ಮೈಸೂರು: ಬೆಂಗಳೂರಿನಲ್ಲಿ ಐಟಿ ಬಿಟಿ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನಿರಾಕರಿಸುತ್ತಿರುವ ಕ್ರಮವನ್ನು ಖಂಡಿಸಿ ಇಂದು ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕ ಸೇನಾಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಐಟಿ ಕಂಪನಿಗಳು ಹೊರರಾಜ್ಯದವರನ್ನು ಕಡಿಮೆ ವೇತನಕ್ಕೆ ನೇಮಕ ಮಾಡಿಕೊಳ್ಳುತ್ತಿವೆ ಮತ್ತು ಸ್ಥಳೀಯ ಕನ್ನಡಿಗರನ್ನು ಹಾಗೂ ಮಾತೃಭಾಷೆ ಕನ್ನಡ ಇರುವವರನ್ನು ಕಡೆಗಣಿಸುತ್ತಿವೆ ಎಂದು ಯುವತಿಯೊಬ್ಬರು ವಿಡಿಯೋ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಪ್ರತಿಭಟನೆ ವೇಳೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.
ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿರುವುದು ಗಂಭೀರ ವಿಷಯ ಎಂದು ಸರ್ಕಾರ ಪರಿಗಣಿಸಿದೆ. ಯಾವುದೇ ಖಾಸಗಿ ಸಂಸ್ಥೆ ಉದ್ದೇಶ ಪೂರ್ವಕವಾಗಿ ಕನ್ನಡಿಗರನ್ನು ಕಡೆಗಣಿಸುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ರಾಜ್ಯದ ಐಟಿ-ಬಿಟಿ ಕಂಪನಿಗಳು, ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ, ವಿದ್ಯುತ್ ಪಡೆದು ನಮ್ಮ ರಾಜ್ಯದ ನೀರು ಕುಡಿದು, ಅನ್ನವನ್ನು ತಿಂದು ನಮ್ಮ ಕನ್ನಡಿಗರಿಗೆ ಉದ್ಯೋಗ ನೀಡದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಕೂಡಲೇ ಐಟಿ-ಬಿಟಿ ಕಂಪನಿಗಳಲ್ಲಿ ಹಾಗೂ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇಕಡಾ 60ರಷ್ಟು ಮೀಸಲಾತಿ ಕಡ್ಡಾಯಗೊಳಿಸಬೇಕು ಎಂದು ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಿ, ಸುಗ್ರೀವಾಜ್ಞೆ ಹೊರಡಿಸಬೇಕೆಂದು
ತೇಜೇಶ್ ಲೋಕೇಶ್ ಗೌಡ ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.
ಪ್ರಭುಶಂಕರ್, ವಿಜಯೇಂದ್ರ, ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ, ಬೋಗಾದಿ ಸಿದ್ದೇಗೌಡ, ಹೊನ್ನೇಗೌಡ, ಕುಮಾರ್ ಗೌಡ, ಕೃಷ್ಣೇಗೌಡ, ಶಿವರಾಂ, ಕುಮಾರ್ ಗೌಡ, ಗಿರೀಶ್, ಗಣೇಶ್ ಪ್ರಸಾದ್, ದರ್ಶನ್ ಗೌಡ, ರಾಧಾಕೃಷ್ಣ, ಮಧು ಕುಮಾರ್, ಮಣಿ, ಶಿವರಾಜ್ ನಾಗೇಂದ್ರ, ಪ್ರಕಾಶ್, ಪ್ರವೀಣ್ ಬಿ ಎಂ, ಪ್ರಭಾಕರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
