ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಸಿದ್ಧತೆ ಭರದಿಂದ ಸಾಗಿದ್ದು, ಗಜಪಡೆಗೆ ಎರಡನೇ ಹಂತದ ಕುಶಾಲತೋಪು ತಾಲೀಮು ನಡೆಸಿದ್ದು,ಅಭಿಮನ್ಯು ತಂಡ ಅಂಜದೆ ಸಾಗಿದ್ದು ವಿಶೇಷ.
ನಗರ ಸಶಸ್ತ್ರ ಮೀಸಲು ಪಡೆ ವತಿಯಿಂದ 7 ಫಿರಂಗಿ ಗಾಡಿಗಳ ಮೂಲಕ 21 ಸುತ್ತು ಭಾರೀ ಕುಶಾಲತೋಪುಗಳನ್ನು ಸಿಡಿಸಲಾಯಿತು. ತಾಲೀಮಿನಲ್ಲಿ ಅಶ್ವದಳದ 43 ಕುದುರೆಗಳು ಹಾಗೂ ಗಜಪಡೆಯ 13 ಆನೆಗಳು ಭಾಗವಹಿಸಿದ್ದವು.
ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಮಹೇಂದ್ರ, ಪ್ರಶಾಂತ, ಸುಗ್ರೀವ, ಏಕಲವ್ಯ, ಶ್ರೀರಾಮ, ಗೋಪಿ, ಆನೆಗಳಾದ ಕಾವೇರಿ, ಲಕ್ಷ್ಮಿ, ಚೈತ್ರಾ, ರೂಪಾ ಮತ್ತು ಶ್ರೀಕಂಠ ಸೇರಿದಂತೆ ಎಲ್ಲಾ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು.
ವಿಶೇಷವೆಂದರೆ, ಮೊದಲ ಹಂತದ ತಾಲೀಮಿನಲ್ಲಿ ಕುಶಾಲತೋಪಿನ ಸದ್ದಿಗೆ ಶ್ರೀಕಂಠ ಮತ್ತು ಶ್ರೀರಾಮ ಆನೆಗಳು ಕೊಂಚ ವಿಚಲಿತಗೊಂಡಿದ್ದವು. ಆದರೆ ಇಂದು ನಡೆದ ಎರಡನೇ ಹಂತದ ತಾಲೀಮಿನಲ್ಲಿ ಯಾವುದೇ ಆನೆಗಳು ಮತ್ತು ಕುದುರೆಗಳು ಭಯಪಡದೆ, ಅತ್ಯಂತ ಶಿಸ್ತಿನಿಂದ ನಿಂತು ತಾಲೀಮು ನಡೆಸಿದವು.
ಜಂಬೂಸವಾರಿಗೆ ಗಜಪಡೆ ಸಂಪೂರ್ಣ ಸಜ್ಜಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
