ಮೈಸೂರು: ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುನಿರೀಕ್ಷಿತ ‘ಚಿತ್ರನಗರಿ’ ಯೋಜನೆಯನ್ನು ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷರಾದ ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.
ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆ ದೃಷ್ಟಿಯಿಂದ ಫಿಲ್ಮ್ ಸಿಟಿ ಯೋಜನೆಯನ್ನು ತಕ್ಷಣವೇ ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಸರ್ಕಾರದ ಗಮನ ಸೆಳೆಯಲು ಹಲವು ಪ್ರಮುಖ ಕಾರಣಗಳು ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯ ಕೊರತೆಯನ್ನು ಮುಂದಿಟ್ಟುಕೊಂಡು ‘ಪ್ರತ್ಯೇಕ ರಾಜ್ಯ’ದ ಕೂಗು ಕೇಳಿಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಪ್ರತ್ಯೇಕತಾವಾದಿ ಧ್ವನಿಗಳನ್ನು ಅಡಗಿಸಲು ಮತ್ತು ಅಖಂಡ ಕರ್ನಾಟಕದ ಭಾವನೆಯನ್ನು ಗಟ್ಟಿಗೊಳಿಸಲು ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗಳ ಅಗತ್ಯವಿದೆ. ಚಿತ್ರನಗರಿಯನ್ನು ಅಲ್ಲಿ ಸ್ಥಾಪಿಸುವುದರಿಂದ ಆ ಭಾಗದ ಜನರಲ್ಲಿ ಸರ್ಕಾರದ ಮೇಲಿರುವ ವಿಶ್ವಾಸ ಹೆಚ್ಚುತ್ತದೆ.
ಮೈಸೂರು ಮತ್ತು ಬೆಂಗಳೂರು ಸುತ್ತಮುತ್ತ ಈಗಾಗಲೇ ಐಟಿ, ಬಿಟಿ, ಪ್ರವಾಸೋದ್ಯಮ ಸೇರಿದಂತೆ ಹತ್ತಾರು ಬೃಹತ್ ಕೈಗಾರಿಕೆಗಳು ಕೇಂದ್ರಿಕೃತವಾಗಿವೆ. ಆದರೆ, ಉತ್ತರ ಕರ್ನಾಟಕ ಭಾಗವು ಆರ್ಥಿಕವಾಗಿ ಮತ್ತು ಕೈಗಾರಿಕಾ ರಂಗದಲ್ಲಿ ಇಂದಿಗೂ ಹಿಂದುಳಿದಿದೆ. ಚಿತ್ರನಗರಿಯಂತಹ ಹೈಟೆಕ್ ಯೋಜನೆಯು ಉತ್ತರ ಕರ್ನಾಟಕಕ್ಕೆ ಬಂದರೆ, ಅಲ್ಲಿನ ಆರ್ಥಿಕ ಚಿತ್ರಣ ಬದಲಾಗಲಿದೆ. ಹೋಟೆಲ್, ಸಾರಿಗೆ, ಸ್ಥಳೀಯ ವ್ಯಾಪಾರಗಳು ಮತ್ತು ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ಸಿಗಲಿದೆ.
ಉತ್ತರ ಕರ್ನಾಟಕ ಭಾಗವು ಅಪಾರ ಸಾಂಸ್ಕೃತಿಕ ಪರಂಪರೆ, ರಂಗಭೂಮಿ ಇತಿಹಾಸ ಮತ್ತು ಅದ್ಭುತ ಪ್ರತಿಭೆಗಳ ಗಣಿಯಾಗಿದೆ. ಆದರೆ, ಸೂಕ್ತ ಅವಕಾಶಗಳಿಲ್ಲದೆ ಅಲ್ಲಿನ ನೂರಾರು ಯುವ ಕಲಾವಿದರು ಹಾಗೂ ತಂತ್ರಜ್ಞರು ವಲಸೆ ಹೋಗುತ್ತಿದ್ದಾರೆ, ಸಿನಿಮಾ ರಂಗದಿಂದ ದೂರ ಉಳಿಯುತ್ತಿದ್ದಾರೆ. ಅಲ್ಲಿಯೇ ಚಿತ್ರನಗರಿ ನಿರ್ಮಾಣವಾದರೆ ಸ್ಥಳೀಯ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ವೇದಿಕೆ ಸಿಗಲಿದೆ.
ನೈಸರ್ಗಿಕ ಲೊಕೇಶನ್ಗಳು ಮತ್ತು ಶೂಟಿಂಗ್ಗೆ ಸೂಕ್ತ ವಾತಾವರಣ
ಚಿತ್ರೀಕರಣದ ದೃಷ್ಟಿಯಿಂದ ನೋಡುವುದಾದರೆ ಉತ್ತರ ಕರ್ನಾಟಕದಲ್ಲಿ ಐತಿಹಾಸಿಕ ತಾಣಗಳಾದ ಹಂಪಿ, ಬಾದಾಮಿ, ಪಟ್ಟದಕಲ್ಲು, ವಿಜಯಪುರದ ಗೋಲಗುಂಬಜ್, ಬೀದರ್ ಕೋಟೆ ಹಾಗೂ ಕೃಷ್ಣಾ-ಮಲಪ್ರಭಾ ನದಿತೀರದಂತಹ ನೂರಾರು ಅದ್ಭುತ ನೈಸರ್ಗಿಕ ಲೊಕೇಶನ್ಗಳಿವೆ. ಚಿತ್ರನಗರಿ ಅಲ್ಲಿ ಸ್ಥಾಪನೆಯಾದರೆ ಇಡೀ ಚಿತ್ರರಂಗಕ್ಕೆ ಶೂಟಿಂಗ್ ಮಾಡಲು ಅತ್ಯಂತ ಸುಲಭ.
ನಾವು ಮೈಸೂರಿನ ಅಭಿವೃದ್ಧಿಗೆ ವಿರೋಧಿಯಲ್ಲ. ಮೈಸೂರು ಈಗಾಗಲೇ ಸಾಂಸ್ಕೃತಿಕ ರಾಜಧಾನಿಯಾಗಿ ಜಗತ್ಪ್ರಸಿದ್ಧವಾಗಿದೆ. ಆದರೆ, ಇಡೀ ಕರ್ನಾಟಕ ಏಕರೂಪವಾಗಿ ಬೆಳೆಯಬೇಕು. ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಚಿತ್ರನಗರಿ ಯೋಜನೆಯನ್ನು ಮರುಪರಿಶೀಲಿಸಿ, ಉತ್ತರ ಕರ್ನಾಟಕದ ಯಾವುದಾದರೂ ಒಂದು ಸೂಕ್ತ ಜಿಲ್ಲೆಯಲ್ಲಿ (ಉದಾಹರಣೆಗೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಅಥವಾ ಬಾಗಲಕೋಟೆ) ಸ್ಥಾಪಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕನ್ನಡ ಕ್ರಾಂತಿದಳವು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಕ ಹೋರಾಟ ರೂಪಿಸಲಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಎಚ್ಚರಿಸಿದ್ದಾರೆ.
