ಬೆಂಗಳೂರು:ಅನಾರೋಗ್ಯ ಹಿನ್ನೆಲೆ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತವರಿಗೆ ವಾಪಸಾಗಿದ್ದು,ಅಭಿಮಾನಿಗಳು ಫುಲ್ ಖುಷಿಯಾಗಿ ಕುಣಿದು ಕುಪ್ಪಳಿಸಿದರು.
ಶಿವರಾಜ್ ಕುಮಾರ್ ಪತ್ನಿ ಗೀತಾ, ಪುತ್ರಿ ನಿವೇದಿತಾ ಜೊತೆ ಬೆಳಗ್ಗೆ 8.50ಕ್ಕೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಶಿವಣ್ಣನ ಅಭಿಮಾನಿಗಳು ದೊಡ್ಡ ಕಟೌಟ್ ಗಳನ್ನು ಹಾಕಿ ವಾದ್ಯ ಮೇಳದೊಂದಿಗೆ ಬರಮಾಡಿಕೊಂಡರು.
ಗಣರಾಜ್ಯೋತ್ಸವ ಹಿನ್ನೆಲೆ ಹೈಅಲರ್ಟ್ ಘೋಷಣೆ ಮಾಡಿದ್ದರಿಂದ ಏರ್ಪೋರ್ಟ್ನಲ್ಲಿ ಅದ್ಧೂರಿ ಸ್ವಾಗತಕ್ಕೆ ಅವಕಾಶ ಇರಲಿಲ್ಲ,ಹಾಗಾಗಿ ಸಾದಹಳ್ಳಿ ಗೇಟ್ ಬಳಿ ಶಿವರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಸಾದಹಳ್ಳಿ ಗೇಟ್ನಿಂದಲೂ ನೆಚ್ಚಿನ ನಟನಿಗೆ ಅಭಿಮಾನಿಗಳು ಹೂವಿನ ಮಳೆಯನ್ನೇ ಸುರಿಸಿದರು.
ದಾರಿಯುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದು ಜಯಕಾರ ಕೂಗುತ್ತಿದ್ದರು.ಇನ್ನು ಮನೆ ಬಳಿ ಜನಸಾಗರವೇ ಸೇರಿತ್ತು ಸೇಬಿನ ಹಾರ,ಹೂವಿನ ಮಾಲೆ ಬೊಕೆಗಳನ್ನು ಫ್ಯಾನ್ಸ್ ನೀಡಿ ಸಂಭ್ರಮಿಸಿದರು.ಪಟಾಕಿ ಸಿಡಿಸಿ ಖುಷಿ ಪಟ್ಟರು.
ಶಿವಣ್ಣ ಮನೆಗೆ ಬಂದ ಕೂಡಲೇ ರಾಘವೇಂದ್ರ ರಾಜಕುಮಾರ್,ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಸಂಬಂಧಿಗಳು ಆಗಮಿಸಿ ಶುಭ ಕೋರಿದರು.