ಬೆಂಗಳೂರು: ಕ್ರೀಡಾಪಟುಗಳು ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ದೈಹಿಕ ಸಾಮರ್ಥ್ಯದ ಜೊತೆಗೆ ಆತ್ಮಸ್ಥೈರ್ಯ, ಶಿಸ್ತು ಮತ್ತು ತಂಡದ ಮನೋಭಾವ ಬಹುಮುಖ್ಯ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತಿನ ಸದಸ್ಯರಾದ ಡಾ. ಜಾನಪದ ಎಸ್. ಬಾಲಾಜಿ ತಿಳಿಸಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿರುವ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ದ್ವಿತೀಯ ಸ್ಥಾನ ಗಳಿಸಿದ ಫಾಲ್ಕನ್ ಓಟ್ಸ್ ಕ್ಲಬ್ನ 16 ವರ್ಷದೊಳಗಿನ ಖೊ ಖೊ ಕ್ರೀಡಾಪಟುಗಳಿಗೆ ಡಾ. ಜಾನಪದ ಎಸ್. ಬಾಲಾಜಿ ಅವರು ಕಲರ್ಸ್ (ಟಿ.ಶರ್ಟ್,ಪ್ಯಾಂಟ್) ವಿತರಿಸಿ ಅಭಿನಂದಿಸಿ ಮಾತನಾಡಿದರು.
ಕ್ರೀಡೆ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುವಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಸಮಯಪ್ರಜ್ಞೆ, ಶಿಸ್ತು, ತಂಡದ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ ಎಂದು ಹೇಳಿದರು.
ಕ್ರೀಡಾಕೂಟಗಳು ಯುವಜನರ ನಡುವೆ ಸ್ನೇಹ, ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ವೃದ್ಧಿಸುತ್ತವೆ. ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುವುದರೊಂದಿಗೆ ಪರಸ್ಪರ ಗೌರವಿಸುವ ಗುಣವನ್ನೂ ಕಲಿಸುತ್ತವೆ. ಇಂತಹ ಕ್ರೀಡಾ ಚಟುವಟಿಕೆಗಳು ನಗರ ಪ್ರದೇಶಗಳಲ್ಲಿರುವ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿವೆ. ಕ್ರೀಡಾಪಟುಗಳು ಆತ್ಮವಿಶ್ವಾಸದಿಂದ ನಿರಂತರ ಅಭ್ಯಾಸ ನಡೆಸಿ, ಉನ್ನತ ಸಾಧನೆಯ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಡ.ಜನಪದ ಎಸ್.ಬಾಲಾಜಿ ಸಲಹೆ ನೀಡಿದರು.
ಕೋಕೋ ತರಬೇತಿದಾರ ಹನುಮಂತ ಮಾತನಾಡಿ, ಕ್ರೀಡಾಪಟುಗಳು ಶ್ರದ್ಧೆ, ಪರಿಶ್ರಮ ಮತ್ತು ನಿರಂತರ ಅಭ್ಯಾಸದ ಮೂಲಕ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಲು ಸಾಧ್ಯವಾಗಿದೆ. ಈ ಯುವ ಕ್ರೀಡಾಪಟುಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದ್ದು, ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತರೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಂಡದ ಮುಖ್ಯಸ್ಥ ಮಹೇಶ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಪೊಲೀಸ್ ಇಲಾಖೆಯ ಸಹಾಯಕ ಉಪನಿರೀಕ್ಷಕ (ಎಎಸ್ಐ) ರಾಜಕುಮಾರ್ ಉಪಸ್ಥಿತರಿದ್ದರು. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕಲರ್ಸ್ ವಿತರಿಸಿ ಶುಭ ಹಾರೈಸಲಾಯಿತು.
