ಕಾಲುವೆಯ ಹೂಳು ತೆಗೆಯದೆ ಮೋಸ:ಜಮೀನಿಗೆ ನೀರಿಲ್ಲದೆ ರೈತರ ಪರದಾಟ

Spread the love

ಹುಣಸೂರು: ರೈತರಿಗೆ ಅನುಕೂಲವಾಗಲಿ ಎಂದು ಕಾಲುವೆಗಳ ಹೂಳು ತೆಗೆಸಲು ಸರ್ಕಾರ ಹಣ ನೀಡುತ್ತಿದೆ, ಆದರೆ ಟೆಂಡರ್ ಪಡೆದವರು ಸರಿಯಾಗಿ ಕೆಲಸ ಮಾಡಿಸದೆ ಹಣ ಹೊಡೆದು ರೈತರ ಬಾಳಿನ ಜತೆ ಆಟವಾಡುತ್ತಿದ್ದಾರೆ.

ಇದಕ್ಕೆ ಸ್ಪಷ್ಟ ಉದಾಹರಣೆ ಹುಣಸೂರು ತಾಲೂಕು. ಹುಣಸೂರು ತಾಲೂಕಿನ ಸೋನಳ್ಳಿ ತೋಟದ ಬಳಿಯಿಂದ ರಾಯಪ್ಪ ತೋಟದವರೆಗೆ ಅಂದರೆ ಸುಮಾರು 3 ಕಿ.ಮೀ ವರೆಗೆ ಕಾಲುವೆಯ ಹೂಳು ತೆಗೆಯದೆ ನೀರು ಅಲ್ಲೇ ನಿಂತು ಕೊಳಕಾಗುತ್ತಿದೆ.

ಕಾಲುವೆಯಲ್ಲಿ ಮನುಷ್ಯನ ಅರ್ಧ ದೇಹದ ಭಾಗದಷ್ಟು ಜೊಂಡು ಬೆಳೆದುನಿಂತಿದೆ.ಇತ್ತ ರೈತರು ನಾಟಿ ಮಾಡಿಕೊಂಡು ನೀರಿಗಾಗಿ ಪರದಾಡುತ್ತಿದ್ದಾರೆ,ಹೂಳು ತೆಗೆಯದ ಕಾರಣ ಜಮೀನಿಗೆ ಸರಾಗವಾಗಿ ನೀರು ಹರಿಯದೆ ತೊಂದರೆಗೀಡಾಗಿದ್ದಾರೆ.

ಹಾರಂಗಿ ಹುಣಸೂರು ವಿಭಾಗದಿಂದ ಟೆಂಡರ್ ಕರೆಯಲಾಗಿದೆ, ಟೆಂಡರ್ ಪಡೆದವರು ಸರಿಯಾಗಿ ಕೆಲಸವನ್ನೇ ಮಾಡಿಲ್ಲ ಅವರೊಂದಿಗೆ ಅಧಿಕಾರಿಗಳು ಶಾಮಿಲಾಗಿ ರೈತರ ಬಾಳಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ ಇಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ನಮಗೆ ಸಿಕ್ಕ ಮಾಹಿತಿ ಪ್ರಕಾರ 3 ಕಿಮೀ ಕಾಲುವೆಯ ಹೂಳು ತೆಗೆಯಲು 1,23,000 ರೂ ಬಿಲ್ ಮಾಡಿಸಿಕೊಳ್ಳಲಾಗಿದೆ ಆದರೆ ಕೆಲಸವನ್ನೇ ಮಾಡದೆ ಅದು ಹೇಗೆ ಬಿಲ್ ಮಾಡಿಕೊಟ್ಟರು ಎಂದು ಚೆಲುವರಾಜು ಕಾರವಾಗಿ ಪ್ರಶ್ನಿಸಿದ್ದಾರೆ.

ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ರೈತರ ಜಮೀನಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಕೆಲಸವನ್ನೇ ಮಾಡದೆ ಟೆಂಡರ್ ಮಾಡಿರುವವರ ವಿರುದ್ಧ ಕಠುಣ ಕ್ರಮ ಕೈಗೊಳ್ಳಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.