ದ,ತಕ್ಷಣ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಪರವಾನಗಿ ಹೊಂದಿರುವ ಪಿಸ್ತೂಲಿನಿಂದ ಆರೋಪಿಗೆ ಗುಂಡು ಹಾರಿಸಿದ್ದಾರೆ.ಹಾಗಾಗಿ ಆತ ಅಲ್ಲೇ ಸಾವನ್ನಪ್ಪಿದ್ದಾನೆ.

ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಸ್ಯಾನ್ ಪೆಡ್ರೊಗೆ ತೆರಳುತ್ತಿದ್ದ ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗ ವ್ಯಕ್ತಿ ಪ್ರಯಾಣಿಕರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ.

ಆಗ ಪ್ರಯಾಣಿಕರು ಆತಂಕದಿಂದ ಕಿರುಚಾಡತೊಡಗಿದ್ದಾರೆ.ತಕ್ಷಣ ಪ್ರಯಾಣಿಕರೊಬ್ಬರು ಎಚ್ಚತ್ತು ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ದಾಳಿಕೋರನಿಗೆ‌ ಗುಂಡು ಹಾರಿಸಿದ್ದಾರೆ. ಆತ ಅಲ್ಲೇ ಮೃತಪಟ್ಟಿದ್ದಾನೆ.ಸಧ್ಯ ಬಚಾವಾದೆವಲ್ಲ ಎಂದು ಸಹ ಪ್ರಯಾಣಿಕರು ಗುಂಡು ಹಾರಿಸಿದಾತನಿಗೆ ಧನ್ಯವಾದ ಹೇಳಿದ್ದಾರೆ.

ಬೆಲೀಜ್ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ಅವರ ಪ್ರಕಾರ, ದಾಳಿಕೋರನನ್ನು ಅಮೆರಿಕದ ಪ್ರಜೆ ಅಕಿನ್ಯೆಲಾ ಸಾವಾ ಟೇಲರ್ ಎಂದು ಗುರುತಿಸಲಾಗಿದೆ ಎಂದು ಬೆಲೀಜ್ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ತಿಳಿಸಿದ್ದಾರೆ.ಜತೆಗೆ ಗುಂಡು ಹಾರಿಸಿದ ಪ್ರಯಾಣಿಕನನ್ನು ಹೊಗಳಿದ್ದಾರೆ.

ವಿಮಾನ ಹೈಜಾಕ್ ಮಾಡಲು ಬಂದು ಬಲಿಯಾದ ದಾಳಿಕೋರ Read More

ಹಮಾಸ್‌ನ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ ಪುಟಿನ್

ಮಾಸ್ಕೊ: ಇಸ್ರೇಲ್ ವಿರುದ್ಧ 2023ರ ಅಕ್ಟೋಬರ್‌ನಲ್ಲಿ ಆರಂಭವಾದ ಕದನದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ರಷ್ಯಾದ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದ್ದು, ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಧನ್ಯವಾದ ಸಲ್ಲಿಸಿದ್ದಾರೆ.

ಬಿಡುಗಡೆಗೊಂಡ ರಷ್ಯಾ ನಾಗರಿಕರಾದ ಅಲೆಕ್ಸಾಂಡರ್ ಟ್ರುಫಾನೋವ್ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರನ್ನು ಪುಟಿನ್ ಬರಮಾಡಿಕೊಂಡು ಅಭಿನಂದಿಸಿದರು.

ಪ್ಯಾಲೆಸ್ಟೀನ್ ಜನರೊಂದಿಗೆ ರಷ್ಯಾ ಸುದೀರ್ಘ ಕಾಲ ಹೊಂದಿರುವ ಸೌಹಾರ್ದ ಸಂಬಂಧ ಹೊಂದಿರುವುದರಿಂದ ನೀವು ಇಲ್ಲಿಗೆ ಸುರಕ್ಷಿತವಾಗಿ ಮರಳಿದ್ದೀರಿ, ಮಾನವೀಯ ನೆಲೆಗಟ್ಟಿನಲ್ಲಿ ರಷ್ಯಾದ ನಾಗರಿಕರನ್ನು ಬಿಡುಗಡೆ ಮಾಡಿರುವ ಹಮಾಸ್‌ನ ನಾಯಕತ್ವಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪುಟಿನ್ ಹೇಳಿದ್ದಾರೆ.

2023ರ ಅ. 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ನಂತರ ಆರಂಭಗೊಂಡ ಕದನದಲ್ಲಿ ಈವರೆಗೂ ಸುಮಾರು 1,200 ಜನ ಮೃತರಾಗಿದ್ದು, 251 ಮಂದಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ.

ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ 50 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕುಟುಂಬದ ಹಿರಿಯ ವೈಟಲಿ ಟ್ರುಫನೋವ್‌ ದಾಳಿಯಲ್ಲಿ ಮೃತಪಟ್ಟಿದ್ದರು. ಅಪಹರಣಗೊಂಡು 53 ದಿನಗಳ ನಂತರ ತಾಯಿ, ಅಜ್ಜಿ ಹಾಗೂ ಗೆಳತಿಯನ್ನು ಬಿಡುಗಡೆ ಮಾಡಲಾಗಿತ್ತು.

ಅಲೆಕ್ಸಾಂಡರ್ ಅವರು 500 ದಿನಗಳ ಕಾಲ ಹಮಾಸ್ ಒತ್ತೆಯಾಳಾಗಿದ್ದರು. 2025ರ ಫೆ. 15ರಂದು ಘೋಷಿಸಲಾದ ಕದನವಿರಾಮದಲ್ಲಿ ಅವರು ಬಿಡುಗಡೆಗೊಂಡಿದ್ದರು.
ಅವರು ಏ.16 ರಂದು ರಾತ್ರಿ ರಷ್ಯಾ ತಲುಪಿದ್ದಾರೆ.

ಇಸ್ರೇಲ್‌ನಲ್ಲಿ ರಷ್ಯಾದ ಪೌರತ್ವ ಹೊಂದಿರುವವರು ನೆಲೆಸಿದ್ದಾರೆ. ಒತ್ತೆಯಾಳಾಗಿರುವ ಉಳಿದವರ ಬಿಡುಗಡೆಗೆ ನೆರವಾಗುವುದಾಗಿ ಪುಟಿನ್ ಭರವಸೆ ನೀಡಿದ್ದಾರೆ.

ಹಮಾಸ್‌ನ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ ಪುಟಿನ್ Read More