ಬೆಳಗಾವಿ: ಆಡಳಿತ ವ್ಯವಸ್ಥೆ ಭ್ರಷ್ಟತೆಯಿಂದ
ಕೂಡಿದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ವಿಜಯಪುರ, ರಾಯಚೂರು, ಬೀದರ್, ಕಲಬುರಗಿಯಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ ಅವರ ನೆರವಿಗೆ ಬಾರದೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ ತಾಳಿದೆ ಎಂದು ಕಿಡಿಕಾರಿದರು.
ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಚುನಾವಣೆ ಪ್ರತಿಷ್ಠೆಯ ಮುಖ್ಯ ವಿಷಯವಾಗಿದೆ. ಜನರ ಸಂಕಷ್ಟ ಕೇಳಿ ಪರಿಹರಿಸುವ ಸಂವೇದನೆ ಆಡಳಿತ ಪಕ್ಷದ ಶಾಸಕ ಸಚಿವರಿಗೆ ಇಲ್ಲ. ಈಗಲಾದರೂ ಜಿಲ್ಲೆಯ ಸಚಿವರು ಸಂವೇದನೆ ತೋರಿಸಿ ರೈತರ ಸಹಾಯಕ್ಕೆ ಬರಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.
ರಾಜ್ಯದಲ್ಲಿ ನಾನು ಮುಖ್ಯಮಂತ್ರಿ, ತಾನು ಮುಖ್ಯಮಂತ್ರಿ ಎಂಬ ಯುದ್ಧ ಶುರುವಾಗಿದೆ. ಯಾರು ಮುಖ್ಯಮಂತ್ರಿಯಾಗಿರುತ್ತಾರೊ ಅದು ಮುಖ್ಯವಲ್ಲ. ಜನ ಅಧಿಕಾರ ಕೊಟ್ಟಿದ್ದಾರೆ ಅವರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಆಗ್ರಹಿಸಿದರು.