ಮೈಸೂರು: ಕಲೆ, ಸಂಸ್ಕೃತಿ ಮತ್ತು ಕನ್ನಡಿಗರ ಸೇವೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಮೈಸೂರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಸಿಎಂ ಮಾತನಾಡಿದರು.
ರಾಜ್ಯದ ಸಾಂಸ್ಕೃತಿಕ ಪರಂಪರೆ, ಕಲೆ, ಸಾಹಿತ್ಯ ಹಾಗೂ ಕನ್ನಡ ನಾಡಿನ ವೈಭವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳಿದರು.
ಶಕ್ತಿಯಿಂದ ಸಾಧನೆ, ಅರಿವಿನಿಂದ ಅಭಿವೃದ್ಧಿ, ಸಂಸ್ಕೃತಿಯಿಂದ ಸಮಾನತೆ ಹಾಗೂ ಸಮಾನತೆಯಿಂದ ಶಾಂತಿ ಎಂಬುದು ನಮ್ಮ ಸರ್ಕಾರದ ಮೂಲ ತತ್ವವಾಗಿದೆ ಎಂದು ತಿಳಿಸಿದರು.
ಮೈಸೂರು ಸರ್ವ ಕಲೆಗಳ ತವರು ಹಾಗೂ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ. ದೇಶ-ವಿದೇಶಗಳ ಕಲಾವಿದರಿಗೆ ಪ್ರೋತ್ಸಾಹ ನೀಡುವ ಪ್ರಮುಖ ತಾಣವಾಗಿ ಮೈಸೂರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಸಾಹಿತಿ ಡಾ. ಮೈಸೂರು ನಾಗಮಣಿ ಶ್ರೀನಾಥ್ ಅವರಿಗೆ ‘ಸಂಗೀತ ವಿದ್ವಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜನರ ಕಷ್ಟಗಳನ್ನು ಆಲಿಸಲು, ಮನೆಬಾಗಿಲಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಹಾಗೂ ಅವರ ಅಹವಾಲು ಬಗೆಹರಿಸಲು ‘ಪ್ರಜಾ ಸೇವಾ ಇಲಾಖೆ’ಯನ್ನು ರೂಪಿಸಲಾಗಿದ್ದು, ಸದ್ಯದಲ್ಲೇ ಮೈಸೂರು ನಗರಕ್ಕೆ ಆಗಮಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸುವುದಾಗಿ ಭರವಸೆ ನೀಡಿದರು.
1902ರಲ್ಲೇ ಶಿವನಸಮುದ್ರದಿಂದ ಮೈಸೂರು ಅರಮನೆಗೆ ಹಾಗೂ ಕೆ.ಜಿ.ಎಫ್.ಗೆ ವಿದ್ಯುತ್ ಹರಿದು ಬಂದ ಇತಿಹಾಸವನ್ನು ಸ್ಮರಿಸಿದ ಅವರು, ದಸರಾ ಸಂದರ್ಭದಲ್ಲಿ ಬೆಳಗಿದ ಈ ಜ್ಯೋತಿ ಇಡೀ ರಾಜ್ಯಕ್ಕೆ ಬೆಳಕು ನೀಡಲಿ ಎಂದು ಹಾರೈಸಿದರು.
ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಮೈಸೂರಿನ ರೇಷ್ಮೆ, ಶ್ರೀಗಂಧ ಹಾಗೂ ಸಾಂಪ್ರದಾಯಿಕ ಚಿತ್ರಕಲೆಯ ವೈಭವವನ್ನು ಕೊಂಡಾಡಿದರು. ಮಂತ್ರಕ್ಕೆ ಮಾವಿನಕಾಯಿ ಉದ್ರೋದಿಲ್ಲ,ಉಳಿಪೆಟ್ಟು ಬೀಳದೆ ಶಿಲೆ ಮೂರ್ತಿಯಾಗುವುದಿಲ್ಲ. ಹಾಗೆಯೇ ಪರಿಶ್ರಮವಿಲ್ಲದೆ ಯಾವುದೇ ಕಲೆ ಅಥವಾ ಸಾಧನೆಗೆ ಗೌರವ ಸಿಗುವುದಿಲ್ಲ ಎಂದು ಸಿಎಂ ತಿಳಿಸಿದರು.
ಈ ಬಾರಿಯ ದಸರಾ ಉತ್ಸವದಲ್ಲಿ ಭಾರತೀಯ ರಕ್ಷಣಾ ಪಡೆಯ ಮೂರು ವಿಭಾಗಗಳ ಟ್ಯಾಬ್ಲೋ ಮತ್ತು ಏರ್ ಶೋ ಪ್ರದರ್ಶನಕ್ಕೆ ಮನವಿ ಮಾಡಲಾಗಿದ್ದು, ಕೇಂದ್ರ ರಕ್ಷಣಾ ಸಚಿವರು ಇದಕ್ಕೆ ಸಮ್ಮತಿಸಿದ್ದಾರೆ ಎಂದು ಮುಖ್ಯ ಮಂತ್ರಿ ಮಾಹಿತಿ ನೀಡಿದರು.
ಕನ್ನಡ ಚಿತ್ರಮಂಡಳಿ ಹಾಗೂ ಬೈಲುಕುಪ್ಪೆಯ ಬೌದ್ಧ ಸಂಸ್ಕೃತಿಯ ಪ್ರದರ್ಶನಗಳೂ ದಸರಾ ಮೆರವಣಿಗೆಯ ವೈಭವವನ್ನು ಹೆಚ್ಚಿಸಲಿವೆ ಎಂದು ಸಿಎಂ ತಿಳಿಸಿದರು.
ನಾಡಿನ ದೇವತೆ ತಾಯಿ ಚಾಮುಂಡೇಶ್ವರಿ ಮತ್ತು ದುರ್ಗಾದೇವಿಯ ಆಶೀರ್ವಾದ ಸದಾ ರಾಜ್ಯದ ಮೇಲಿರಲಿ, ದುಃಖಗಳೆಲ್ಲ ದೂರವಾಗಿ ಶಾಂತಿ-ಸಮಾನತೆ ನೆಲೆಸಲಿ ಎಂದು ಡಿ.ಕೆ.ಶಿವಕುಮಾರ್ ಪ್ರಾರ್ಥಿಸಿದರು.
