ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಕ್ಷೇತ್ರದ ಅನುದಾನಕ್ಕಾಗಿ ವಿಪಕ್ಷದ ಶಾಸಕರು ತಾಳ್ಮೆಯಿಂದ ಕಾಯಬೇಕು ಎಂದರೆ ಏನು ಸ್ವಾಮಿ ಅರ್ಥ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯ ವಾಡಿದ್ದಾರೆ.
ತಾವು ಈ ಮೊದಲೇ ಹೇಳಿರುವಂತೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎನ್ನುವುದು ನಿಮ್ಮ ಮಾತಿನ ಅರ್ಥವೇನು ಅಥವಾ ತಾಳ್ಮೆಯಿಂದ ಇರದಿದ್ದರೆ ನಟ್ಟು-ಬೋಲ್ಟು ಟೈಟು ಮಾಡುತ್ತೇನೆ ಎನ್ನುವ ಧಮ್ಕಿನಾ ಎಂದು ಅಶೋಕ್ ಟ್ವೀಟ್ ಮಾಡಿ ಕಾರವಾಗಿ ಪ್ರಶ್ನಿಸಿದ್ದಾರೆ.
ತಮಗೆ ಇಷ್ಟ ಬಂದ ಹಾಗೆ ಬರೀ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಕೊಡೋಕೆ ರಾಜ್ಯ ಸರ್ಕಾರದ ಖಜಾನೆ ನಿಮ್ಮ ಪಕ್ಷದ ಪಾರ್ಟಿ ಫಂಡ್ ಅಲ್ಲ, ಅದು ಆರೂವರೆ ಕೋಟಿ ಕನ್ನಡಿಗರ ಬೆವರಿನ ತೆರಿಗೆ ಹಣ ಎಂಬುದನ್ನು ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ಈ ಮಲತಾಯಿ ದೋರಣೆ ನಿಲ್ಲಿಸಿ, ಎಲ್ಲಾ ಕ್ಷೇತ್ರಗಳಿಗೂ ಸಮಬಾಗಿ ಅನುದಾನ ಬಿಡುಗಡೆ ಮಾಡಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ಕಳೆದ 26 ತಿಂಗಳುಗಳಲ್ಲಿ ತಮ್ಮದೇ ಪಕ್ಷದ ಸರ್ಕಾರದಿಂದ ನಯಾ ಪೈಸೆ ಅನುದಾನ ಪಡೆಯಲಾಗದೆ ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಲಾಗದ ಪರಿಸ್ಥಿತಿ ಎದುರಿಸುತ್ತಿದ್ದ ಕಾಂಗ್ರೆಸ್ ಶಾಸಕರು, ಸೂಪರ್ ಸಿಎಂ ಸುರ್ಜೆವಾಲ ಅವರ 6 ದಿನಗಳ ಸಭೆಯ ಪರಿಣಾಮದಿಂದ, ಸಿಎಂ ಅವರ ಬಳಿ ತಲಾ 50 ಕೋಟಿ ರೂ ಅನುದಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಸೂಪರ್ ಸಿಎಂ ಅವರೇ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಿಸಿಕೊಟ್ಟ ತಮಗೆ ಅಭಿನಂದನೆಗಳು ಹಾಗೂ ಜೆಡಿಎಸ್, ಬಿಜೆಪಿ ಶಾಸಕರ ಕ್ಷೇತ್ರಗಳಿಗೂ ಅನುದಾನ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ ಎಂದು ಸುರ್ಜೆವಾಲ ವಿರುದ್ಧವೂ ವ್ಯಂಗ್ಯ ವಾಡಿದ್ದಾರೆ.
ನಿಮ್ಮ ಸೂಚನೆಯ ಫಲವಾಗಿ ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೂ ಅನುದಾನ ಸಿಕ್ಕರೆ ತಮಗೆ ವಿಶೇಷ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸುತ್ತೇವೆ, ಕೊಡಿಸುತ್ತೀರಲ್ಲ ಎಂದು ವ್ಯಂಗ್ಯವಾಗಿಯೇ ಅಶೋಕ್ ಮನವಿ ಮಾಡಿದ್ದಾರೆ.