ಬೆಂಗಳೂರು: ಸಣ್ಣ ಸಣ್ಣ ವ್ಯಾಪಾರಗಳಲ್ಲಿ ತೊಡಗಿಕೊಂಡು ಸ್ವಯಂ ಉದ್ಯೋಗ ನಡೆಸುತ್ತಿರುವ ವರ್ಗಗಳಿಗೆ ರಾಜ್ಯ ಸರ್ಕಾರ ಜಿಎಸ್‌ಟಿ ನೋಟಿಸ್ ನೀಡಿ ಕಿರುಕುಳ ಕೊಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.
ದೇಶದಲ್ಲಿ ತಾಂಡವವಾಡುತ್ತಿ
ರುವ ನಿರುದ್ಯೋಗ ಸಮಸ್ಯೆಯಿಂದ ಕಂಗೆಟ್ಟ ಪ್ರತಿಭಾವಂತ ಹಾಗೂ ವಿದ್ಯಾವಂತ ಯುವಕರು ತಮ್ಮ ಜೀವನಕ್ಕಾಗಿ ಬೇಕರಿ, ಕಾಂಡಿಮೆಂಟ್ಸ್ ಸೇರಿದಂತೆ ಸಣ್ಣ ಸಣ್ಣ ವ್ಯಾಪಾರಗಳಲ್ಲಿ ತೊಡಗಿಕೊಂಡು ಸ್ವಯಂ ಉದ್ಯೋಗ ನಡೆಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ.ಆದರೆ ಈ ವರ್ಗಗಳಿಗೆ ರಾಜ್ಯ ಸರ್ಕಾರ ಜಿಎಸ್‌ಟಿ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದೆ,ಇದನ್ನು ಆಮ್ ಆದ್ಮಿ ಪಕ್ಷ ವಿರೋಧಿಸುತ್ತದೆ ಹಾಗೂ ಸದಾ ಸಣ್ಣ ವ್ಯಾಪಾ ರಿಗಳ ಪರ ಇರುತ್ತದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಸುದ್ದಿಗಾರರೊಂದಿಗೆ ತಿಳಿಸಿದರು.
ಈ ಯುವ ಜನರು ಸಣ್ಣ ಸಣ್ಣ ಬಂಡವಾಳಗಳಿಂದ ಉದ್ದಿಮೆಗಳನ್ನು ಆರಂಭಿಸಿ ದೇಶದ ಹಾಗೂ ರಾಜ್ಯದ ಆರ್ಥಿಕತೆಗೆ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ, ಇಂದು ಕರ್ನಾಟಕ ರಾಜ್ಯ ತಲಾದಾಯದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ಇದ್ದರೆ ಅದರ ನೇರ ಶ್ರೇಯಸ್ಸು ಇಂತಹ ಯುವ ವರ್ಗಗಳಿಗೆ ಸಲ್ಲಬೇಕಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರ ಇಂತಹ ವರ್ಗಗಳಿಗೆ ಸಾಕಷ್ಟು ಸಾಲ ಸೌಲಭ್ಯಗಳ ಮೂಲಕ ನೆರವು ನೀಡಬೇಕೆ ಹೊರತು ಜಿಎಸ್‌ಟಿ ಅಧಿಕಾರಿಗಳ ಲೂಟಿಕೋರತನಕ್ಕೆ ಅನುವು ಮಾಡಿಕೊಡುಬಾರದು ಎಂದು ಜಗದೀಶ್ ತಿಳಿಸಿದರು.
ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯಲಿರುವ ಸಣ್ಣವ್ಯಾಪಾರಿಗಳ ಪ್ರತಿಭಟನಾ ಸಭೆಗೆ ಆಮ್ ಆದ್ಮಿ ಪಕ್ಷವು ಸಂಪೂರ್ಣ ಬೆಂಬಲ ನೀಡಲಿದೆ. ನಮ್ಮ ಪಕ್ಷದ ವರ್ತಕರ ವಿಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ರೂಪದ ಸುಲಿಗೆ ನೀತಿಯನ್ನು ಖಂಡಿಸಲಿದೆ. ಪಕ್ಷದ ತೆರಿಗೆ ಹಾಗೂ ಲೆಕ್ಕ ಪರಿಶೋಧಕರ ತಂಡ ಇವರ ನೆರವಿಗೆ ನಿಲ್ಲಲಿದೆ ಎಂದು ಜಗದೀಶ್ ವಿ. ಸದಂ ತಿಳಿಸಿದರು.