ಬೆಂಗಳೂರು: ಬೆಂಗಳೂರಿನ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ರಸ್ತೆ ಬದಿ ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಡ್ಯಾನ್ಸರ್ ಸುಧೀಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಸ್ತೆಯಲ್ಲಿ ಕೆಟ್ಟು ನಿಂತ ಕಾರನ್ನು ಸುಧೀಂದ್ರ ಪರಿಶೀಲನೆ ಮಾಡುತ್ತಿದ್ದಾಗ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಸುದ್ದಿ ತಿಳಿದ ಕೂಡಲೇ ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಸುಧೀಂದ್ರ ಅವರ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡರು.
ಸುಧೀಂದ್ರ ಸೋಮವಾರವಷ್ಟೇ ಹೊಸ ಮಾರುತಿ ಸುಜುಕಿ ಎಕೋ ಕಾರು ಡೆಲಿವರಿ ಪಡೆದಿದ್ದರು. ರಸ್ತೆ ಮಧ್ಯೆ ಕಾರು ಕೆಟ್ಟು ನಿಂತಿದ್ದರಿಂದ ಪರೀಕ್ಷಿಸಲು ಕಾರಿನಿಂದ ಕೆಳಗಿಳಿದು ನೋಡುತ್ತಿದ್ದಾಗ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ.
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಸುಧೀಂದ್ರ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಅಲ್ಲದೇ ಡಾಬಸ್ ಪೇಟೆಯಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಾ ನೂರಾರು ಯುವಕ, ಯುವತಿಯರಿಗೆ, ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿದ್ದರು.

