ಚಾಮರಾಜನಗರ: ಎಸ್.ಐ.ಆರ್ ಗೆ ಸಂಬಂಧಿಸಿದಂತೆ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವ ಮತದಾರರನ್ನು ಗುರುತಿಸಿ ಸೇರ್ಪಡೆಗೊಳಿಸಲು ವಿಶೇಷ ಆಂದೋಲನ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನೋಟಿಸ್ ವಿಚಾರಣೆ ಮತ್ತು ಅವುಗಳನ್ನು ಇತ್ಯರ್ಥಪಡಿಸುವ ಸಂಬಂಧ ನೊಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 7,480 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ, ಈವರೆಗೆ 7411 ಮಂದಿಯ ವಿಚಾರಣೆ ನಡೆಸಲಾಗಿದೆ. ಈ ಪೈಕಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 10, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 2, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 7 ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 50 ಮಂದಿ ಮತದಾರರು ಸೇರಿದಂತೆ ಒಟ್ಟು 69 ಮಂದಿ ಮತದಾರರನ್ನು ಅನರ್ಹಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್.ಒ) ಪ್ರಕಟಿತ ಅಂತಿಮ ಮತದಾರರ ಪಟ್ಟಿಯನ್ನು ಸಮಗ್ರ ಪರಿಷ್ಕರಣೆ ಪೂರ್ವದಲ್ಲಿ ಮತದಾರರ ಪಟ್ಟಿಯೊಡನೆ ತಾಳೆಮಾಡಿ ಪ್ರಕಟಿತ ಅಂತಿಮ ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವ ಮತದಾರರನ್ನು ಗುರುತಿಸಿ, ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಹರಿದ್ದಲ್ಲಿ ಹೆಸರುಗಳನ್ನು ಸೇರ್ಪಡೆಗೊಳಿಸಲು ವಿಶೇಷ ಆಂದೋಲನ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಹೆಚ್.ಎಸ್. ತೋಂಟದಾರ್ಯಸ್ವಾಮಿ, ಭಾ.ಮ. ಕೃಷ್ಣಮೂರ್ತಿ, ಎಂ. ಮಹದೇವಸ್ವಾಮಿ, ಎಂ. ಚಿಕ್ಕಮಹದೇವು, ಎಸ್. ರಾಮಚಂದ್ರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
