ಬೆಂಗಳೂರು: ಬಾಡಿಗೆ ಹಣದ ವಿಚಾರದಲ್ಲಿ ನಡೆದ ಜಗಳದಲ್ಲಿ ಲಾಯರ್ ಒಬ್ಬರನ್ನು
ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ನಡೆದಿದೆ.
ಮಂಜುನಾಥ್ (42) ಕೊಲೆಯಾದ ನತದೃಷ್ಟ ಲಾಯರ್.
ಅಕ್ಟೋಬರ್ 18ರ ಮಧ್ಯರಾತ್ರಿ ಮಂಜುನಾಥ್ ಅವರು ತಮ್ಮ ಒಡೆತನದ ಶೆಡ್ ಮಾದರಿ ಮನೆಯನ್ನು ಬಿಹಾರ ಮೂಲದ ಇಬ್ಬರಿಗೆ ಬಾಡಿಗೆಗೆ ನೀಡಿದ್ದರು.
ಬಾಡಿಗೆ ಹಣ ನೀಡದ ಕಾರಣ ಅವರು ಬಾಡಿಗೆದಾರರನ್ನು ಕೇಳಿದ್ದಾರೆ.ಇದೇ ವಿಷಯಕ್ಕೆ ವಕೀಲರು ಮತ್ತು ಬಾಡಿಗೆದಾರರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿತ್ತು.
ಬಾಡಿಗೆ ಹಣ ನೀಡುವುದಾಗಿ ಹೇಳಿ ಮಂಜುನಾಥ್ ಅವರಿಗೆ ಮೊಬೈಲ್ ಕರೆ ಮಾಡಿದ್ದ ಆರೋಪಿ, ಮತ್ತೊಬ್ಬನೊಂದಿಗೆ ಮಧ್ಯರಾತ್ರಿ ೧೨ ಗಂಟೆ ವೇಳೆ ಅವರ ಮನೆಗೆ ಬಂದಿದ್ದಾನೆ. ಮನೆಗೆ ಬಂದವರು ಕಾಲಿಂಗ್ ಬೆಲ್ ಮಾಡಿದ್ದಾರೆ.
ಮಂಜುನಾಥ್ ಅವರ ಮನೆಯ ಬಾಗಿಲು ತಟ್ಟಿದ್ದಾರೆ. ಮಂಜುನಾಥ್ ಬಾಗಿಲು ತೆರೆದ ಕೂಡಲೇ ಆರೋಪಿಗಳು ಅವರ ಹಣೆಗೆ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾರೆ.
ಬಿಹಾರ ಮೂಲದವರಾದ ಇಬ್ಬರು ಆರೋಪಿಗಳು ಸ್ವಿಗ್ಗಿ, ಝೊಮ್ಯಾಟೊ ಮತ್ತು ಮುಂತಾದ ಡೆಲಿವರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು,ಮಂಜುನಾಥ್ ಅವರ ಹತ್ಯೆ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ವೈಟ್ಫೀಲ್ಡ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
