ಸೌದಿ ಅರೇಬಿಯಾ: ಸೌದಿ ಅರೇಬಿಯಾದಲ್ಲಿ ಸೋಮವಾರ ಮುಂಜಾನೆ ಡೀಸೆಲ್ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ 45 ಮಂದಿ ಭಾರತೀಯರು ಮೃತಪಟ್ಟಿದ್ದಾರೆ.
ಈ ಬಸ್ ಅಪಘಾತದಲ್ಲಿ 45 ಮಂದಿ ಭಾರತೀಯ ಉಮ್ರಾ ಯಾತ್ರಿಕರು ಸಜೀವವಾಗಿ ದಹನವಾಗಿದ್ದಾರೆ.ಬೇರೆ ಸಾರಿಗೆ ವ್ಯವಸ್ಥೆ ಮಾಡಿಕೊಂಡ 8 ಮಂದಿ ಬಚಾವಾಗಿದ್ದಾರೆ.
ಪ್ರಾಣಾಪಾಯದಿಂದ ಪಾರಾದ ಎಂಟು ಮಂದಿ ಯಾತ್ರಿಕರು ಮೆಕ್ಕಾದಿಂದ ಮದೀನಾಗೆ ಪ್ರಯಾಣ ಮಾಡಲು ಅದೇ ಪ್ರಯಾಣ ಕಂಪೆನಿಯಲ್ಲಿ ಬುಕ್ ಮಾಡಿದ್ದರು. ಕೊನೆ ಕ್ಷಣದಲ್ಲಿ ಅವರು ಖಾಸಗಿ ಸಾರಿಗೆಯನ್ನು ಆಯ್ಕೆ ಮಾಡಿಕೊಂಡು ತಮ್ಮ ಜೀವ ಉಳಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 54 ಮಂದಿ ಒಂದೇ ಏಜೆಂಟ್ ಅನ್ನು ಬುಕ್ ಮಾಡಿದ್ದರು. ಇವರಲ್ಲಿ ಎಂಟು ಜನರು ಖಾಸಗಿ ಸಾರಿಗೆಯನ್ನು ಆಯ್ಕೆ ಮಾಡಿದರು.ಹೀಗಾಗಿ ಬಸ್ ನಲ್ಲಿ ಪ್ರಯಾಣಿಸುವ 46 ಮಂದಿಯ ಪಟ್ಟಿ ಸಿಕ್ಕಿದೆ. ಸೌದಿ ಅರೇಬಿಯಾ ಅಧಿಕಾರಿಗಳು ಮೃತರನ್ನು ಗುರುತಿಸುವ ಕಾರ್ಯ ನಡೆಸುತ್ತಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟವರಲ್ಲಿ 45 ಮಂದಿ ಭಾರತೀಯರಾಗಿದ್ದು, ಹೆಚ್ಚಿನವರು ತೆಲಂಗಾಣದ ಹೈದರಾಬಾದ್ ಮೂಲದವರಾಗಿದ್ದಾರೆ. ಅಪಘಾತದಲ್ಲಿ ಮೊಹಮ್ಮದ್ ಅಬ್ದುಲ್ ಶೋಯಬ್ ಎಂಬಾತ ಬದುಕಿದ್ದು, ಆತನ ಸ್ಥಿತಿ ಗಂಭೀರ ವಾಗಿದೆ.
ಬಸ್‌ಗೆ ಬೆಂಕಿ ಹೊತ್ತಿಕೊಂಡಾಗ ಪ್ರಯಾಣಿಕರು ನಿದ್ರಿಸುತ್ತಿದ್ದರು. ಇದರಿಂದ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಮೃತರನ್ನು ಗುರುತಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ರಕ್ಷಣಾ ತಂಡಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿ ಜೆಡ್ಡಾದ ಭಾರತೀಯ ಕಾನ್ಸುಲೇಟ್ ಜನರಲ್ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್,
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ, ಕಿರಣ್ ರಿಜುಜು ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದರು
ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
