ಮೈಸೂರು ಅ.1: ಚಿನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನ ಮಾಡುವುದಾಗಿ ಕರೆಸಿಕೊಂಡು ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಹೇಯ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕುಖ್ಯಾತ ಚಿನ್ನತಂಬಿ ಅಲಿಯಾಸ್ ಸೌಂದರ್ಯರಾಜ್ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡಿದ್ದ ಗ್ರಾಹಕರು ಸಿಎಂ ಮತ್ತು ಡಿಸಿಎಂ ಬಳಿ ದೂರು ನೀಡಿದ್ದರು.ಈ ವಿಚಾರಕ್ಕೆ ಕೋಪಗೊಂಡ ಚಿನ್ನತಂಬಿ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಶ್ರೀರಾಂಪುರ ಎರಡನೇ ಹಂತದ ಕ್ಲಬ್ ಬಳಿ ಇರುವ ಚಿನ್ನತಂಬಿ ಮನೆ ಬಳಿ ಮಾತುಕತೆಗೆ ತೆರಳಿದ್ದ ಗ್ರಾಹಕರ ಮೇಲೆ ನಾಲ್ವರು ಪುರುಷರು ಮತ್ತು ಒಬ್ಬ ಮಹಿಳೆ ಏಕಾಏಕಿ ದಾಳಿ ಮಾಡಿದ್ದಾರೆಂದು ದೂರಿದ್ದಾರೆ.
ಹಲ್ಲೆಗೊಳಗಾದವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಲೋಕೇಶ್, ಲಗ್ಗೆರೆ ನಿವಾಸಿ ಸಂತೋಷ್, ಹಾಸನದ ಮಹೇಶ್ ಹಾಗೂ ಮೈಸೂರಿನ ಸಾಲುಂಡಿ ನಿವಾಸಿ ಶೋಭಾ.
ಅದರಲ್ಲಿ ಲೋಕೇಶ್ ಮತ್ತು ಸಂತೋಷ್ ಅವರಿಗೆ ಗಂಭೀರ ಗಾಯಗಳಾಗಿವೆ.
ಆರೋಪಿಗಳು ಗ್ರಾಹಕರನ್ನು ಅಟ್ಟಾಡಿಸಿಕೊಂಡು ಬಂದು ಕಲ್ಲು, ಕಾರ್ ಜಾಕ್ ಮತ್ತು ರಾಡ್ ಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಕೈ-ಕಾಲು ಮುರಿದು ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನಾಲ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಹಾಗೂ ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
