ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ್ದಾರೆ.
ಈ ಬಗ್ಗೆ ನಟ ಸುದೀಪ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಳೆದ 11 ಸೀಸನ್‌ಗಳಿಂದ ನಾನು ಬಿಗ್ ಬಾಸ್ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು, ಮುಂಬರುವ ಫೈನಲ್ ಆತಿಥೇಯನಾಗಿ ನನ್ನ ಕೊನೆಯದು, ಇದು ಮರೆಯಲಾಗದ ಪ್ರಯಾಣ, ಇದನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಈ ಅವಕಾಶ ನೀಡಿದ ಕಲರ್ಸ್ ಕನ್ನಡಗೆ ಧನ್ಯವಾದಗಳು ಹಾಗೂ ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮವನ್ನ ನಟ ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟಿದ್ದಾರೆ, ಬಿಗ್ ಬಾಸ್ ಕನ್ನಡದ ಹೋಸ್ಟ್ ಆಗಿ 11 ಸೀಸನ್ಗಳನ್ನು ನಡೆಸಿಕೊಟ್ಟಿದ್ದಾರೆ. ಇದು ನನ್ನ ಕೊನೆಯ ಸೀಸನ್ ಎಂದು ಸುದೀಪ್ ಈ ಮೊದಲೇ ಹೇಳಿದ್ದರು. ಈಗ ಅವರು ಅಧಿಕೃತವಾಗಿ ಬಿಗ್ ಬಾಸ್ ತೊರೆಯುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ.
ಕಳೆದ ಬಿಗ್ ಬಾಸ್ ಸೀಸನ್ ನಡೆಯುವಾಗ ನನ್ನ ಸಿನಿಮಾದ ಶೂಟಿಂಗ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿತ್ತು. ಚೆನ್ನೈನಿಂದ ಅಲ್ಲಿಗೆ ಹೋಗಲು ಒಂದೂವರೆ ಗಂಟೆ ಬೇಕು. ಬೆಂಗಳೂರಿನಿಂದ ನಾನು ಅಲ್ಲಿಗೆ ಹೋಗಿ, ಅಲ್ಲಿ ಶೂಟಿಂಗ್ ಮಾಡಿ, ಮಧ್ಯರಾತ್ರಿ ಶೂಟಿಂಗ್ ಮುಗಿಸಿ, ಖಾಸಗಿ ವಿಮಾನದಲ್ಲಿ ವಾಪಸ್ ಬೆಂಗಳೂರಿಗೆ ಬಂದು ಬಿಗ್ ಬಾಸ್ ಎಪಿಸೋಡ್ ನೋಡಿ, ವೀಕೆಂಡ್ ಸಂಚಿಕೆ ಶೂಟ್ ಮಾಡಬೇಕು. ಇದರಿಂದ ನನಗೆ ತುಂಬ ಸುಸ್ತಾಗುತ್ತಿತ್ತು. ನಾನು ಬೆಂಗಳೂರಿನಲ್ಲಿ ಇದ್ದರೆ ಯಾವುದೇ ಸಮಸ್ಯೆ ಇಲ್ಲ. ಬೇರೆ ಕಡೆ ಸಿನಿಮಾ ಶೂಟಿಂಗ್ ಇದ್ದಾಗ ಈ ಶೋ ಮಾಡಲು ಕಷ್ಟ ಆಗುತ್ತದೆ ಎಂದು ಖಾಸಗಿ ಸಂದರ್ಶನದಲ್ಲಿ ನಟ ಸುದೀಪ್ ಅವರು ತಿಳಿಸಿದ್ದರು.