ಹೆಣ್ಣು ಮಕ್ಕಳಿಗೆ ಕರಾಟೆಯು ಸ್ವರಕ್ಷಣೆ; ಮನೋಬಲ ವೃದ್ದಿಗೆ ಸಹಕಾರಿ:ಮುರಳಿ

ನಂಜನಗೂಡು: ಹೆಣ್ಣು ಮಕ್ಕಳಿಗೆ ಕರಾಟೆಯು ಸ್ವರಕ್ಷಣೆ ಹಾಗೂ ಮನೋ ಬಲವೃದ್ದಿಗೆ ಸಹಕಾರಿಯಾಗಲಿದೆ ಎಂದು ಕರಾಟೆ ತರಬೇತಿದಾರ ಮುರಳಿ ತಿಳಿಸಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಣ್ಣು ಮಕ್ಕಳಿಗೆ ಹಮ್ಮಿಕೊಂಡಿದ್ದ ವಿಶೇಷ ಕರಾಟೆ ಸ್ವರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸುರಕ್ಷತೆ, ಆತ್ಮರಕ್ಷಣೆ ಹಾಗೂ ಆತ್ಮವಿಶ್ವಾಸ ವೃದ್ಧಿ ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ‌ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ಅವರು ಮಾತನಾಡಿ,ಇಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸ್ವರಕ್ಷಣಾ ಕೌಶಲ್ಯ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದು ತಿಳಿಹೇಳಿದರು.

ಕರಾಟೆ ತರಬೇತಿ ದೇಹದ ಬಲವರ್ಧನೆಯಷ್ಟೇ ಅಲ್ಲ, ಮನೋಬಲ ಮತ್ತು ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದರು.

ಸ್ವರಕ್ಷಣೆಯ ಮೂಲ ತಂತ್ರಗಳು, ತುರ್ತು ಪರಿಸ್ಥಿತಿಯಲ್ಲಿ ಪ್ರತಿಕ್ರಿಯಿಸುವ ವಿಧಾನಗಳು ಹಾಗೂ ದಿನನಿತ್ಯದ ಸುರಕ್ಷತಾ ಸಲಹೆಗಳನ್ನು ವಿದ್ಯಾರ್ಥಿನಿಯರಿಗೆ ಬೋಧಿಸಲಾಗುತ್ತದೆ ಎಂದು ತಿಳಿಸಿದರು.

ಕಾಲೇಜಿನ ಹಿರಿಯ ಉಪನ್ಯಾಸಕರಾದ ಲಿಂಗಣ್ಣಸ್ವಾಮಿ ಅವರು ಮಾತನಾಡಿ, ಯುವತಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ದಿಟ್ಟತನ ಹೊಂದಿರಬೇಕು. ಇದೇ ಮನೋಭಾವದಿಂದ ಈ ತರಬೇತಿಯನ್ನು ಆಯೋಜಿಸಲಾಗಿದ್ದು, ಮುಂದುವರಿದ ದಿನಗಳಲ್ಲಿ ಇದು ವಿದ್ಯಾರ್ಥಿನಿಯರಿಗೆ ಉಪಯುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ಕರಾಟೆ ತರಬೇತಿ ಪಡೆದ ಮಕ್ಕಳು ಸಮಾರಂಭದಲ್ಲಿ ಕರಾಟೆಯ ವಿವಿಧ ಆಯಾಮಗಳನ್ನು ಪ್ರದರ್ಶಿಸಿದರು.

ಸ್ವರಕ್ಷಣೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.

ಪ್ರತಿನಿತ್ಯ ಬೆಳಗಿನ ಅವಧಿಯಲ್ಲಿ ಕರಾಟೆ ತರಗತಿಗಳನ್ನು ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗ ಹಾಜರಿದ್ದರು.

ಹೆಣ್ಣು ಮಕ್ಕಳಿಗೆ ಕರಾಟೆಯು ಸ್ವರಕ್ಷಣೆ; ಮನೋಬಲ ವೃದ್ದಿಗೆ ಸಹಕಾರಿ:ಮುರಳಿ Read More

ಕ ಪೊ ಅಕಾಡೆಮಿ ಜೊತೆ ಸಾವಿತ್ರಿಬಾಯಿ ಫುಲೆ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಿ

ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿವೆ.

ಈ ಒಡಂಬಡಿಕೆಯು ಎರಡೂ ಸಂಸ್ಥೆಗಳ ನಡುವೆ ಸಂಪನ್ಮೂಲ ವ್ಯಕ್ತಿಗಳ ವಿನಿಮಯ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿಶೇಷ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಕುರಿತಾಗಿದ್ದು, ಎರಡೂ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ, ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯೊಡನೆ ಒಡಂಬಡಿಕೆ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಬಹಳ ವಿಶಿಷ್ಟವಾಗಿದೆ ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲುಗಳು, ಅವರ ಸಮಸ್ಯೆಗಳ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ, ಅವರ ಕುರಿತಾದ ಕಾನೂನುಗಳು ಹಾಗೂ ಅವರಿಗೆ ಸಂಬಂಧಪಟ್ಟ ಪ್ರಚಲಿತ ವಿದ್ಯಮಾನಗಳ ಕುರಿತು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಅಧಿಕಾರಿ ಗಳು ಹಾಗೂ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಸಂವೇದನಾಶೀಲರನ್ನಾಗಿ ಮಾಡಲು ಬಹಳ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಒಡಂಬಡಿಕೆಯ ಮೂಲಕ ಪ್ರಸ್ತುತ ಸಮಾಜದಲ್ಲಿ ಮಹಿಳೆ ಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ದೌರ್ಜನ್ಯಮುಕ್ತ ಸಮಾಜ ನಿರ್ಮಾಣವಾಗುವಂತಾಗಲಿ ಎಂದು ಆಶಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪಿ.ಜೆ.ಫಿಲಿಪ್ಸ್ ಅವರು, ಕರ್ನಾ ಟಕ ಪೊಲೀಸ್ ಅಕಾಡೆಮಿಯೊಡನೆ ಒಡಂಬಡಿಕೆ ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ವರದಿಯಾಗುತ್ತಿರುವ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯಗಳ ಸಂಖ್ಯೆಯನ್ನು ಗಣನೀಯ ವಾಗಿ ಕಡಿಮೆ ಮಾಡುವುದಲ್ಲದೇ, ರಾಜ್ಯವನ್ನು ದೌರ್ಜನ್ಯಮುಕ್ತ ಮಾಡುವಲ್ಲಿ ಪೊಲೀಸ್ ಇಲಾಖೆ ಯೊಂದಿಗೆ ಕೈಜೋಡಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ಇಂತಹ ಆಲೋಚನೆಗೆ ಈ ಸಂಸ್ಥೆಯ ನಿರ್ದೇಶಕ ಚೆನ್ನಬಸವಣ್ಣ ಅವರು ಹಾಗೂ ಎಲ್ಲಾ ಅಧಿಕಾರಿಗಳು ಅಭಿನಂದನಾರ್ಹರು ಎಂದು ತಿಳಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಲೋಕೇಶ್, ಕರ್ನಾಟಕ ಪೊಲೀಸ್ ಅಕಾಡೆಮಿಯ ಅಧಿಕಾರಿ ವರ್ಗ ಹಾಗೂ ಬೋಧಕರು ಹಾಜರಿದ್ದರು.

ಕ ಪೊ ಅಕಾಡೆಮಿ ಜೊತೆ ಸಾವಿತ್ರಿಬಾಯಿ ಫುಲೆ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಿ Read More

ಸೆಕ್ಸ್ ಗೆ ಸಹಕರಿಸು ಎಂದ ಕಾರ್ಖಾನೆ ಮಾಲೀಕನ ವಿರುದ್ದ ಮಹಿಳೆ ದೂರು

ಮೈಸೂರು: ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಸಲ್ಯೂಷನ್ಸ್ ಮ್ಯಾನುಫ್ಯಾಕ್ಚರ್ ಕಂಪನಿ ಮಾಲೀಕ ಮುರಳಿಧರ್ ಎಂಬುವರ ಮೇಲೆ ನೊಂದ ಮಹಿಳಾ ಉದ್ಯೋಗಿ ಪ್ರಕರಣ ದಾಖಲಿಸಿದ್ದಾರೆ.

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಗೆ ಮಾಲೀಕ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ.ಸೆಕ್ಸ್ ನಲ್ಲಿ ಸಹಾಯ ಮಾಡಿದ್ರೆ ಚೆನ್ನಾಗಿ ನೋಡಿಕೊಳ್ತೀನಿ ಎಂದು ಒತ್ತಾಯಿಸಿದ್ದಾರೆ.

ಮೊಬೈಲ್ ಗಳಿಂದ ಮೆಸೇಜ್ ಮಾಡಿದ್ದಾರೆ.ಇದರಿಂದ ನೊಂದ ಉದ್ಯೋಗಿ ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಾರೆ.ಹೀಗಿದ್ದೂ ಬಿಡದ ಮಾಲೀಕ ಮುರಳಿಧರ್ ಮಹಿಳೆ ಹಿಂದೆ ಬಿದ್ದಿದ್ದಾನೆ.
ಮನೆಗೆ ಬಂದು ಕೆಲಸಕ್ಕೆ ಹಿಂದಿರುಗು ಇಲ್ಲದಿದ್ದರೆ ನಿನ್ನ ಬಗ್ಗೆ ಅಪಪ್ರಚಾರ ಮಾಡುವುದಾಗಿ ಹೆದರಿಸಿದ್ದಾನೆ.

ಕಳೆದ ಎರಡು ತಿಂಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿರುವ ನೊಂದ ಮಹಿಳಾ ಉದ್ಯೋಗಿ ಮಾಲೀಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹೆಬ್ಬಾಳ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಸೆಕ್ಸ್ ಗೆ ಸಹಕರಿಸು ಎಂದ ಕಾರ್ಖಾನೆ ಮಾಲೀಕನ ವಿರುದ್ದ ಮಹಿಳೆ ದೂರು Read More

ಡಿಕೆಶಿಯನ್ನು ಸಿಎಂ ಎಂದು ಬರೆದಚನ್ನರಾಜ ಹಟ್ಟಿಹೊಳಿ!

ಬೆಳಗಾವಿ: ಡಿ ಕೆ.ಶಿವಕುಮಾರ್ ಮುಖ್ಯ ಮಂತ್ರಿ ಆಗ್ತಾರೋ ಬಿಡ್ತಾರೊ ಗೊತ್ತಿಲ್ಲ.ಆದರೆ ಬಗೆಗೆ ದಿನಕ್ಕೊಂದು ಹೇಳಿಕೆಗಳು ಚರ್ಚೆ ಹುಟ್ಟು ಹಾಕುತ್ತಿರುವುದಂತೂ ಸತ್ಯ.

ಬೆಳಗಾವಿ ಅಧಿವೇಶನದ ಎರಡನೇ ದಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಸಿಎಂ ಡಿ.‌ಕೆ. ಶಿವಕುಮಾರ್ ಅವರ ಕುರಿತು ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮುಖ್ಯಮಂತ್ರಿ ಎಂದು ಹೇಳಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ಚನ್ನರಾಜ ಹಟ್ಟಿಹೊಳಿ ಜಾಲತಾಣದಲ್ಲಿ ಈ ರೀತಿ ಬರೆದುಕೊಂಡಿದ್ದು ಆಕಸ್ಮಿಕವಾಗಿ ಏನಲ್ಲ, ಜಾಣತನ ತೋರಿದ್ದಾರೆ ಎಂದು ರಾಜಕೀಯ ನಾಯಕರು ಮಾತನಾಡುತ್ತಿದ್ದಾರೆ.

ಡಿ.‌ಕೆ. ಶಿವಕುಮಾರ್ ಬಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅವರ ಸಹೋದರ ಗುರುತಿಸಿಕೊಂಡು ಡಿಕೆಶಿ ಮುಖ್ಯಮಂತ್ರಿ ಗಾದಿಗೆ ಸಪೋರ್ಟ್ ನೀಡುತಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣದ ತಮ್ಮ ಬರಹವನ್ನು ನಂತರ ಬದಲಾಯಿಸಿರುವ ಚನ್ನರಾಜ ಹಟ್ಟಿಹೊಳಿ ನಂತರ ಉಪ ಮುಖ್ಯಮಂತ್ರಿ ಎಂದು ಬರೆದುಕೊಂಡು ತೇಪೆ ಹಾಕಿದ್ದಾರೆ.
ಆದರೆ ಅವರು ಒಮ್ಮೆ ಬರೆದದ್ದು ವೈರಲ್ ಆಗಿಬಿಟ್ಟಿದೆ!

ಡಿಕೆಶಿಯನ್ನು ಸಿಎಂ ಎಂದು ಬರೆದಚನ್ನರಾಜ ಹಟ್ಟಿಹೊಳಿ! Read More

ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ವಂದೇ ಮಾತರಂ ಹಾಡನ್ನು ಒಡೆಯಿತು:ಮೋದಿ

ನವದೆಹಲಿ: ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ವಂದೇ ಮಾತರಂ ಹಾಡನ್ನು ಒಡೆದು ತುಂಡು ಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.

ವಂದೇ ಮಾತರಂ ಹಾಡಿಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಸೋಮವಾರ ಚರ್ಚೆ ಆರಂಭಿಸಿದ ಮೋದಿ, ವಂದೇ ಮಾತರಂ ವಿರುದ್ಧ ಜಿನ್ನಾ ನಡೆಸಿದ ಪ್ರತಿಭಟನೆಯನ್ನು ನೆಹರು ಬೆಂಬಲಿಸಿದರು. ಕೊನೆಗೆ ಕಾಂಗ್ರೆಸ್ ಮುಸ್ಲಿಂ ಲೀಗ್‌ಗೆ ತಲೆಬಾಗಿ ತುಂಡು ಮಾಡಿತು ಎಂದು ವಾಗ್ದಾಳಿ ನಡೆಸಿದರು.

ವಂದೇ ಮಾತರಂ ವಿರುದ್ಧ ಮುಸ್ಲಿಂ ಲೀಗ್ ನೆಹರು ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿತು. ಮೊಹಮ್ಮದ್ ಅಲಿ ಜಿನ್ನಾ ಅದರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗಿನ ಕಾಂಗ್ರೆಸ್ ಮುಖ್ಯಸ್ಥ ಜವಾಹರಲಾಲ್ ನೆಹರು ಜಿನ್ನಾ ಹೇಳಿಕೆಗಳನ್ನು ಖಂಡಿಸಲು ಹೋಗಲೇ ಇಲ್ಲ, ವಂದೇ ಮಾತರಂ ಬಗ್ಗೆ ತಮ್ಮ ಮತ್ತು ಪಕ್ಷದ ನಿಷ್ಠೆಯನ್ನು ವ್ಯಕ್ತಪಡಿಸುವ ಬದಲು ಜಿನ್ನಾ ವಿರೋಧಿಸಿದ ಕೇವಲ ಐದು ದಿನಗಳ ನಂತರ ವಂದೇ ಮಾತರಂ ಪರಿಶೀಲಿಸಲು ಆರಂಭಿಸಿದರು.

ಜಿನ್ನಾ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸಿದ ನಂತರ ಪಂಡಿತ್ ಜವಾಹರಲಾಲ್ ನೆಹರು ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಪತ್ರ ಬರೆದು, ವಂದೇ ಮಾತರಂನ ಹಿನ್ನೆಲೆಯನ್ನು ತಾವು ಓದಿರುವುದಾಗಿ ಮತ್ತು ಅದು ಮುಸ್ಲಿಮರನ್ನು ಕೆರಳಿಸಬಹುದು, ಕಿರಿಕಿರಿಯಾಗಬಹುದು ಎಂದು ಭಾವಿಸಿರುವುದಾಗಿ ಹೇಳಿದರು.

ವಂದೇ ಮಾತರಂ ಪರಿಶೀಲನೆಗೆ ಒಳಪಡಿಸಿದ ನಂತರ ದೇಶದ ದುರ್ಭಾಗ್ಯ ಎಂಬಂತೆ ಕಾಂಗ್ರೆಸ್ ಮುಸ್ಲಿಂ ಲೀಗ್‌ ಒತ್ತಡಕ್ಕೆ ತಲೆಬಾಗಿ ಹಾಡನ್ನು ಕತ್ತರಿಸಿತು, ಕಾಂಗ್ರೆಸ್ ತುಷ್ಟೀಕರಣದ ಒತ್ತಡದಲ್ಲಿ ವಂದೇ ಮಾತರಂ ಅನ್ನು ವಿಭಜಿಸಿತು ಎಂದು ಮೋದಿ ಪುಂಕಾನುಪುಂಕವಾಗಿ‌ ಕಿಡಿಕಾರಿದರು.

ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ವಂದೇ ಮಾತರಂ ಹಾಡನ್ನು ಒಡೆಯಿತು:ಮೋದಿ Read More

ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾದಸಬ್ ಇನ್ಸ್‌ಪೆಕ್ಟರ್ ಮಹೇಂದ್ರ

ಮೈಸೂರು: ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಪಿ.ಅವರು
ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೭೦ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಪಿ.ಅವರಿಗೆ
ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ನೀಡಲಾದ ’ಕನ್ನಡಾಂಬೆ ರತ್ನ’ ಪ್ರಶಸ್ತಿಯನ್ನು ವೇದಿಕೆಯ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ, ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಕಿರಣ್, ಇ.ವಿ.ನಾಗರಾಜು, ಹರೀಶ್, ಹೊನ್ನೇಗೌಡ, ದೊರೆಸ್ವಾಮಿ, ಗುರು, ಶೇಖರ್, ಮೋಹನ, ಶ್ರೀನಿವಾಸ್, ವಿಜಿ ಕುಮಾರ್ ಮತ್ತು ಇತರೆ ಪದಾಧಿಕಾರಿಗಳು ಹಾಜರಿದ್ದರು.

ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾದಸಬ್ ಇನ್ಸ್‌ಪೆಕ್ಟರ್ ಮಹೇಂದ್ರ Read More

ಸಿದ್ದು ಪರ ಮತ್ತೆ ಪುತ್ರ ಯತೀಂದ್ರ ‌ಬ್ಯಾಟಿಂಗ್

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಗೊಂದಲಗಳಿಗೆ ತೆರೆ ಬಿತ್ತು ಅನ್ನುವಷ್ಟರಲ್ಲಿ ಸಿಎಂ ಸಿದ್ದು ಪುತ್ರ ಯತೀಂದ್ರ ಮತ್ತೆ ತಂದೆ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರೇ ಪೂರ್ಣಾ ವಧಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು,ಚರ್ಚೆಗೆ ಗ್ರಾಸ ಒದಗಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಪೂರ್ಣ ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿರುತ್ತಾರೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

ಹೈಕಮಾಂಡ್ ಹಲವಾರು ವಿಚಾರಗಳಿಗೆ ಕರೆಯುತ್ತಾರೆ ಹೋಗಿ ಮಾತನಾಡಿಕೊಂಡು ಬರುತ್ತಾರೆ. ಆ ರೀತಿ ಆಗಬಹುದು ಈ ರೀತಿ ಆಗಬಹುದು ಅನ್ನೋದು ಈಗಲೇ ಯಾಕೆ ಎಂದು ಪ್ರಶ್ನಿಸಿದರು.

ಡಿಸಿಎಂ ಶಿವಕುಮಾರ್‌ ನಾನು ಮುಖ್ಯಮಂತ್ರಿ ಆಗಬೇಕು ಎಂದು ಕೇಳಿದರು. ಹಾಗಾಗಿ ಗೊಂದಲ ಇತ್ತು ಹೈಕಮಾಂಡ್ ಸ್ಪಷ್ಟನೆ ಕೊಟ್ಟಿದೆ,ಮತ್ತೆ ಇನ್ನೇನು ಇಲ್ಲ ಎಂದು ಯತೀಂದ್ರ ತಿಳಿಸಿದರು.

ಸಿದ್ದು ಪರ ಮತ್ತೆ ಪುತ್ರ ಯತೀಂದ್ರ ‌ಬ್ಯಾಟಿಂಗ್ Read More

ಏನ್‌ ಸಣ್ಣ ಅಗಿದ್ಯಾ; ಅಶೋಕ್ ಗೆ ಕಿಚಾಯಿಸಿದ ಸಿದ್ದರಾಮಯ್ಯ

ಬೆಳಗಾವಿ: ಏನ್‌ ಅಶೋಕ ಸಣ್ಣ ಅಗಿದಿಯಲ್ಲಾ…ಹೀಗೆ ಕಿಚಾಯಿಸಿದ್ದು ಸಿಎಂ ಸಿದ್ದರಾಮಯ್ಯ.
ಚಳಿಗಾಲದ ಅಧಿವೇಶನ ಆರಂಭಕ್ಕೂ ಮೊದಲು ಸ್ಪೀಕರ್ ಕೊಠಡಿಯಲ್ಲಿ ಸಿದ್ದರಾಮಯ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಅಶೋಕ್, ಸುನೀಲ್ ‌ಕುಮಾರ್ ಮುಖಾಮುಖಿಯಾದ ವೇಳೆ ಮುಖ್ಯ ಮಂತ್ರಿಗಳು ರೇಗಿಸಿದರು.
ಸಿಎಂ ಬರುವ ಮುಂಚೆಯೇ ಸ್ಪೀಕರ್ ಖಾದರ್‌ ಅವರನ್ನು ಅಶೋಕ್, ಸುನೀಲ್ ‌ಕುಮಾರ್ ಭೇಟಿಯಾಗಿದ್ದರು. ಈ ವೇಳೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಕೈಕುಲುಕಿ ವಿಪಕ್ಷ ನಾಯಕರು ಶುಭ ಕೋರಿದರು.
ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಸಿಎಂ ರೇಗಿಸಿದರು.ಆಗ ಇಬ್ಬರು ನಾಯಕರು ಉತ್ತರ ನೀಡದೇ ನಕ್ಕಿದರು.
ಅಶೋಕ್‌ ಅವರಿಗೆ ಸಿದ್ದರಾಮಯ್ಯ, ಏನ್ ಸಣ್ಣ ಆಗಿದ್ದೀಯಾ ಅಶೋಕ್ ಎಂದು ಕಿಚಾಯಿಸಿದರು. ಅದಕ್ಕೆ ನಿಮ್ಮ ಥರ ನಾಟಿ ಕೋಳಿ ತಿನ್ನಲ್ಲ ಸರ್, ನಾನು ಎಲ್ಲವನ್ನು ಬಿಟ್ಟಿದ್ದೀನಿ ಎಂದು ನಗುತ್ತಲೇ ಟಾಂಗ್ ನೀಡಿದರು.
ಅದಕ್ಕೆ ಸಿಎಂ, ಹೇ.. ತಿನ್ನು ಏನೂ ಆಗಲ್ಲ. ಬಾ ತಿನ್ನೋಣ ಎಂದು ಕರೆದರು. ಇದಕ್ಕೆ ಅಶೋಕ್‌ ನಗುತ್ತಾ ಮುಂದೆ ಸಾಗಿದರು.

ಏನ್‌ ಸಣ್ಣ ಅಗಿದ್ಯಾ; ಅಶೋಕ್ ಗೆ ಕಿಚಾಯಿಸಿದ ಸಿದ್ದರಾಮಯ್ಯ Read More

ಸಂವಿಧಾನ ಪಾಲನೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ:ಅಯೂಬ್ ಖಾನ್

ಮೈಸೂರು: ಸಂವಿಧಾನ ಪಾಲನೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ
ಅಯೂಬ್ ಖಾನ್ ತಿಳಿಸಿದರು.

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 69ನೇ ಪರಿನಿಬ್ಬಾಣ ದಿನ ಆಚರಣೆ ವೇಳೆ ಬಾಬಾ ಸಾಹೇಬರ ಭಾವಚಿತ್ರಕ್ಕೆ ಅಯೂಬ್ ಖಾನ್ ಅವರು ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಅಸಮಾನತೆಯ ಕತ್ತಲಲ್ಲಿ ತತ್ತರಿಸುತ್ತಿದ್ದ ಭಾರತಕ್ಕೆ ಬೆಳಕು ನೀಡಿದ ಸೂರ್ಯನನ್ನು ಕಳೆದುಕೊಂಡು ಇಡೀ ದೇಶವೇ 1956.ಡಿ.6 ಕಣ್ಣೀರು ಹರಿಸಿತ್ತು. ಇಂದು ದೇಶದಲ್ಲಿ ನ್ಯಾಯಂಗ, ಕಾರ್ಯಾಂಗ, ಶಾಸಕಾಂಗದ ಮೂಲಕ ಇಡೀ ಭಾರತದಲ್ಲಿ ಆಡಳಿತ ಅಭಿವೃದ್ಧಿಯ ಕಾನೂನನ್ನ ರಚಿಸಿ ದೇಶದ ಕಟ್ಟಕಡೆಯ ವ್ಯಕ್ತಿಗೆ ಸ್ವಾತಂತ್ರ್ಯ, ಸಮಾನತೆ, ರಕ್ಷಣೆ, ಹಕ್ಕುಗಳನ್ನ ನೀಡಿದ್ದು ಬಾಬಸಾಹೇಬರು ರಚಿಸಿಕೊಟ್ಟ ಸಂವಿಧಾನದಿಂದ.ಈ‌ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡಬೇಕಿದೆ ಎಂದು ತಿಳಿಸಿದರು.

ಭಾರತೀಯರ ಸ್ವಾಭಿಮಾನದ ಪ್ರತೀಕವಾದ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದದ ನೆಲೆಗಟ್ಟಿನಲ್ಲಿ ಸರ್ವಧರ್ಮ ಸಮನ್ವಯ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಅಂಬೇಡ್ಕರ್ ಅವರ ಪರಿನಿಬ್ಬಾಣವಾದ ದಿನದಂದು ಅವರ ಚಿಂತನೆಗಳನ್ನು ಜೀವಂತವಿರಿಸಿ, ಅವುಗಳನ್ನು ಪಾಲಿಸಿಕೊಂಡು ಮುನ್ನಡೆಯೋಣ ಎಂದು ಕರೆ ನೀಡಿದರು.

ಮಹಾನಾಯಕ ಅಂಬೇಡ್ಕರ್‌ ಅವರು ಕಂಡ ಕನಸುಗಳನ್ನು ಸಾಕಾರಗೊಳಿಸುವ ಸಾಮಾಜಿಕ ಬದ್ಧತೆ ತೋರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಯೂಬ್ ಖಾನ್ ನುಡಿದರು.

ಸಾಂಸ್ಕೃತಿಕ ಸಮಿತಿಯು ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಆಯೋಜನೆ ಮಾಡಿದ್ದ ಸಮಾರಂಭದಲ್ಲಿ ಬಾಬಾ ಸಾಹೇಬರ ಗೀತೆಗಳ ಮೂಲಕ ಸ್ಮರಿಸಿ, ಸಂವಿಧಾನ ಪೀಠಿಕೆ ಭೋದನೆ ಮಾಡಲಾಯಿತು.

ಪ್ರಾಧಿಕಾರದ ಸಿಇಒ ಕೆ.ರುದ್ರೇಶ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್. ಎಸ್, ಉಪಾಧ್ಯಕ್ಷರುಗಳಾದ ರಂಗಸ್ವಾಮಿ ಪಾಪು, ಶಿವಲಿಂಗಯ್ಯ, ರಾಜೇಶ್ ಸಿ ಗೌಡ, ರಘುರಾಜೇ ಅರಸ್, ಪದ್ಮನಾಭ್ ಗುಂಡಣ್ಣ, ನಿರೂಪಕ ಅಜಯ್ ಶಾಸ್ತ್ರಿ, ಭವ್ಯ, ಜಯಲಕ್ಷ್ಮಿ, ಚಂದ್ರಕಲಾ, ಸರಸ್ವತಿ, ಗೌರಮ್ಮ, ವರುಣಾ ಪ್ರಶಾಂತ್, ಉಮೇಶ್, ಸೈಯದ್ ಇಸ್ಮಾಯಿಲ್, ಸಮಿ ಅನ್ವರ್, ಮನ್ಸೂರ್ ಅಲಿ ಮತ್ತಿತರರು ಹಾಜರಿದ್ದರು.

ಸಂವಿಧಾನ ಪಾಲನೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ:ಅಯೂಬ್ ಖಾನ್ Read More

ರಷ್ಯಾ- ಉಕ್ರೇನ್​ ನಡುವೆ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ

ಉಕ್ರೇನ್: ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು ಶಾಂತಿ ಪ್ರಸ್ತಾವನೆಯನ್ನು ಎರಡು ರಾಷ್ಟ್ರಗಳು ಒಪ್ಪಿವೆ. ಆದರೆ, ಈ ಶಾಂತಿ ಪ್ರಸ್ತಾವಕ್ಕೆ ಸಹಿ ಹಾಕಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಿದ್ಧರಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರ ಪಟ್ಟಿದ್ದಾರೆ.
ಅಮೆರಿಕ ಆಡಳಿತದ ಶಾಂತಿ ಪ್ರಸ್ತಾವನೆಯನ್ನು ಮಾರ್ಪಡಿಸುವಂತೆ ಈ ಹಿಂದೆಯೂ ಕೂಡ ಉಕ್ರೇನ್​ ಒತ್ತಾಯಿಸಿತ್ತು. ಹಾಗಾಗಿ ತಿದ್ದುಪಡಿಯ ಬಳಿಕ ಪ್ರಸ್ತಾವನೆಯ ಮೇಲಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕ ಮತ್ತು ಉಕ್ರೇನ್ ಸಮಾಲೋಚಕರು ಮೂರು ದಿನಗಳ ಮಾತುಕತೆ ನಡೆಸಿದ ನಂತರವೂ ಝೆಲೆನ್ಸ್ಕಿ ಒಪ್ಪಿಗೆ ನೀಡಿಲ್ಲ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್​, ಉಕ್ರೇನ್ ನಾಯಕ ಮಾತುಕತೆಗಳು ಮುಂದುವರಿಯುವುದನ್ನು ತಡೆಹಿಡಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಝೆಲೆನ್ಸ್ಕಿ ನಮ್ಮ ಪ್ರಸ್ತಾವನೆಯನ್ನು ಇನ್ನೂ ಓದಿಲ್ಲ ಎಂಬುದು ನಿರಾಶೆಯಾಗುತ್ತಿದೆ. ಈ ಪ್ರಸ್ತಾವನೆಯನ್ನು ಅವರ ಜನರು ಮೆಚ್ಚಿದ್ದಾರೆ. ರಷ್ಯಾ ಪ್ರಸ್ತಾವನೆಗೆ ಒಪ್ಪಿದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
ಆದರೆ, ಈ ಪ್ರಸ್ತಾವಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಕೂಡ ಸಾರ್ವಜನಿಕವಾಗಿ ಅನುಮೋದನೆ ನೀಡಿಲ್ಲ.
ಫ್ಲೋರಿಡಾದಲ್ಲಿ ಉಕ್ರೇನಿಯನ್ ನಿಯೋಗದೊಂದಿಗೆ ಅಮೆರಿಕದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಝೆಲೆನ್ಸ್ಕಿ ಅವರಿಗೆ ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಝೆಲೆನ್ಸ್ಕಿ ಪೋಸ್ಟ್ ಹಾಕುದ್ದು,ಉಕ್ರೇನ್ ಶಾಂತಿ ಸಾಧಿಸಲು ಅಮೆರಿಕದೊಂದಿಗೆ ದೃಢನಿಶ್ಚಯ ಹೊಂದಿದೆ ಎಂದು ತಿಳಿಸಿದ್ದಾರೆ.

ರಷ್ಯಾ- ಉಕ್ರೇನ್​ ನಡುವೆ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ Read More