ಅಂಬಾವಿಲಾಸ ಅರಮನೆಗೆ ಹೈಟೆಕ್ ಭದ್ರತೆ

Spread the love

ಮೈಸೂರು: ವಿಶ್ವವಿಖ್ಯಾತ ಮೈಸೂರು ಅಂಬಾವಿಲಾಸ ಅರಮನೆ ಭಾರತದ ಹೆಮ್ಮೆ, ಇದು ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ವಾಸ್ತುಶಿಲ್ಪಕೃತ್ಯಗಳಲ್ಲಿ ಒಂದಾಗಿದೆ.

ಈ ಅರಮನೆಯನ್ನು ಭಾರತೀಯ-ಸಾರಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಪಾರಂಪರಿಕ ಮಹತ್ವ ಹೊಂದಿರುವ ಅರಮನೆಗೆ ಪ್ರತಿದಿನ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.

ಹಾಗಾಗಿ ಅರಮನೆಯ ರಕ್ಷಣೆಯೂ ಅಷ್ಟೆ ಮುಖ್ಯವಾಗಿದ್ದು ಮೈಸೂರು ಅರಮನೆ ಮಂಡಳಿ ಹೈಟೆಕ್ ಭದ್ರತೆ ನೀಡಲು ಮುಂದಡಿ ಇಟ್ಟಿದೆ, ಅರಮನೆ ಪ್ರವೇಶದ್ವಾರದಿಂದ ಹಿಡಿದು ಜನ ನಿರ್ಗಮಿಸುವ ತನಕ ಅವರ ಮೇಲೆ ಹದ್ದಿನ ಕಣ್ಣಿಡುವ ವ್ಯವಸ್ಥೆ ಜಾರಿಗೊಳಿಸಿದೆ.

ಈ ಬಗ್ಗೆ ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ಅವರು ಮಾತನಾಡಿ, ಮೈಸೂರು ಅರಮನೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವುದರಿಂದ, ಆಸ್ತಿ ಮತ್ತು ವ್ಯಕ್ತಿಯ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.

ಅರಮನೆ ಸೆಕ್ಯೂರಿಟಿ ವ್ಯವಸ್ಥೆ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ.ಸುಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಸಂಪೂರ್ಣ ಅರಮನೆ ಸುತ್ತಮುತ್ತ ಅಳವಡಿಸಲಾಗಿದೆ.

ಒಟ್ಟು 132 ಐಪಿ ಬೇಸ್ಡ್‌ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಇದು 24ಗಂಟೆ ನಿಗಾವಹಿಸುತ್ತದೆ.ವ್ಯಕ್ತಿಯೊಬ್ಬರು ಅರಮನೆಗೆ ಪ್ರವೇಶ ಪಡೆದಾಗಿನಿಂದ ಅವರು ಅರಮನೆಯಿಂದ ನಿರ್ಗಮಿಸುವ ತನಕ ಸಿಸಿಟಿವಿ ಕಣ್ಗಾವಲಿನಲ್ಲಿರುತ್ತಾರೆ ಎಂದು ತಿಳಿಸಿದರು.

ಫಿಕ್ಸ್ಡ್‌ ಕ್ಯಾಮೆರಾ ಜತೆಗೆ 360 ಡಿಗ್ರಿ ಕೋನದ ಕ್ಯಾಮೆರಾಗಳನ್ನು ಸಹ ಬಳಸಲಾಗುತ್ತಿದೆ. ಈ ಸಿಸಿಟಿವಿ ಫ್ಯೂಟೇಜ್‌ ಗಳನ್ನು ಮೂರು ತಿಂಗಳವರೆಗೆ ಸಂರಕ್ಷಿಸಿಡಲಾಗುತ್ತದೆ. ಇದರ ನಿರ್ವಹಣೆಗೆ ಪ್ರತ್ಯೇಕವಾದ ಕಂಟ್ರೋಲ್‌ ರೂಂ ನಿರ್ಮಿಸಲಾಗಿದೆ.

ಅಲ್ಲಿ ದಿನದ 24 ಗಂಟೆಯೂ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಇಲ್ಲಿ ಬಯೋ ಮೆಟ್ರಿಕ್‌ ಪದ್ಧತಿ ಜಾರಿಗೊಳಿಸಿದ್ದು ಅತ್ಯಂತ ಸುರಕ್ಷಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಕಂಟ್ರೋಲ್‌ ರೂಂ ನಲ್ಲಿ ಕುಳಿತುಕೊಂಡು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ಅಥವಾ ಸೂಕ್ತ ಮಾಹಿತಿ ನೀಡುಬಹುದಾಗಿದೆ. ಅರಮನೆಯಲ್ಲಿ ಚಿನ್ನದ ಅಂಬಾರಿ, ಖಾಸಗಿ ದರ್ಬಾರ್‌, ಕಲ್ಯಾಣ ಮಂಟಪ ಸೇರಿದಂತೆ ವಿವಿಧ ಪ್ರಾಂಗಾಣಗಳಿದ್ದು, ನಿರ್ಧಿಷ್ಠ ಪ್ರಾಂಗಣದಲ್ಲಿ ಇರುವ ವ್ಯಕ್ತಿಗಳಿಗೆ ಮಾತ್ರ ತಲುಪುವಂತೆ ಸಂದೇಶಗಳನ್ನು ಈ ವ್ಯವಸ್ಥೆ ಸಹಾಯದಿಂದ ಪ್ರಚಾರ ಮಾಡಬಹುದಾಗಿದೆ ಎಂದು ವಿವರಿಸಿದರು.

ಪ್ರವಾಸಿಗರ ಪ್ರವೇಶವನ್ನು ನಿಯಂತ್ರಿಸಲು ನಿಗದಿತ ಸ್ಥಳಗಳಲ್ಲಿ ತಪಾಸಣೆ ಗೇಟುಗಳು ಕಾರ್ಯನಿರ್ವಹಿಸುತ್ತವೆ. ಅರಮನೆ ಸಿಬ್ಬಂದಿ ಜತೆಗೆ ಪೊಲೀಸರು, ಹಾಗೂ ಮೆಟಲ್‌ ಡಿಟೆಕ್ಟರ್‌ ಉಪಕರಣಗಳು ಇರುತ್ತವೆ. ಬೃಹತ್ ಸಮಾರಂಭಗಳು ನಡೆಯುವ ವೇಳೆ ಹೆಚ್ಚುವರಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಸುಭ್ರಮಣ್ಯ ತಿಳಿಸಿದರು.