ಮೈಸೂರು, ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ
ವಿದ್ಯುತ್ ದೀಪಾಲಂಕಾರ ಜನಮನ ಸೂರೆಗೊಳ್ಳುತ್ತಿದೆ.
ದೀಪಾಲಂಕಾರಕ್ಕೆ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ಅವರು ಚಾಲನೆ ನೀಡಿದರು.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ದಸರಾ ವಿದ್ಯುತ್ ದೀಪಾಲಂಕಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ದಸರಾ ದೀಪಾಲಂಕಾರ ಮಾಡಲಾಗಿದೆ, ಕಳೆದ ವರ್ಷಕ್ಕಿಂತಲೂ ಈ ಬಾರಿ ದೀಪಾಲಂಕಾರ ಕಂಗೊಳಿಸಲಿದೆ. ಈ ನಿಟ್ಟಿನಲ್ಲಿ ಎಲ್ಲರೂ 21 ದಿನಗಳ ಕಾಕ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುವ ಮೂಲಕ ದಸರೆಯನ್ನು ಆನಂದಿಸಬಹುದು ಎಂದು ಕರೆ ನೀಡಿದರು.
ದಸರಾ ಮಹೋತ್ಸವದ ಆಕರ್ಷಣೆಯಾಗಿರುವ ಡ್ರೋನ್ ಪ್ರದರ್ಶನ ಈ ಬಾರಿ ಮತ್ತಷ್ಟು ವರ್ಣರಂಜಿತವಾಗಿರಲಿದ್ದು, ರಾಷ್ಟೀಯ ಪಕ್ಷಿ ನವಿಲಿನ ಆಕೃತಿಗೆ 3500 ಡ್ರೋನ್ ಬಳಸಿಕೊಂಡು ಗಿನ್ನಿಸ್ ರೆಕಾರ್ಡ್ ಗೆ ಮುಂದಾಗಿದೆ, ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅ.17, 18, 20 ಮತ್ತು 21 ರಂದು ರಾತ್ರಿ 8 ಗಂಟೆಗೆ ಡ್ರೋನ್ ಪ್ರದರ್ಶನ ನಡೆಯಲಿದೆ ಎಂದು ಜಾರ್ಜ್ ತಿಳಿಸಿದರು.
ಈ ಬಾರಿ ನಗರದ 199 ರಸ್ತೆಗಳ 146 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 123 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಇದರೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಎಲ್ಇಡಿ ಬಲ್ಬ್ ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳನ್ನು ಇರಿಸಲಾಗಿದೆ. ಇಡೀ ಮೈಸೂರು ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ವೃತ್ತಗಳಿಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಇದಲ್ಲದೆ ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್ಹೌಸ್, ಎಲ್ಐಸಿ ವೃತ್ತ ಸೇರಿದಂತೆ ವಿವಿಧೆಡೆ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಅರ್ಚನಾ ಎಂ.ಎಸ್ ಹಾಗೂ ಸೆಸ್ಕ್ ಅಧಿಕಾರಿಗಳು ಮತ್ತು ಉಪ ಸಮಿತಿ ಸದಸ್ಯರು ಹಾಜರಿದ್ದರು.
