ಸಿರಿಯಾದಲ್ಲಿ ಹಿಂಸಾಚಾರ: ಕೂಡಲೇ ದೇಶ ತೊರೆಯಲು ಭಾರತೀಯರಿಗೆ ಸೂಚನೆ

ಡೆಮಾಸ್ಕಸ್‌: ಸಿರಿಯಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದ್ದು ಆದಷ್ಟು ಬೇಗ ಅಲ್ಲಿಂದ ಭಾರತಕ್ಕೆ ವಾಪಸ್‌ ಆಗುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಸೂಚಿಸಿದೆ.

ಜಿಹಾದಿ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ದಂಗೆಕೋರರು ಸಿರಿಯಾದ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಅನಗತ್ಯ ಪ್ರಯಾಣ ಮುಂದೂಡಿ, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಸಿರಿಯಾ ತೊರೆದು,ತಕ್ಷಣ ವಾಪಸ್‌ ಬಂದುಬಿಡಿ ಎಂದು ಸಲಹೆ ನೀಡಿದೆ.

ತುರ್ತು ಸಹಾಯವಾಣಿ ಸಂಖ್ಯೆಯನ್ನು (+963 993385973) ಡೆಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಾಗಿ ಹಂಚಿಕೊಳ್ಳಲಾಗಿದೆ.

ಈ ಸಂಖ್ಯೆಗೆ ವಾಟ್ಸಪ್ ನಲ್ಲಿ ಓದಿದ ಹೇಳಿಕೆಯನ್ನು ಸಹ ಬಳಸಬಹುದು. ಜೊತೆಗೆ ತುರ್ತು ಇಮೇಲ್ ಐಡಿಯನ್ನು ಕೂಡ ಸೇರಿಸಬಹುದು ಎಂದು ತಿಳಿಸಲಾಗಿದೆ.

ಸಿರಿಯಾದಲ್ಲಿ ಹಿಂಸಾಚಾರ: ಕೂಡಲೇ ದೇಶ ತೊರೆಯಲು ಭಾರತೀಯರಿಗೆ ಸೂಚನೆ Read More

ಹಿಂದೂಗಳಿಗೆ ಕಿರುಕುಳ:ಬಾಂಗ್ಲಾ ವಿರುದ್ಧ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ

ಮೈಸೂರು: ಹಿಂದೂಗಳೂ ಸೇರಿದಂತೆ ಇತರೆ ಅಲ್ಪ‌ ಸಂಖ್ಯಾತರಿಗೆ ಕಿರುಕುಳ‌ ನೀಡುತ್ತಿರುವ ಬಾಂಗ್ಲಾದೇಶದ ವಿರುದ್ಧ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಶ್ವ ಹಿಂದೂ ಪರಿಷತ್ ಮೈಸೂರು ನಗರ ಜಿಲ್ಲಾ ಘಟಕ ವತಿಯಿಂದ ಬಾಂಗ್ಲಾದೇಶ ವಿರುದ್ಧ ಪ್ರತಿಭಟಿಸಿ ನಂತರ ಜಿಲ್ಲಾಧಿಕಾರಿಗಳ
ಮೂಲಕ ರಾಷ್ಟ್ರಪತಿಗಳಿಗೆ ಬಾಂಗ್ಲಾದೇಶದ ಹಿಂದುಗಳಿಗೆ ರಕ್ಷಣೆ ನೀಡುವಂತೆ ಹೊತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಈ ವೇಳೆ‌ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಕಾಮತ್,
ಭಾರತದ ಹಿಂದೂಗಳು ಯಾವಾಗಲೂ ಶಾಂತಿ ಪ್ರೀಯರು ಮತ್ತು ಎಲ್ಲಾ ಧರ್ಮದ ಜನರ ಜೊತೆ ಹೊಂದಾಣಿಕೆಯಿಂದ ಬದುಕುವವರು ಎಂದು ಹೇಳಿದರು.

ಹಿಂದುಗಳು ಎಲ್ಲಾ ದರ್ಮೀಯರ ಜೊತೆ ಉತ್ತಮ ಸಾಮರಸ್ಯದ ಜೊತೆ ಶಾಂತಿಪ್ರಿಯರಾಗಿಯೇ ಇರಲು ಬಯಸುತ್ತಾರೆ,ಆದರೆ ಬಾಂಗ್ಲಾದೇಶದಲ್ಲಿ, ಇಸ್ಲಾಮಿಕ್ ಮೂಲಭೂತವಾದಿ ಜಿಹಾದಿ ಅಂಶಗಳಿಂದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ದೇವಾಲಯಗಳು ಮತ್ತು ಪ್ರತಿಮೆಗಳನ್ನು ಅಪವಿತ್ರಗೊಳಿಸುವುದು ಮತ್ತು ಹಿಂದೂ ಆಸ್ತಿಗಳನ್ನ ಗುರಿಯಾಗಿಸಿ ನಾಶಮಾಡುವುದು ಈಗಲೂ ಮುಂದುವರೆದಿದೆ. ಅವರನ್ನು ತಡೆಯಲು ಸರಕಾರ ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವ ಸಂಸ್ಥೆ ಮತ್ತು ಭಾರತ ಸರ್ಕಾರ ನಿರೀಕ್ಷೆಯಂತೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಭದ್ರತೆ ಮತ್ತು ಸಂಘಟನೆಗಾಗಿ ಹಿಂದೂ ಸಮಾಜವನ್ನು ಜಾಗೃತಗೊಳಿಸಿದ ನಾಯಕ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿದೆ ಮತ್ತು ಜಾಮೀನು ಸಹ ನಿರಾಕರಿಸಲಾಗಿದೆ ಎಂದು ಕಿಡಿಕಾರಿದರು.

ಯಾವುದೇ ಜಾತಿ,ಧರ್ಮ ನೋಡದೆ ಎಲ್ಲಾ ಜನರಿಗೆ ಉಚಿತ ಊಟ ಬಡಿಸುವ ಇಸ್ಕಾನ್ ಮೇಲೆ ತೆಗೆದುಕೊಂಡ ಕ್ರಮವನ್ನ ಮೈಸೂರು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ, ಈ ಕೂಡಲೇ ವಿಶ್ವ ಸಂಸ್ಥೆ ಮದ್ಯ ಪ್ರವೇಶಿಸಿ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಿಡುಗಡೆ ಮಾಡಲು ಮತ್ತು ಹಿಂದುಗಳು ಹಾಗೂ ದೇವಸ್ಥಾನದ ಭದ್ರತೆಗೆ ಸಹಕರಿಸಬೇಕೆಂದು ಕೆ.ಮಹೇಶ ಕಾಮತ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಶ್ವಹಿಂದೂ ಪರಿಷತ್ ಉಪಾದ್ಯಕ್ಷರಾದ ಅಂಬಿಕಾ , ಕಾರ್ಯದರ್ಶಿ
ಮದು ಶಂಕರ , ಮಮತಾ ಜೀ, ಬಾಜಪ ರಾಷ್ಟ್ರೀಯ ಸದಸ್ಯರಾದ ಸವಿತಾ ಘಾಟ್ಕೆ,
ಗೋಪಾಲ ಜೀ , ಶಿವಕುಮಾರ, ವಿಜಯೇಂದ್ರ , ರಾದಾಕ್ರಷ್ಣ ಜೀ ಆರ್,ಎಸ್. ಜಯಶ್ರೀ, ಜಿ ಚೇತನ, ಮಂಜುನಾಥ ಮತ್ತು ಹಿಂದು ಪರ ಸಂಘಟಣೆಯ ಸದಸ್ಯರು ಪಾಲ್ಗೊಂಡಿದ್ದರು.

ಹಿಂದೂಗಳಿಗೆ ಕಿರುಕುಳ:ಬಾಂಗ್ಲಾ ವಿರುದ್ಧ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ Read More

ವಿಶ್ವ ಕರಾಟೆ ಪಂದ್ಯಾವಳಿ ಸ್ಕಂದಾಗೆ ಚಿನ್ನದ ಪದಕ

ಮೈಸೂರು: ಗೋವಾದಲ್ಲಿ ನೆಡೆದ ವಿಶ್ವ ಕರಾಟೆ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ
ಸ್ಕಂದ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿ‌ ನಾಡಿಗೆ ಕೀರ್ತಿ ತಂದಿದ್ದಾರೆ.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾಗವಹಿಸಿ ಕತಾ ಶಾಖೆಯ ಕರಾಟೆ ಪ್ರದರ್ಶನದಲ್ಲಿ ಅವರು ಪ್ರಥಮ ಬಹುಮಾನ ಪಡೆದರು.

ಪ್ರಶಸ್ತಿ ಪಡೆದ ಸ್ಕಂದ ಅವರನ್ನು ಕೂಡ್ಲೂರಿನ ಅವರ ಮನೆಯಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಕಂದ ನನಗೆ ಒದಗಿ ಬಂದ ಅವಕಾಶದ ಸದುಪಯೋಗ ಮಾಡಿಕೊಂಡು ಈ ಸಾಧನೆ ಮಾಡಿದೆ,ನಿರಂತರ ಪ್ರಯತ್ನ, ಪರಿಶ್ರಮ ಹಾಗೂ ಆಹಾರದಲ್ಲಿನ ಪಥ್ಯ ನಾನು ಸ್ಪರ್ಧೆಯಲ್ಲಿ ಗೆಲ್ಲಲು ಪೂರಕವಾಯಿತು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಯತ್ನ ಮಾಡಿ ನಮ್ಮ ದೇಶಕ್ಕೆ ಕರಾಟೆಯಲ್ಲಿ ಮತ್ತಷ್ಟು ಕೀರ್ತಿ ತರಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

ಪೋಷಕರಿಗೆ, ಸೇವಾ ಭಾರತಿ ಶಿಕ್ಷಣ ಸಂಸ್ಥೆ ಗೆ ಹಾಗೂ ಶೊಟಕಾನ್ ಕರಾಟೆ ಸಂಸ್ಥೆಯ ತರಬೇತುದಾರರಾದ ಮುರುಳಿ‌ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಸಂಚಾಲಕ ಪುನೀತ್ ಜಿ ಕೂಡ್ಲೂರು, ಪೋಷಕರಾದ ಕೆ.ಆರ್.ಮಂಜು , ಜ್ಯೋತಿ, ವೈಷ್ಣವಿ, ಇಂದಿರಮ್ಮ, ಕೃಷ್ಣ, ರಂಗರಾಜು, ನಾಗರಾಜು , ಶ್ರೇಯಸ್ , ಲತಾ, ಉಮಾ, ಭಾಗ್ಯ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.‌

ವಿಶ್ವ ಕರಾಟೆ ಪಂದ್ಯಾವಳಿ ಸ್ಕಂದಾಗೆ ಚಿನ್ನದ ಪದಕ Read More

ಅತಿ ಚಿಕ್ಕ ವಯಸ್ಸಿನಲ್ಲೇ ಇಂಟರ್ ನ್ಯಾಷನಲ್ ರೆಕಾರ್ಡ್ಸ್ ‌ಮಾಡಿದ ಪುಟ್ಟ ವಿಹಿಕಾ

ಮೈಸೂರು: ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ನಾಣ್ನುಡಿಯಂತೆ ಸಕ್ಕರೆ ನಾಡಿನ ಅಕ್ಕರೆಯ ಈ ಪುಟ್ಟ ಪೋರಿ ವಿಹಿಕಾ ಸಿ.ಟಿ.ಎಳೆ ವಯಸಿನಲ್ಲೆ ದೇಶ ಗುರುತಿಸುವಷ್ಟು ಸಾಧನೆ ಮಾಡಿದ್ದಾಳೆ.

ವಿಹಿಕಾಗೆ ಇನ್ನೂ 5 ವರ್ಷ 3 ತಿಂಗಳು ಅಷ್ಟೆ.ಈಗಾಗಲೇ ಇಂಟರ್ ನ್ಯಾಷನಲ್ ವರ್ಲ್ಡ್‌ ರೆಕಾರ್ಡ್ ಆಫ್ ಎಕ್ಸಲೆನ್ಸ್, ಬುಕ್‌ ಆಫ್ ರೆಕಾರ್ಡ್ಸ್ ಮಾಡಿ‌‌ದ್ದಾಳೆ.

ರೆಕಾರ್ಡ್ ಹೋಲ್ಡರ್ ವಿಹಿಕಾ ಸಿ.ಟಿ.
ಕತ್ತಿನ ಸುತ್ತ ಹುಲಾ ಹೂಪ್ ಸುತ್ತುತ್ತಲೇ ರಸಾಯನಶಾಸ್ತ್ರದ 118 ಕೋಷ್ಟಕ ಗಳನ್ನು ಕೇವಲ ಒಂದು ನಿಮಿಷದಲ್ಲಿ (ಒಂದು ನಿಮಿಷಕ್ಕೆ ಇನ್ನೂ ಕೆಲ ಸೆಂಟಿ ಸೆಕೆಂಡ್ಸ್ ಇರುವಾಗಲೇ) ಹೇಳುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.

ವಿಹಿಕಾ ಸಿ.ಟಿ.ಅವರು 2024 ಜುಲೈ 26 ರಂದು ಈ ಸಾಧನೆ ಮಾಡಿದ್ದಾರೆ.ಆಗ ಅವಳಿಗೆ 5 ವರ್ಷ 1 ತಿಂಗಳು 23 ದಿನಗಳಾಗಿತ್ತು.

ವಿಹಿಕಾ ಎಸ್. ಟಿ. ಅವಳ ಕುತ್ತಿಗೆಯ ಸುತ್ತ ಹುಲಾ ಹೂಪ್ ಅನ್ನು ತಿರುಗಿಸುವಾಗ ಆವರ್ತಕ ಕೋಷ್ಟಕವನ್ನು ಪಠಿಸಿದ್ದು ವಿಶೇಷವಾಗಿತ್ತು. ಆಕೆ ಈ ಸಾಧನೆ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಗೆ ಭಾಜನರಾಗಿದ್ದಾರೆ.

ಅಷ್ಟೇ ಅಲ್ಲಾ ಈ ಮಗು ಇನ್ನೂ 3 ವರ್ಷ ಇದ್ದಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಡಿದ್ದಾಳೆ.

ಇದೆಲ್ಲದರ ವಿವರವನ್ನು ವಿಹಿಕಾ ತಾಯಿ‌‌ ರಮ್ಯ ಮತ್ತು ಅಜ್ಜಿ ನೇತ್ರಾವತಿ ಅವರೊಂದಿಗೆ ಮೈಸೂರು ಜಿಲ್ಲಾ ಪತ್ರಕರ್ತರ‌ ಭವನಕ್ಕೆ ಆಗಮಿಸಿ ಮಾಧ್ಯಮದವರಿಗೆ ನೀಡಿದರು.

ವಿಹಿಕಾ ಸಿ.ಟಿ. ಜೂನ್ 3, 2019 ರಂದು ಜನಿಸಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಚಿಕ್ಕ ಅಂಕನ ಹಳ್ಳಿ ನಿವಾಸಿಗಳಾದ ತೇಜಸ್ವಿ-ರಮ್ಯ ಅವರ ಪುತ್ರಿ.

ಒಂದೂವರೆ ವರ್ಷದವಳಿದ್ದಾಗ ಹಣ್ಣು,ಕಾಯಿಗಳನ್ನು ಹೂಗಳನ್ನು ಗುರುತಿಸುತ್ತಿದ್ದಳು ಎಂದು ಆಕೆಯ ಪ್ರೀತಿಯ ಅಜ್ಜಿ ನೇತ್ರಾವತಿ ಅವರು ಹೇಳುತ್ತಾರೆ.

ಮೂರು ವರ್ಷದವಳಿದ್ದಾಗ 16 ಪ್ರಾಣಿಗಳು, ಮತ್ತು ರಾಷ್ಟ್ರೀಯ ಚಿಹ್ನೆಗಳು, 7 ಆಕಾರಗಳು, 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು,7 ತಾಲೂಕುಗಳನ್ನು ಹೇಳುತ್ತಿದ್ದಳು.

ಭಾರತೀಯ ಪ್ರತಿಜ್ಞೆ, 6 ಶ್ಲೋಕಗಳು, ವರ್ಷದಲ್ಲಿನ ತಿಂಗಳುಗಳು,14 ಕ್ರಿಯಾ ಪದಗಳು,12 ಗಾದೆಗಳು, A – Z ನಿಂದ ವರ್ಣಮಾಲೆಯ ಅಕ್ಷರಗಳು, 49 ಕನ್ನಡ ಅಕ್ಷರಗಳು ಮತ್ತು 4 ಪ್ರಾಸಗಳನ್ನು 3 ವರ್ಷ ಮತ್ತು 2 ತಿಂಗಳ ವಯಸ್ಸಿನಲ್ಲಿ ಅಂದರೆ 2022 ಆಗಸ್ಟ್ 25 ರಂದು ಹೇಳಿ ದೃಢಪಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಡಿದ್ದಾಳೆ.

ವಿಹಿಕಾ ಈಗ ಕರಾಟೆ‌ ಕಲಿಯುತ್ತಿದ್ದು ಎಲ್ಲೋ ಮತ್ತು ಆರೆಂಜ್ ಬೆಲ್ಟ್ ಪಡೆದಿದ್ದಾಳೆ.ಭಗವದ್ಗೀತೆಯ 35 ಶ್ಲೋಕಗಳನ್ನು ಹೇಳುತ್ತಾಳೆ,ವಿಷ್ಣು ಸಹಸ್ರನಾಮ ಕಲಿಯುತ್ತಿದ್ದಾಳೆ.

ಈ ಬಾಲೆ ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ,ಹೆಚ್ಚು ದಾಖಲೆಗಳನ್ನು ಬರೆಯಲಿ ಎಂದು ವರ್ಷಿಣಿ ನ್ಯೂಸ್ ಹಾರೈಸುತ್ತದೆ.

ಅತಿ ಚಿಕ್ಕ‌‌ ವಯಸ್ಸಿನಲ್ಲಿ ವಿಶ್ವ ದಾಖಲೆ ಮಾಡಿರುವ ವಿಹಿಕಾಗೆ ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬೆಲವತ್ತ ರಾಮಕೃಷ್ಣ ಮತ್ತು ನಗರ ಅಧ್ಯಕ್ಷ ಕೆ.ಆರ್.ಮಿಲ್ ಆನಂದಗೌಡ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.

ಅತಿ ಚಿಕ್ಕ ವಯಸ್ಸಿನಲ್ಲೇ ಇಂಟರ್ ನ್ಯಾಷನಲ್ ರೆಕಾರ್ಡ್ಸ್ ‌ಮಾಡಿದ ಪುಟ್ಟ ವಿಹಿಕಾ Read More

ಕಾಂಗರೂ ನಾಡಿನಲ್ಲಿ ವಿಕ್ರಂ ಅಯ್ಯಂಗಾರ್ ಗೆ ಕನ್ನಡ ಡಿಂಡಿಮ ಪ್ರಶಸ್ತಿ

ಮೈಸೂರು: ಮೆಲ್ಬೋರ್ನ್ ಕನ್ನಡ ಸಂಘವು
ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದ ಸ್ಟ್ರಿಂಗ್ವೆಲ್ ಟೌನ್ ಹಾಲ್ ನಲ್ಲಿ
ನ 24 ರಂದು 69 ನೆ ಕನ್ನಡ ರಾಜ್ಯೋತ್ಸವ ಸಮಾರಂಭ ಹಮ್ಮಿಕೊಂಡಿದೆ.

ಅಂದು ರಾಜ್ಯೋತ್ಸವ ಸಮಾರಂಭದ ಅಂಗವಾಗಿ ನಡೆಯಲಿರುವ ಕಾಂಗರೂ ನಾಡಿನಲ್ಲಿ ಕನ್ನಡ ಡಿಂಡಿಮ ಕನ್ನಡ ಕಾರ್ಯಕ್ರಮದಲ್ಲಿ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷರು ಹಾಗೂ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ವಿಕ್ರಂ ಅಯ್ಯಂಗಾರ್ ಅವರಿಗೆ ಕನ್ನಡ ಡಿಂಡಿಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮೈಸೂರಿನಲ್ಲಿ 18 ವರ್ಷದಿಂದ ನಿರಂತರವಾಗಿ ಹಲವಾರು ಸಂಘಟನೆಯಲ್ಲಿ ತೊಡಗಿಕೊಂಡು ನಿರಂತರ ಸೇವೆ ಮಾಡುತ್ತಿರುವ ವಿಕ್ರಂ ಅಯ್ಯಂಗಾರ್ ಅವರಿಗೆ ಸಂಘಟನಾ ಕ್ಷೇತ್ರದಿಂದ ಕನ್ನಡ ಡಿಂಡಿಮ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕರಾದ ಜೆ ಎಚ್ ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗರೂ ನಾಡಿನಲ್ಲಿ ವಿಕ್ರಂ ಅಯ್ಯಂಗಾರ್ ಗೆ ಕನ್ನಡ ಡಿಂಡಿಮ ಪ್ರಶಸ್ತಿ Read More

ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ:24 ಮಂದಿ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡು,24 ಮಂದಿ ಸಾವನ್ನಪ್ಪಿದ್ದಾರೆ.

ಶನಿವಾರ‌ ನೈಋತ್ಯ ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್ ಬಳಿ ಎರಡು ಬಾಂಬ್ ಸ್ಫೋಟಗೊಂಡಿದೆ.

ಈ ಬಗ್ಗೆ ಪೊಲೀಸ್ ಕಾರ್ಯಾಚರಣೆಯ ಹಿರಿಯ ಅಧೀಕ್ಷಕ ಮುಹಮ್ಮದ್ ಬಲೋಚ್ ಮಾತನಾಡಿ, ಪೇಶಾವರಕ್ಕೆ ಹೋಗುವ ಎಕ್ಸ್‌ಪ್ರೆಸ್‌ ರೈಲು ನಿಲ್ದಾಣದಿಂದ ಹೊರಡಲು ಸಿದ್ಧವಾಗಿತ್ತು. ಜೊತೆಗೆ ಪ್ಯಾಸೆಂಜರ್ ರೈಲಿಗಾಗಿ ಹಲವು ಜನ ಕಾಯುತ್ತಿದ್ದರು,ಹಾಹಾಗಿ ನಿಲ್ದಾಣ ಭಾರೀ ಜನಸಂದಣಿಯಿಂದ ಕೂಡಿತ್ತು, ಈ ವೇಳೆ ಒಂದರ ಹಿಂದೆ ಒಂದರಂತೆ ಎರಡು ಬಾಂಬ್ ಸ್ಫೋಟಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಬಾಂಬ್ ಸ್ಫೋಟಗೊಂಡಾಗ 4 ಜನ ಹಾಗೂ ಎರಡನೇ ಬಾಂಬ್ ಸ್ಫೋಟಗೊಂಡಾಗ 15 ರಿಂದ 26 ಜನರು ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿದೆ ಸ್ಫೋಟದಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಧಾವಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ.

ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ:24 ಮಂದಿ ಸಾವು Read More

ಟ್ರಂಪ್ ಗೆ 2ನೇ ಬಾರಿ ಅಮೆರಿಕ ಅಧ್ಯಕ್ಷ ಪಟ್ಟ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇನ್ನೂ ಅಧಿಕೃತವಾಗಿ ಗೆದ್ದವರು ಯಾರು ಎಂದು ಘೋಷಿಸಿಲ್ಲ,ಆದರೂ ಬಹುತೇಕ ಫಲಿತಾಂಶ ನಿರ್ಧಾರವಾಗಿರುವುದರಿಂದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿನ ನಗೆ ಬೀರಿದ್ದಾರೆ

ಫಲಿತಾಂಶದ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಇದು ಹಿಂದೆಂದೂ ಯಾರೂ ನೋಡದ ಚಳವಳಿ. ನಾನೂ, ಇದು ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಚಳವಳಿ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಈ ದೇಶದ ಜನತೆಯ ಜೊತೆ ನಾನು ಯಾವತ್ತಿಗೂ ಇರುತ್ತೇನೆ. ನಾವು ನಮ್ಮ ಗಡಿಗಳನ್ನು ಸರಿಪಡಿಸಲು ಹೊರಟಿದ್ದೇವೆ, ನಮ್ಮ ದೇಶದ ವಿಚಾರಗಳನ್ನು ಸರಿಪಡಿಸಬೇಕಿದೆ. ನಾವು ಇಂದು ಇತಿಹಾಸವನ್ನು ನಿರ್ಮಿಸಿದ್ದೇವೆ, ಯಾರೂ ಯೋಚಿಸದ ಅಡೆತಡೆಗಳನ್ನು ನಾವು ಜಯಿಸಿದ್ದೇವೆ. ನಾವು ಹೆಚ್ಚಿನದನ್ನು ಸಾಧಿಸಿದ್ದು, ರಾಜಕೀಯ ಗೆಲುವಾಗಿದೆ ಎಂದು ಬಣ್ಣಿಸಿದ್ದಾರೆ.

ಶ್ವೇತಭವನವನ್ನು ಗೆಲ್ಲಲು ಅಗತ್ಯವಿರುವ 270 ಚುನಾವಣಾ ಮತಗಳಲ್ಲಿ ಟ್ರಂಪ್ 267 ಎಲೆಕ್ಟೊರಲ್ ಮತಗಳನ್ನು ಈಗಾಗಲೇ ಗೆದ್ದಿದ್ದಾರೆ. ಇದೊಂದು ದೊಡ್ಡ ಕೆಲಸ. ಇದು ಪ್ರಪಂಚದ ಅತ್ಯಂತ ಪ್ರಮುಖ ಕೆಲಸ.. ನಾನು ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.

ಚುನಾವಣಾ ಪ್ರಚಾರ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಸಾಕಷ್ಟು ಬಾರಿ ಹತ್ಯೆಯತ್ನ ನಡೆದಿತ್ತು, ಕೂದಲೆಳೆ ಅಂತರದಲ್ಲಿ ಅವರು ಬಚಾವಾಗಿದ್ದರು. ಅದನ್ನು ಸಹ ಇಂದಿನ ಭಾಷಣದಲ್ಲಿ ಟ್ರಂಪ್ ಪ್ರಸ್ತಾಪಿಸಿದರು. ದೇವರು ಒಂದು ಕಾರಣಕ್ಕಾಗಿ ನನ್ನ ಜೀವವನ್ನು ಉಳಿಸಿದನು. ಆ ಕಾರಣವು ನಮ್ಮ ದೇಶವನ್ನು ಉಳಿಸಲು ಮತ್ತು ಅಮೇರಿಕಾವನ್ನು ಶ್ರೇಷ್ಠತೆಗೆ ಮರುಸ್ಥಾಪಿಸಲು, ನಾವು ಒಟ್ಟಾಗಿ ಆ ಮಿಷನ್ ನ್ನು ಪೂರೈಸಲಿದ್ದೇವೆ ಎಂದು ಹೇಳಿದರು.

78 ವರ್ಷ ವಯಸ್ಸಿನ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಚುನಾಯಿತರಾದ ಅತ್ಯಂತ ಹಿರಿಯ ಅಧ್ಯಕ್ಷರಾಗಲಿದ್ದಾರೆ. ಅಧ್ಯಕ್ಷ ಜೋ ಬಿಡೆನ್ ಅವರು ಈ ಹಿಂದೆ 77 ನೇ ವಯಸ್ಸಿನಲ್ಲಿ ಚುನಾಯಿತರಾದ ಅತ್ಯಂತ ಹಳೆಯ ಅಧ್ಯಕ್ಷರಾಗಿದ್ದರು.

ಟ್ರಂಪ್ ಗೆ 2ನೇ ಬಾರಿ ಅಮೆರಿಕ ಅಧ್ಯಕ್ಷ ಪಟ್ಟ Read More

ಇಸ್ರೇಲ್ ಸೇನೆ ದಾಳಿಗೆ ಹಮಾಸ್ ಹಿರಿಯ ಅಧಿಕಾರಿ ಸಾವು

ಇಸ್ರೇಲ್: ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್‌ನ ಹಿರಿಯ ಅಧಿಕಾರಿ ಇಝ್‌-ಅಲ್‌ ದೀನ್‌ ಕಸಬ್‌ ಹತರಾಗಿದ್ದಾರೆ‌.

ಇಝ್‌-ಅಲ್‌ ದೀನ್‌ ಕಸಬ್‌
ರನ್ನು ಕೊಂದು ಹಾಕಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ಗಾಜಾ ಪಟ್ಟಿಯಲ್ಲಿರುವ ಇತರ ಸಂಘಟನೆಗಳೊಂದಿಗೆ ಸಮನ್ವಯ ವಹಿಸುವಲ್ಲಿ ಕಸಬ್ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅಲ್ಲದೆ ಹಮಾಸ್‌ನ ಉನ್ನತ ಶ್ರೇಣಿಯ ನಾಯಕರಾಗಿದ್ದರು ಎಂದು ಇಸ್ರೇಲ್‌ ಹೇಳಿದೆ.

ಕಸಬ್ ಸಾವನ್ನಪ್ಪಿರುವದನ್ನು ಹಮಾಸ್ ಬಂಡುಕೋರ ಸಂಘಟನೆ ಕೂಡಾ ಖಚಿತ ಪಡಿಸಿದೆ,ಜತೆಗೆ ಅವರ ಸಾವಿಗೆ ದುಃಖ ವ್ಯಕ್ತ ಪಡಿಸುತ್ತೇವೆ ಎಂದು ತಿಳಿಸಿದೆ.

ಮತ್ತೊಬ್ಬ ಅಧಿಕಾರಿ ಐಮನ್ ಆಯೆಷ್ ಕೂಡ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ ತಿಳಿಸಿದೆ.

ಇಸ್ರೇಲ್ ಸೇನೆ ದಾಳಿಗೆ ಹಮಾಸ್ ಹಿರಿಯ ಅಧಿಕಾರಿ ಸಾವು Read More

ಶಾಲಾ ಮಕ್ಕಳನ್ನು ಹೊತ್ತ ಬಸ್ ನಲ್ಲಿ ಬೆಂಕಿ:25 ಮಂದಿ ದುರ್ಮರಣ

ಬ್ಯಾಂಕಾಕ್, ಅ1: ಪ್ರವಾಸಕ್ಕೆ ಹೋಗಿದ್ದ ಶಾಲಾ ಮಕ್ಕಳನ್ನು ಹೊತ್ತ ಬಸ್ ಬ್ಯಾಂಕಾಕ್‌ನ ಉತ್ತರಕ್ಕೆ ಪ್ರವಾಸದಿಂದ ಹಿಂತಿರುಗುವಾಗ ಬೆಂಕಿ ಅವಘಡ ಸಂಭವಿಸಿ 25 ಮಂದಿ ಬೆಂಕಿಗೆ ಆಹುತಿಯಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬ್ಯಾಂಕಾಕ್ ಹೊರಗೆ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ. 20 ಮಕ್ಕಳು ಮತ್ತು ಮೂವರು ಶಿಕ್ಷಕರ ಮೃತದೇಹಗಳು ಪತ್ತೆಯಾಗಿವೆ.

ದೇಶದ ಉತ್ತರಕ್ಕೆ ತೆರಳಿದ್ದ ಬಸ್ ಶಾಲಾ ಪ್ರವಾಸದ ನಂತರ ಥಾಯ್ ರಾಜಧಾನಿಗೆ ಹಿಂತಿರುಗುತ್ತಿತ್ತು.

ಬೆಂಕಿ ಹೊತ್ತಿಕೊಂಡ ಕೂಡಲೇ ದಟ್ಟವಾದ ಕಪ್ಪು ಹೊಗೆಯ ಬೃಹತ್ ಮೋಡಗಳು ಆಕಾಶಕ್ಕೆ ಚಿಮ್ಮಿತ್ತೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಮೇಲ್ಸೇತುವೆಯ ಅಡಿಯಲ್ಲಿ ಬಸ್ಸು ಸುಟ್ಟುಹೋದಾಗ ಜ್ವಾಲೆಗಳು ಬಸ್ ಅನ್ನು ಆವರಿಸಿಕೊಂಡಿತ್ತು ಎಂದು ಹೇಳಿದ್ದಾರೆ.

ಶಾಲಾ ಮಕ್ಕಳನ್ನು ಹೊತ್ತ ಬಸ್ ನಲ್ಲಿ ಬೆಂಕಿ:25 ಮಂದಿ ದುರ್ಮರಣ Read More

ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ- ಡಿ.ಕೆ. ಶಿವಕುಮಾರ್

ಮೈಸೂರು: ನಮ್ಮ ಸಂಸ್ಕೃತಿ ಹಾಗೂ ನಮ್ಮತನವನ್ನು ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾ‌ರ್ ತಿಳಿಸಿದರು.

ಅಮೇರಿಕಾದ ಮೆರಿಲ್ಯಾಂಡ್‌ ಜೆಎಸ್‌ಎಸ್ ಆಧ್ಯಾತ್ಮಿಕ ಕೇಂದ್ರದಲ್ಲಿ ಕಾವೇರಿ ಕನ್ನಡ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸ್ನೇಹ-ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಿಸಿಎಂ ಮಾತನಾಡಿದರು.

ಹುಟ್ಟು ಆಕಸ್ಮಿಕ ಸಾವು ನಿಶ್ಚಿತ, ಇದರ ಮಧ್ಯೆ ಸಮಾಜಕ್ಕೆ ಏನನ್ನಾದರೂ ಒಳ್ಳೆಯದನ್ನು ಮಾಡುತ್ತಿರಬೇಕು ಎಂದು ಕರೆ ನೀಡಿದರು.

ಸುತ್ತೂರು ಶ್ರೀಮಠ ಆಮೇರಿಕಾದಲ್ಲಿರುವ ಭಾರತೀಯರ ಕಷ್ಟ-ಸುಖಗಳಿಗೆ ಸ್ಪಂದಿಸುವುದರೊಂದಿಗೆ ನಮ್ಮ ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜೆಎಸ್‌ಎಸ್ ಆಧ್ಯಾತ್ಮಿಕ ಕೇಂದ್ರವನ್ನು ಸ್ಥಾಪಿಸಿ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಮೇರಿಕಾದಲ್ಲಿ ಪೂಜ್ಯರ ಸಾನ್ನಿಧ್ಯದಲ್ಲಿ ಕನ್ನಡಿಗರೆಲ್ಲರೂ ಸಮ್ಮಿಲನಗೊಂಡಿರುವುದು ನಮ್ಮೆಲ್ಲರ ಸೌಭಾಗ್ಯ. ಇದು ಭಕ್ತರು ಮತ್ತು ಭಗವಂತನ ನಡುವೆ ಅವಿನಾಭಾವ ಸಂಬಂಧವನ್ನು ಸೂಚಿಸುತ್ತದೆ.

ಸುತ್ತೂರು ಶ್ರೀಮಠದ ಸೇವೆ ಅನನ್ಯವಾದುದು,ಪೂಜ್ಯರು ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ನೀಡುವ ಕಾಯಕವನ್ನು ಮಾಡುತ್ತಿದ್ದಾರೆ. ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಪೂಜ್ಯರು ಕೈಗೊಂಡಿರುವ ಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ ಮಾತನಾಡಿ,ಡಿ. ಕೆ. ಶಿವಕುಮಾರ್‌ ಅವರು ಉತ್ತಮ ಆಡಳಿತಗಾರರು. ಅವರು ರಾಜಕೀಯ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವವರು. ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಮುನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ಯುತ್ತಮ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ, ಸಮಸ್ಯೆಗಳನ್ನು ಅತ್ಯಂತ ಧೈರ್ಯವಾಗಿ ಎದುರಿಸುವ ಶಕ್ತಿ ಅವರಲ್ಲಿದೆ ಎಂದು ತಿಳಿಸಿದರು. ಅವರು ಆಗಮಿಸಿ ಕನ್ನಡಿಗರೊಂದಿಗೆ ಬೆರೆತಿರುವುದಕ್ಕೆ ಸಂತೋಷ ಎಂದು ಶ್ರೀಗಳು ಹೇಳಿದರು.

ಅಕ್ಕ ಸಂಘಟನೆಯ ಪದಾಧಿಕಾರಿಗಳಾದ ಬೆನ್ ಚಿಕ್ಕಸ್ವಾಮಿ, ರವಿಡಂಕನಕೋಟೆ, ದಯಾ ಆದಪ್ಪ, ಕಾವೇರಿ ಕನ್ನಡ ಕೂಟದ ಅಧ್ಯಕ್ಷ ಸುದರ್ಶನ್, ಅನಿವಾಸಿ ಭಾರತೀಯರು ಹಾಗೂ ಜೆಎಸ್ಎಸ್ ಮಿಷನ್‌ನ ಸ್ವಯಂಸೇವಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನಾಗಶಂಕರ್ ಸ್ವಾಗತಿಸಿದರು, ಮುರಳೀಧರ ಪೈ ಪ್ರಾರ್ಥನೆ ಸಲ್ಲಿಸಿದರು,ಶುಭಾ ಪ್ರಭು ಕಾಮತ್‌ ವಂದಿಸಿದರು.

ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ- ಡಿ.ಕೆ. ಶಿವಕುಮಾರ್ Read More