ಕೈರೊ: ಗಾಜಾದಲ್ಲಿ ಬುಧವಾರ ಇಸ್ರೇಲ್ ನಡೆಸಿದ ಗುಂಡಿನ ದಾಳಿ ಮತ್ತು ವೈಮಾನಿಕ ದಾಳಿಯಲ್ಲಿ ಸುಮಾರು 41 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.
ಇದನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನೆಟ್ಜರೀಮ್ನಲ್ಲಿರುವ ಗಾಜಾ ಹ್ಯುಮ್ಯಾನಿಟೇರಿಯನ್ ಫೌಂಡೇಶನ್ ಬಳಿ ಇಸ್ರೇಲ್ ತೀವ್ರ ದಾಳಿ ನಡೆಸಿದೆ. ಈ ವೇಳೆ ಕನಿಷ್ಠ 25 ಜನರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಶಿಫಾ ಮತ್ತು ಅಲ್-ಕುದ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಫಾದಲ್ಲಿರುವ ಜಿಎಚ್ಎಫ್ ಬಳಿ ಇಸ್ರೇಲ್ ದಾಳಿಗೆ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ ಎಂದು ಗಾಜಾ ಪಟ್ಟಿಯಲ್ಲಿರುವ ಖಾನ್ ಯೂನಿಸ್ ನಾಸರ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಖಾನ್ ಯೂನಿಸ್ ಬಳಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಇಸ್ರೇಲ್ ದಾಳಿಗೆ ಬುಧವಾರ 41 ಜನರು ಮೃತಪಟ್ಟಂತಾಗಿದೆ.
ಕೀನ್ಯಾ: ಕೀನ್ಯಾದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಆರು ಭಾರತೀಯರು ಸಾವನ್ನಪ್ಪಿದ್ದಾರೆ.
ಕೀನ್ಯಾದಲ್ಲಿ ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಮೃತರೆಲ್ಲರೂ ಕತಾರ್ ನಲ್ಲಿ ನೆಲೆಸಿದ್ದ ಭಾರತೀಯ ಮೂಲದವರು ಎಂದು ಗುರುತಿಸಲಾಗಿದೆ.
ಐವರು ಕೇರಳದವರೆಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಮಾವೆಲಿಕ್ಕರ ಮೂಲದ ಗೀತಾ ಶೋಜಿ ಐಸಾಕ್ (58), ಜಸ್ನಾ ಕುಟ್ಟಿಕ್ಕಟ್ಟುಚಲಿಲ್ (29), ರುಹಿ ಮೆಹ್ರಿ ಮೊಹಮ್ಮದ್ (18 ತಿಂಗಳ), ಒಟ್ಟಪಾಲಂ ಮೂಲದ ರಿಯಾ ಎನ್ (41) ಮತ್ತು ಟೈರಾ ರೊಡ್ರಿಗಸ್ (8) ಮೃತಪಟ್ಟವರೆಂದು ಗುರುತಿಸಲಾಗಿದೆ, ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ.
ನ್ಯಾಂಡರುವಾ ಕೌಂಟಿಯ ಓಲ್ ಜೊರೊರೊಕ್-ನಕುರು ರಸ್ತೆಯಲ್ಲಿರುವ ಗಿಚಾಕಾದಲ್ಲಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ 27 ಮಂದಿ ಗಾಯಗೊಂಡಿದ್ದಾರೆ. ಪ್ರವಾಸಿಗರು ನ್ಯಾಹುರುರುವಿನ ಪನಾರಿ ರೆಸಾರ್ಟ್ಗೆ ತೆರಳುತ್ತಿದ್ದಾಗ ಬಸ್ ಕಂದಕಕ್ಕೆ ಬಿದ್ದಿದೆ.
ಕಡಿದಾದ ಇಳಿಜಾರು ಪ್ರದೇಶದಲ್ಲಿ ತಿರುವು ಪಡೆಯಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್ ನಲ್ಲಿ 28 ಪ್ರವಾಸಿಗರು, ಮೂವರು ಸ್ಥಳೀಯ ಮಾರ್ಗದರ್ಶಕರು ಇದ್ದರು
ಕೊಲಂಬಿಯಾ: ಕೊಲಂಬಿಯಾದ ಬೊಗೋಟಾದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದ ವೇಳೆ ಕೊಲಂಬಿಯಾ ಬಲಪಂಥೀಯ ವಿರೋಧ ಪಕ್ಷದ ಸೆನೆಟರ್ ಮತ್ತು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಮಿಗುಯೆಲ್ ಉರಿಬೆ ಮೇಲೆ ಗುಂಡಿನ ದಾಳಿ ನಡೆದಿದೆ.
ಮಿಗುಯೆಲ್ ಉರಿಬೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2026ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ 39 ವರ್ಷದ ಉರಿಬೆ, ಮಾಜಿ ಕೊಲಂಬಿಯಾದ ಅಧ್ಯಕ್ಷ ಅಲ್ವಾರೊ ಉರಿಬೆ ಸ್ಥಾಪಿಸಿದ ಡೆಮಾಕ್ರಟಿಕ್ ಸೆಂಟರ್ ಪಕ್ಷದ ಸದಸ್ಯರಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ಮಿಗುಯೆಲ್ ಉರಿಬೆ ಹಲವಾರು ಜನರ ಮುಂದೆ ಭಾಷಣ ಮಾಡುತ್ತಿರುವುದು, ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಗುಂಡು ಹಾರಿರುವುದು,ಕೂಗಾಟ,ಚೀರಾಟ ಕೇಳುತ್ತದೆ.
ರಕ್ತದಿಂದ ತೋಯ್ದು ಬಿಳಿ ಕಾರಿನ ಹುಡ್ಗೆ ಬಿದ್ದುಕೊಂಡಿರುವಂತೆ ಉರುಬೆ ಕಾಣುತ್ತಾರೆ, ಗುಂಪೊಂದು ಅವರನ್ನು ಎತ್ತಿ ಹಿಡಿಯಲು ಪ್ರಯತ್ನಿಸಿದೆ.ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಯಿತು.ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಂಡು ಹಾರಿಸಿದ ಶಂಕಿತ ವ್ಯಕ್ತಿಯ ಹದಿಹರೆಯದವನಾಗಿದ್ದು, ಆತನನ್ನು ಬಂಧಿಸಲಾಗಿದೆ.
ನೈಜೀರಿಯಾ: ನೈಜೀರಿಯಾದಲ್ಲಿ ಭೀಕರ ಪ್ರವಾಹ ಸಂಭವಿಸಿ ಸಾವನ್ನಪ್ಪಿದವರ ಸಂಖ್ಯೆ 155 ಕ್ಕೆ ಏರಿದ್ದು,ಇನ್ನೂ ನೂರಾರು ಮಂದಿ ಕಣ್ಮರೆಯಾಗಿದ್ದಾರೆ.
ನೈಜರ್ ರಾಜ್ಯದ ಮಧ್ಯ ಪಟ್ಟಣವಾದ ಮೊಕ್ವಾದಲ್ಲಿ ಪ್ರವಾಹ ನಿನ್ನೆ ಬೆಳಿಗ್ಗೆಯವರೆಗೂ ಮುಂದುವರೆಯಿತು. ರಕ್ಷಣಾ ಕಾರ್ಯಕರ್ತರು ಮೃತದೇಹಗಳನ್ನು ಮಣ್ಣು ಮತ್ತು ಅವಶೇಷಗಳಡಿ ಹುಡುಕುತ್ತಿದ್ದಾರೆ.
ಈ ವಾರ ನೈಜೀರಿಯಾದ ನೈಜರ್ ರಾಜ್ಯದಲ್ಲಿ ಪ್ರವಾಹದಿಂದ 151 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರು ಸಮುದಾಯಗಳಲ್ಲಿ ಕನಿಷ್ಠ 500 ಮನೆಗಳು ಕುಸಿದಿವೆ, ಛಾವಣಿಗಳು ಗೋಚರಿಸುತ್ತಿಲ್ಲ, ನಿವಾಸಿಗಳು ಸೊಂಟದಷ್ಟು ನೀರಿನಲ್ಲಿ ಮುಳುಗಿದ್ದಾರೆ.
ಉತ್ತರ ನೈಜೀರಿಯಾದ ಸಮುದಾಯಗಳು ದೀರ್ಘಕಾಲದ ಬರಗಾಲವನ್ನು ಅನುಭವಿಸುತ್ತಿವೆ, ಇದು ಹವಾಮಾನ ಬದಲಾವಣೆ ಮತ್ತು ಅತಿಯಾದ ಮಳೆಯಿಂದಾಗಿ ತೀವ್ರ ಪ್ರವಾಹಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಕೊಲಂಬಿಯಾ: ಪಾಕಿಸ್ತಾನ ತನ್ನ ದೇಶದಲ್ಲಿನ ಭಯೋತ್ಪಾದಕ ನಿರ್ವಾಹಕರನ್ನು ನಿರ್ಮೂಲನೆ ಮಾಡಲು ನಿರ್ಧರಿಸುವತನಕ ಅದರೊಂದಿಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
ವಿದೇಶಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅಂತರರಾಷ್ಟ್ರೀಯ ಸಮುದಾಯಕ್ಕೆ ಈ ರೀತಿಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ವಿವಾದಗಳನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂದು ಭಾರತ ಅರ್ಥಮಾಡಿಕೊಂಡಿದೆ, ಆದರೆ ಹಣೆಯ ಕಡೆಗೆ ಗನ್ ಹಿಡಿದಾಗಲೂ ಭಾರತ ಮಾತುಕತೆಯಲ್ಲಿ ನಂಬಿಕೆ ಇಡುವುದಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.
ಕೊಲಂಬಿಯಾ ಕೌನ್ಸಿಲ್ ಫಾರ್ ಇಂಟರ್ನ್ಯಾಷನಲ್ ರಿಲೇಶನ್ಸ್ನಲ್ಲಿ ಚಿಂತನಾ ನಾಯಕರೊಂದಿಗೆ ನಡೆದ ಚರ್ಚೆಯ ವೇಳೆ ಮಾತನಾಡಿದ ಶಶಿ ತರೂರ್, ಮಹಾತ್ಮಾ ಗಾಂಧಿಯವರು ಸಹ ಶಾಂತಿಯಲ್ಲಿ ನಂಬಿಕೆ ಇಟ್ಟಿದ್ದರು ಆದರೂ, ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು ಎಂದು ಹೇಳಿದ್ದಾರೆ.
ನಮ್ಮ ದೃಷ್ಟಿಕೋನವನ್ನು ನೀವು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ; ಶಾಂತಿಯ ಮಹತ್ವದ ಬಗ್ಗೆ ನಾವು ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿಲ್ಲ. ನಾವು ಮಹಾತ್ಮಾ ಗಾಂಧಿಯವರ ಭೂಮಿಗೆ ಸೇರಿದವರು, ಅವರು ನಮಗೆ ಶಾಂತಿ, ಅಹಿಂಸೆಯ ಮಹತ್ವವನ್ನು ಕಲಿಸಿದ್ದಾರೆ, ಆದರೆ ಅದೇ ಸಮಯದಲ್ಲಿ, ನಮಗೆ, ಶಾಂತಿಯು ಸ್ವಾಭಿಮಾನದೊಂದಿಗೆ ಇರಬೇಕು ಮತ್ತು ಸ್ವಾತಂತ್ರ್ಯ ಭಯ ಮುಕ್ತವಾಗಿರಬೇಕು ಎಂದೂ ಹೇಳಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಮಹಾತ್ಮಾ ಗಾಂಧಿಯವರು ಶಾಂತಿಯ ವ್ಯಕ್ತಿಯಾಗಿದ್ದರು, ಆದರೆ ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನೂ ಮುನ್ನಡೆಸಿದರು ಎಂಬುದನ್ನು ನೆನಪಿಡಿ.
ವಿವಾದಗಳನ್ನು ಸಂಭಾಷಣೆಯ ಮೂಲಕ ಇತ್ಯರ್ಥಪಡಿಸಬೇಕು ಎಂದು ನಾವು ಅರ್ಥಮಾಡಿಕೊಂಡಿದ್ದರೂ, ನಮ್ಮ ಹಣೆಯ ಕಡೆಗೆ ಗುಂಡು ಹಾರಿಸಿದಾಗಲೂ ಮಾತುಕತೆಯಲ್ಲಿ ತೊಡಗಬೇಕು ಎಂಬುದನ್ನು ನಾವು ನಂಬುವುದಿಲ್ಲ ಎಂದು ತರೂರ್ ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅಲ್ಲದೆ ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಪ್ರಾರಂಭವಾದ ಬೆಳವಣಿಗೆಗಳ ಸರಣಿಯನ್ನು ಶಶಿ ತರೂರ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ವಿವರಿಸಿದ್ದಾರೆ.
ಇಸ್ಲಾಮಾಬಾದ್: ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದರಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.
ನಾಲ್ಕು ದೇಶಗಳ ಪ್ರವಾಸದ ವೇಳೆ ಮಾತನಾಡಿರುವ ಅವರು, ಕಾಶ್ಮೀರ, ಭಯೋತ್ಪಾದನೆ, ನೀರು ಮತ್ತು ವ್ಯಾಪಾರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆ ನಡೆಸುವ ಇಚ್ಚೆ ಇದೆ ಎಂದು ಹೇಳಿದ್ದಾರೆ.
ಟರ್ಕಿಯಿಂದ ಇರಾನ್ಗೆ ಬಂದಿಳಿದ ಷರೀಫ್ ಅವರನ್ನು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಸಾದಾಬಾದ್ ಅರಮನೆಯಲ್ಲಿ ಸ್ವಾಗತಿಸಿದರು. ಈ ವೇಳೆ ಪೆಜೆಶ್ಕಿಯಾನ್ ಜೊತೆಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಷರೀಫ್, ಶಾಂತಿಗಾಗಿ ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.
ಕಾಶ್ಮೀರ, ನೀರು ಸೇರಿದಂತೆ ಎಲ್ಲ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ನಾವು ನೆರೆಯ ದೇಶದೊಂದಿಗೆ ವ್ಯಾಪಾರ ಮತ್ತು ಭಯೋತ್ಪಾದನೆ ಎದುರಿಸುವ ಕುರಿತು ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಭಾರತ ಯುದ್ಧವನ್ನು ಆಯ್ಕೆ ಮಾಡಿಕೊಂಡಲ್ಲಿ ಅದನ್ನು ಎದುರಿಸಲೂ ಸಿದ್ಧ ಎಂದು ಕೂಡಾ ಶಹಬಾಜ್ ಹೇಳಿದ್ದಾರೆ.
ಒಂದು ವೇಳೆ ಆಕ್ರಮಣಕಾರಿ ಮಾರ್ಗ ಆರಿಸಿಕೊಂಡರೆ, ನಾವು ನಮ್ಮ ಪ್ರದೇಶವನ್ನು ರಕ್ಷಿಸಿಕೊಳ್ಳುವುದು ಗೊತ್ತಿದೆ,ಅವರು ಶಾಂತಿಯನ್ನು ಸ್ವೀಕರಿಸಿದರೆ, ನಾವು ಪ್ರಾಮಾಣಿಕವಾಗಿ ಶಾಂತಿಯನ್ನು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ಭಾರತದೊಂದಿಗಿನ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ ನಾವು ಗೆದ್ದಿದ್ದೇವೆ ಎಂದು ಶಹಬಾಜ್ ಷರೀಫ್ ಸಮರ್ಥಿಸಿಕೊಂಡಿದ್ದಾರೆ.
ವಾಷಿಂಗ್ಟನ್: ನಮ್ಮ ಮೇಲೆ ದಾಳಿ ನಡೆದರೆ ನಾವು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ಸಾರಲು ನಮ್ಮ ಭಾರತೀಯ ನಿಯೋಗ ಬಂದಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು.
ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಜಾಗತಿಕ ಮಟ್ಟದಲ್ಲಿ ಭಾರತದ ದೃಷ್ಟಿಕೋನವನ್ನು ಮಂಡಿಸಲು ಸರ್ವಪಕ್ಷ ನಿಯೋಗವು ವಿಶ್ವ ಪ್ರವಾಸ ಮಾಡುತ್ತಿದ್ದು, ಶಶಿ ತರೂರ್ ನೇತೃತ್ವದ ನಿಯೋಗವು ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜನರಿಂದ ಸಹಕಾರವನ್ನು ಕೋರಿತು.
ಈ ವೇಳೆ ಮಾತನಾಡಿದ ಶಶಿ ತರೂರ್, ನಮ್ಮ ಮೇಲೆ ದಾಳಿ ನಡೆದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹೆಚ್ಚುತ್ತಿರುವ ಭಯೋತ್ಪಾದನೆಯ ಬೆದರಿಕೆಯ ವಿರುದ್ಧ ಒಗ್ಗಟ್ಟು ಮತ್ತು ಬಲದಿಂದ ನಿಲ್ಲುವಂತೆ ತರೂರ್ ಜಾಗತಿಕವಾಗಿ ಕರೆ ನೀಡಿದರು.
ನಮಗೆ ಪಾಕಿಸ್ತಾನದೊಂದಿಗೆ ಯುದ್ಧದಲ್ಲಿ ಯಾವುದೇ ಆಸಕ್ತಿ ಇಲ್ಲ. ನಮ್ಮ ಆರ್ಥಿಕತೆಯನ್ನು ಬೆಳೆಸಲು ಮತ್ತು ನಮ್ಮ ಜನರನ್ನು 21 ನೇ ಶತಮಾನದ ಜಗತ್ತಿಗೆ ತರಲು ನಾವು ಏಕಾಂಗಿಯಾಗಿರಲು ಬಯಸುತ್ತೇವೆ,ಆದರೆ ನಮ್ಮ ತಂಟೆಗೆ ಬಂದರೆ ಸುಮ್ಮನಿರಲು ಸಾಧ್ಯವೇ ಇಲ್ಲ ಎಂದು ಪಾಕ್ ಗೆ ಸೂಚ್ಯವಾಗಿ ಎಚ್ಚರಿಕೆ ನೀಡಿದರು.
ಶಶಿ ತರೂರ್ ನೇತೃತ್ವದ ನಿಯೋಗವು ದಕ್ಷಿಣ ಅಮೆರಿಕಾದ ದೇಶಗಳಾದ ಗಯಾನಾ, ಪನಾಮ, ಬ್ರೆಜಿಲ್ ಮತ್ತು ಕೊಲಂಬಿಯಾಕ್ಕೂ ಭೇಟಿ ನೀಡಲಿದೆ. ಭಯೋತ್ಪಾದನೆಯ ಪಿಡುಗಿನ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲುವುದು ಎಷ್ಟು ಮುಖ್ಯ ಎಂಬುದನ್ನು ಜಗತ್ತಿಗೆ ವಿವರಿಸಲು ಬಯಸಿದ್ದೇವೆ. 9/11 ರ ನಂತರ ಅಮೆರಿಕ ತನ್ನ ದೃಢಸಂಕಲ್ಪ ತೋರಿಸಿದಂತೆಯೇ, ನಮ್ಮ ದೇಶವೂ ಏಪ್ರಿಲ್ 22 ರಂದು ನಮ್ಮ ಮೇಲೆ ದಾಳಿ ಮಾಡಿದ ದುಷ್ಟ ಶಕ್ತಿಗಳ ವಿರುದ್ಧ ನಿಂತಿದೆ ಎಂದು ತರೂರ್ ಹೇಳಿದರು.
ಈ ಭಯೋತ್ಪಾದಕ ದಾಳಿಯನ್ನು ನಡೆಸಿದವರು ಮತ್ತು ಅವರಿಗೆ ಹಣಕಾಸು ಒದಗಿಸಿದವರು, ತರಬೇತಿ ನೀಡಿದವರು, ಸಿದ್ಧತೆ ನಡೆಸಿದವರು ಮತ್ತು ಹಿಂದೆ ನಿಂತವರು ಪಾಠ ಕಲಿತಿದ್ದಾರೆ ಎಂದು ನಾವು ಭಾವಿಸುತ್ತೇವೆ. ಇದು ಮತ್ತೆ ಸಂಭವಿಸಿದರೆ, ನಾವು ಮೌನವಾಗಿರುವುದಿಲ್ಲ ಎಂದು ಶಶಿ ತರೂರ್ ಕಠಿಣ ಧ್ವನಿಯಲ್ಲಿ ಹೇಳಿದ್ದಾರೆ.
ತರೂರ್ ನೇತೃತ್ವದ ಸರ್ವಪಕ್ಷ ನಿಯೋಗದಲ್ಲಿ ಶಾಂಭವಿ ಚೌಧರಿ (ಲೋಕಜನಶಕ್ತಿ ಪಕ್ಷ-ರಾಮ್ ವಿಲಾಸ್ ಪಾಸ್ವಾನ್), ಸರ್ಫರಾಜ್ ಅಹ್ಮದ್ (ಜಾರ್ಖಂಡ್ ಮುಕ್ತಿ ಮೋರ್ಚಾ), ಜಿಎಂ ಹರೀಶ್ ಬಲಯಾಗಿ (ತೆಲುಗು ದೇಶಂ ಪಕ್ಷ), ಶಶಾಂಕ್ ಮಣಿ ತ್ರಿಪಾಠಿ, ಬಿಜೆಪಿಯಿಂದ ತೇಜಸ್ವಿ ಸೂರ್ಯ, ಭುವನೇಶ್ವರ್, ಭುಬನಲ್ಸ್ವಾರ್ (ಶಿವಸೇನೆ) ಮತ್ತು US ನಲ್ಲಿನ ಮಾಜಿ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಇದ್ದಾರೆ.
ಹೂಸ್ಟನ್ (ಅಮೆರಿಕ): ಭಾರತೀಯ ಮೂಲದ ಪ್ರಾಧ್ಯಾಪಕ ಗಣೇಶ್ ಠಾಕೂರ್ ಅವರನ್ನು ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಎಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತ ಮೂಲದವರು ಎಂಬ ಖ್ಯಾತಿಗೆ ಗಣೇಶ್ ಠಾಕೂರ್ ಪಾತ್ರರಾಗಿದ್ದಾರೆ.
ಯುಎಚ್ನ ಕಲೆನ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಪೆಟ್ರೋಲಿಯಂ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿರುವ ಠಾಕೂರ್ ಅವರು ಫೆಬ್ರವರಿಯಲ್ಲಿ ಈ ಸಂಸ್ಥೆಗೆ ಪ್ರಾಧ್ಯಾಪಕರಾಗಿ ಸೇರಿಕೊಂಡರು.
ಯುಎಚ್ನ ಸಂಶೋಧನೆಯ ಗೋಚರತೆ ಹೆಚ್ಚಿಸುವುದು ಮತ್ತು ಟೆಕ್ಸಾಸ್ನ ಉನ್ನತ ಸಂಸ್ಥೆಗಳಲ್ಲಿ ಸಹಯೋಗವನ್ನು ಉತ್ತೇಜಿಸುವುದು ಅವರ ಗುರಿಯಾಗಿದೆ.
ವಾಸ್ತವ ಜಗತ್ತಿನ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ TAMEST ಸಂಸ್ಥೆ UH, UT ಆಸ್ಟಿನ್, ಟೆಕ್ಸಾಸ್ A&M ಮತ್ತು ಇತರ ಸಂಸ್ಥೆಗಳಿಂದ ಬುದ್ಧಿಜೀವಿಗಳನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ ಎಂದು ಠಾಕೂರ್ ಹೇಳಿದ್ದಾರೆ.
TAMEST ಯುಎಸ್ ರಾಷ್ಟ್ರೀಯ ಅಕಾಡೆಮಿಗಳ 350 ಸದಸ್ಯರು ಮತ್ತು ಎಂಟು ನೊಬೆಲ್ ಪ್ರಶಸ್ತಿ ವಿಜೇತರನ್ನು ಒಳಗೊಂಡಿದೆ. ಇದರ ಮುಂದಿನ ವಾರ್ಷಿಕ ಸಮ್ಮೇಳನ ಹವಾಮಾನ ಬದಲಾವಣೆಯ ಮೇಲೆ ಕೇಂದ್ರೀಕರಿಸಿದ್ದು, 2026ರ ಫೆಬ್ರವರಿಯಲ್ಲಿ ಸ್ಯಾನ್ ಆಂಟೋನಿಯೊದಲ್ಲಿ ನಡೆಯಲಿದೆ.
ಠಾಕೂರ್ ಅವರು ಈ ಹುದ್ದೆಯಲ್ಲಿ 2027 ರವರೆಗೆ ಮುಂದುವರಿಯಲಿದ್ದಾರೆ. ಈ ಅವಧಿಯಲ್ಲಿ ಹೂಸ್ಟನ್ ಸಂಸ್ಥೆಯನ್ನು ವಿಜ್ಞಾನ ಮತ್ತು ನಾವೀನ್ಯತೆಯ ರಾಷ್ಟ್ರೀಯ ಕೇಂದ್ರವಾಗಿ ರೂಪಿಸಲು ಯೋಜಿಸಿದ್ದಾರೆ.
ಮಾಸ್ಕೋ: ಭಾರತದ ಸಂಸದರ ನಿಯೋಗ ಮಾಸ್ಕೊ ಏರ್ಪೋರ್ಟ್ನಲ್ಲಿ ಇಳಿಯುವ ವೇಳೆ ಡ್ರೋನ್ ದಾಳಿಯಾಗಿದ್ದು,ಕೆಲಕಾಲ ಆತಂಕ ಮನೆಮಾಡಿತ್ತು.
ಕನ್ನಿಮೋಳಿಯೊಳಗೊಂಡ ಭಾರತದ ಸಂಸದರ ನಿಯೋಗ ಏರ್ಪೋರ್ಟ್ನಲ್ಲಿ ಇಳಿಯುವಾಗ ಡ್ರೋನ್ ದಾಳಿ ಆಗಿದೆ,ಆದರೆ ಕೂದಲೆಳೆ ಅಂತರದಲ್ಲಿ ಎಲ್ಲರೂ ಬಚಾವಾಗಿದ್ದಾರೆ.
ಆಪರೇಷನ್ ಸಿಂಧೂರ್ನಲ್ಲಿ ರಷ್ಯಾಕ್ಕೆ ತೆರಳಿದ್ದ ಭಾರತೀಯ ಸಂಸದರ ನಿಯೋಗವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗಲೇ ಡ್ರೋನ್ ದಾಳಿ ನಡೆದಿದೆ.
ಆಪರೇಷನ್ ಸಿಂಧೂರ್ ಬಗ್ಗೆ ಇಡೀ ಜಗತ್ತಿಗೆ ಮಾಹಿತಿ ನೀಡಲು ಹಾಗೂ ಪಾಕ್ ಬಣ್ಣ ಬಯಲು ಮಾಡಲು ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಸಂಸದರ ನಿಯೋಗ ಹೊರಟಿದೆ. ಅದರಲ್ಲಿ ಈ ನಿಯೋಗ ರಷ್ಯಾಗೆ ತೆರಳುತ್ತಿತ್ತು.
ಹಲವಾರು ಗಂಟೆಗಳ ವಿಳಂಬ ಮತ್ತು ಭದ್ರತಾ ಪರಿಸ್ಥಿತಿಗಳ ಮೌಲ್ಯಮಾಪನದ ನಂತರ, ವಿಮಾನವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಆಪರೇಷನ್ ಸಿಂಧೂರ್ ಬಗ್ಗೆ ಭಾರತದ ನಿಲುವನ್ನು ತಿಳಿಸಲು ಭಾರತದಿಂದ ಆರು ನಿಯೋಗಗಳು ವಿವಿಧ ದೇಶಗಳಿಗೆ ಹೋಗಿವೆ. ಭಾರತದಿಂದ ರಷ್ಯಾಕ್ಕೆ ತೆರಳಿರುವ ನಿಯೋಗದಲ್ಲಿ ಡಿಎಂಕೆ ಸಂಸದೆ ಕನ್ನಿಮೋಳಿ, ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಆರ್ಜೆಡಿ ಸಂಸದ ಪ್ರೇಮಚಂದ್ ಗುಪ್ತಾ, ಕ್ಯಾಪ್ಟನ್ ಬ್ರಿಜೇಶ್, ಅಶೋಕ್ ಕುಮಾರ್ ಮಿತ್ತಲ್ ಮತ್ತು ರಾಯಭಾರಿ ಮಂಜೀವ್ ಸಿಂಗ್ ಪುರಿ ಸೇರಿದ್ದಾರೆ.
ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಇದಾದ ನಂತರ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಯಿತು. ಮತ್ತು ಇಳಿಯಲು ಕಾಯುತ್ತಿದ್ದ ವಿಮಾನಗಳನ್ನು ತಾತ್ಕಾಲಿಕವಾಗಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನೀಡಿರಲಿಲ್ಲ.
ಮಾಸ್ಕೋ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಹಲವಾರು ಗಂಟೆಗಳ ಕಾಲ ಸ್ಥಗಿತಗೊಳಿಸಿತು. ಇದರಿಂದಾಗಿ ಸಂಸದರು ಪ್ರಯಾಣಿಸುತ್ತಿದ್ದ ವಿಮಾನ ಇಳಿಯಲು ಸಾಧ್ಯವಾಗದೆ ಗಾಳಿಯಲ್ಲಿ ಸುತ್ತುತ್ತಲೇ ಇತ್ತು. ಹಕವು ಗಂಟೆಗಳ ವಿಳಂಬದ ನಂತರ, ವಿಮಾನ ಸುರಕ್ಷಿತವಾಗಿ ಇಳಿಯಿತು.
ಇದಾದ ನಂತರ, ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಸರ್ವಪಕ್ಷ ಸಂಸದರ ನಿಯೋಗವನ್ನು ಸ್ವಾಗತಿಸಿ ಸುರಕ್ಷಿತವಾಗಿ ಅವರ ಹೋಟೆಲ್ಗೆ ಕರೆದೊಯ್ದರು.
ರಷ್ಯಾ ಭೇಟಿಯನ್ನು ಪೂರ್ಣಗೊಳಿಸಿದ ನಂತರ, ನಿಯೋಗವು ಸ್ಲೊವೇನಿಯಾ, ಗ್ರೀಸ್, ಲಾಟ್ವಿಯಾ ಮತ್ತು ಸ್ಪೇನ್ಗೆ ಪ್ರಯಾಣಿಸಲಿದೆ.
ವಾಷಿಂಗ್ಟನ್ : ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ನಾನೇ ಇತ್ಯರ್ಥಪಡಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ನಾವು ಪಾಕಿಸ್ತಾನ ಮತ್ತು ಭಾರತದೊಂದಿಗೆ ಏನು ಮಾಡಿದ್ದೇವೆ ಎಂಬುದನ್ನು ನೀವು ನೋಡಿದ್ದೀರಿ. ನಾನು ಅದನ್ನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಮತ್ತೆ ಹೇಳಿದ್ದಾರೆ.
ತಮ್ಮ ಓವಲ್ ಕಚೇರಿಯಲ್ಲಿ ಬುಧವಾರ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡರೊಂದಿಗೂ ಅಮೆರಿಕ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಈ ಸಂಘರ್ಷದಲ್ಲಿ ಯಾರಾದರೂ ಕೊನೆಯದಾಗಿ ಗುಂಡು ಹಾರಿಸಬೇಕಾಗಿತ್ತು. ಆದರೆ ಗುಂಡಿನ ದಾಳಿ ಇನ್ನಷ್ಟು ಕೆಟ್ಟದಾಗುತ್ತಾ, ದೊಡ್ಡದಾಗುತ್ತಾ, ದೇಶಗಳ ಮಧ್ಯ ಆಳವಾದ ಕಂದಕಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ನಾವು ಅವರೊಂದಿಗೆ ಮಾತನಾಡಿದೆವು. ಆದರೆ ನಾನೇ ಇದನ್ನು ಸರಿ ಮಾಡಿದೆ ಎಂದು ಹೇಳಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನವು ಕೆಲವು ಅತ್ಯುತ್ತಮ ಜನರನ್ನು ಮತ್ತು ಕೆಲವು ಒಳ್ಳೆಯ ನಾಯಕರನ್ನು ಹೊಂದಿದೆ. ಇನ್ನು ಭಾರತ ಹಾಗೂ ನನ್ನ ಸ್ನೇಹಿತ ಮೋದಿ ಎಂದು ಟ್ರಂಪ್ ಹೇಳಿದರು.
ಈ ವೇಳೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಮೋದಿ, ಪರಸ್ಪರ ಸ್ನೇಹಿತ ಎಂದು ಉತ್ತರಿಸಿದರು. ಈ ವೇಳೆ ಮತ್ತೆ ಮಾತು ಮುಂದುವರಿಸಿದ ಟ್ರಂಪ್, ಅವರು ಒಬ್ಬ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಇತ್ಯರ್ಥಗೊಳಿಸಲು ನಾನು ಸಹಾಯ ಮಾಡಿದೆ ಎಂದು ಪದೇ ಪದೇ ಟ್ರಂಪ್ ಹೇಳಿಕೊಳ್ಳುತ್ತಿದ್ದು, ಅವರ ಈ ಹೇಳಿಕೆ ಭಾರತದಲ್ಲಿ ಪ್ರತಿಪಕ್ಷಗಳು, ಮೋದಿ ಸರ್ಕಾರ ವಿರುದ್ಧ ಮುಗಿ ಬೀಳುವಂತೆ ಮಾಡಿದೆ.