ನಿಶ್ಚಿತಾರ್ಥ ಮುಗಿಸಿ ಬರುವಾಗ ಖಾಸಗಿ ಬಸ್ ಅಪಘಾತ:ನಿರ್ವಾಹಕ ಸಾವು

Spread the love

(ವರದಿ-ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಮಾ.10: ನಿಶ್ಚಿತಾರ್ಥ ಮುಗಿಸಿ ಬರುವಾಗ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ನಿರ್ವಾಹಕ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಸ್ ಉರುಳಿಬಿದ್ದಾಗ‌ ಬಸ್ ಡೋರ್ ನಲ್ಲಿ ನಿಂತಿದ್ದ ನಿರ್ವಾಹಕ ದೊಡ್ಡಿಂದುವಾಡಿ ನವೀನ್ ಬಸ್ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಸ್ ನಲ್ಲಿದ್ದವರು ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ತೆಳ್ಳನೂರು-ಬಂಡಳ್ಳಿ ಮಾರ್ಗ ಮಧ್ಯೆ ಭಾನುವಾರ ರಾತ್ರಿ ಈ ಅಪಘಾತ ಸಂಭವಿಸಿದೆ.

ಹನೂರು ತಾಲೂಕಿನ ಶ್ಯಾಗ್ಯ ಗ್ರಾಮದ ಯುವಕನಿಗೂ ಕನಕಪುರ ತಾಲೂಕು ಹನಿಯೂರು ಗ್ರಾಮದ ಯುವತಿಗೂ ಮದುವೆ ನಿಶ್ಚಯವಾಗಿತ್ತು.

ಯುವಕನ ಸಂಬಂಧಿಕರು ಕಬ್ಬಳ್ಳಿ ಗ್ರಾಮದಲ್ಲಿ ನಡೆದ ನಿಶ್ಚಿತಾರ್ಥ ಮುಗಿಸಿ ಕೊಂಡು ಖಾಸಗಿ ಬಸ್ ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಬಳಿ ಬಸ್ ಆಯುತಪ್ಪಿ ಹಳ್ಳಕ್ಕೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಒಬ್ಬ ಯುವಕನಿಗೆ ಎರಡು ಕಾಲುಗಳು ತುಂಡರಿಸಿವೆ. ಘಟನೆಯಿಂದ 50 ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ.

ಬಸ್ ಅಪಘಾತವಾಗಿರುವುದನ್ನು ಕಂಡ ದಾರಿಹೋಕರು ಕೂಡಲೇ ಸಂಬಂಧಪಟ್ಟವರಿಗೆ ವಿಚಾರ ಮುಟ್ಟಿಸಿದ್ದಾರೆ ವಿಷಯ ತಿಳಿದ ಶಾಗ್ಯ ಗ್ರಾಮಸ್ಥರು ಹಾಗೂ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಬಸ್ ನ್ನು ಜೆಸಿಬಿಯಿಂದ ಮೇಲೆತ್ತಿಸಿ ಬಸ್ ನಲ್ಲಿದ್ದ ಗಾಯಾಳುಗಳನ್ನು ಹೊರಗೆ ತಂದು ಕೂಡಲೇ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸಾಗಿಸಿದ್ದಾರೆ

ಗಾಯಾಳುಗಳಾದ ಬಸವರಾಜು, ಸಿಂಧು, ರಾಚಪ್ಪ, ನೂತನ್, ರಾಚಯ್ಯ, ಚೆನ್ನಮ್ಮ ವಸಂತ್ ಶಂಕರ್ ಸಿದ್ದಮ್ಮ ಮಹಾದೇವ ತಂಬಡಿ ಮನು ರಾಚಯ್ಯ ರಾಜಮ್ಮ ಮಹಾದೇವಮ್ಮ, ಸಿದ್ದಯ್ಯ, ಹರೀಶ್, ಅರುಣ್, ನಿಖಿಲ್, ಪ್ರೇಮ್ ಸೇರಿದಂತೆ ಇನ್ನಿತರರು ಘಟನೆಯಿಂದ ತೀವ್ರ ಗಾಯಗೊಂಡಿದ್ದಾರೆ.

ಗಾಯಾಳುಗಳಿಗೆ ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ತೀವ್ರ ಗಾಯವಾಗಿರುವ 17 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಉಳಿದವರು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷಯ ತಿಳಿದ ಕೂಡಲೆ ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳಾದ ಎ.ಬಿ. ಮಹೇಶ್ ಅವರು ಇಲ್ಲಿನ ಉಪ ವಿಭಾಗ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳಿಗೆ ಉಪವಿಭಾಗ ಆಸ್ಪತ್ರೆಯ ವೈದ್ಯರುಗಳು ನರ್ಸ್ ಗಳಿಂದ ಪ್ರಥಮ ಚಿಕಿತ್ಸೆ ಕುಡಿಸುವುದರ ಮೂಲಕ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ. 

ಈ ಸಂಬಂಧ ಹನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.