ಜನನಿಬಿಡ ಸ್ಥಳಗಳಲ್ಲಿ ಬೀದಿ ವ್ಯಾಪಾರಿಗಳಿಗೆಪಾಲಿಕೆ ಬಜಾರ್:ಸಿಎಂ ಸೂಚನೆ

Spread the love

ಬೆಂಗಳೂರು:ನಗರದ ಜನನಿಬಿಡ ಸ್ಥಳಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ವಿಜಯನಗರ ಬಸ್/ಮೆಟ್ರೊ ನಿಲ್ದಾಣದ ಬಳಿ ಮುಖ್ಯ ಮಂತ್ರಿಗಳ

ನಗರೋತ್ಥಾನ ಯೋಜನೆಯಡಿ ಹವಾನಿಯಂತ್ರಿತ ಮಾರುಕಟ್ಟೆಕೃಷ್ಣದೇವರಾಯ ಪಾಲಿಕೆ ಬಜಾರ್ ಉದ್ಘಾಟಿಸಿ ಮಾತನಾಡಿದರು.

ಬೀದಿವ್ಯಾಪರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸಲಾಗಿದ್ದು, ಇಲ್ಲಿ 79 ಮಳಿಗೆಗಳಿವೆ. ದಕ್ಷಿಣ ಭಾರತದಲ್ಲಿಯೇ ಇಂತಹ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿತವಾಗಿರುವುದು ಇದೇ ಮೊದಲು ಎಂದು ತಿಳಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಅವರಿಗೆ ಗೌರವ ಸೂಚಿಸುವಂತೆ ಬಜಾರ್ ಅನ್ನು ಕೃಷ್ಣದೇವರಾಯ ಪಾಲಿಕೆ ಎಂದು ನಾಮಕರಣ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಿಕೆ ಬಜಾರ್ ಸರ್ಕಾರದ ಜನಪರ ಚಿಂತನೆಯ ಯೋಜನೆ, ಇಂತಹ ಬಜಾರ್ ಗಳನ್ನು ಗಾಂಧಿಬಜಾರ್ ನಂತಹ ಜನನಿಬಿಡ ಪ್ರದೇಶಗಳಲ್ಲಿ ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು.

ಕೃಷ್ಣದೇವರಾಯ ಪಾಲಿಕೆ ಬಜಾರ್ ಯೋಜನೆ ಇಲ್ಲಿನ ಶಾಸಕರಾದ ಎಂ.ಕೃಷ್ಣಪ್ಪ ಅವರ ಕನಸು. ಇಲ್ಲಿನ ಬೀದಿವ್ಯಾಪಾರಿಗಳು ಬಿಸಿಲು ಗಾಳಿ ಮಳೆಯಲ್ಲಿ ವ್ಯಾಪಾರ ಮಾಡುತ್ತಿದ್ದರಿಂದ, ಅವರಿಗೆ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡಲು ಮನವಿ ಮಾಡಿದ್ದರು.

ನಾನು 2017 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಾಲಿಕೆ ಬಜಾರ್ ಗಳ ನಿರ್ಮಾಣಕ್ಕೆ 5 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿದ್ದೆ ಇಂದು ನಾನೇ ಈ ಬಜಾರ್ ನ್ನು ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮ ಸರ್ಕಾರ ಜನರಿಗೆ ಮಾತು ನೀಡಿದ್ದಂತೆ ಎಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅಧಿಕಾರಕ್ಕೆ ಬಂದು ಒಂದು ವರ್ಷ ಮೂರು ತಿಂಗಳಲ್ಲಿ ನಮ್ಮ ಐದು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ.

ಎಲ್ಲಾ ಧರ್ಮ, ಜಾತಿಯ ಬಡವರಿಗೆ ಈ ಕಾರ್ಯಕ್ರಮಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ವಿರೋಧ ಪಕ್ಷದವರು ಈ ಕಾರ್ಯಕ್ರಮಗಳ ಜಾರಿಗೆ ಮುನ್ನ ಹಾಗೂ ನಂತರದಲ್ಲಿ ಬಹಳ ಟೀಕೆ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ನಂತರ ಯೋಜನೆಗಳನ್ನು ನಿಲ್ಲಿಸುವುದಾಗಿಯೂ ಹೇಳಿದ್ದರು. ಯಾವ ಕಾರಣಕ್ಕೂ ಕೂಡ ಐದು ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.