ಮೈಸೂರು: ಮುಂದಿನ 15 ದಿನಗಳ ಕಾಲ ಪ್ರತಿನಿತ್ಯ ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಡೆಯನ್ನು ಖಂಡಿಸಿ ಇಂದು ಕರ್ನಾಟಕ ಸೇನಾ ಪಡೆ ವಿನೂತನ ಪ್ರತಿಭಟನೆ ನಡೆಸಿತು.
ಮೈಸೂರಿನ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಕೈಯಲ್ಲಿ ಬೆಣ್ಣೆ ಹಾಗೂ ಸುಣ್ಣವನ್ನು ಹಿಡಿದು, ಕಾವೇರಿ ಪ್ರಾಧಿಕಾರ ನಮಗೆ ಸುಣ್ಣ ಹಾಗೂ ತಮಿಳುನಾಡಿಗೆ ಬೆಣ್ಣೆಯನ್ನು ಕೊಡುತ್ತಿದೆ ಎಂದು ಅಣುಕು ಪ್ರತಿಭಟನೆ ನಡೆಸಲಾಯಿತು.
ಪದೇ ಪದೇ ನಮಗೆ ಕಾವೇರಿ ವಿಚಾರದಲ್ಲಿ ಅನ್ಯಾಯ ಆಗುತ್ತಿದೆ. ವಾಸ್ತವವಾಗಿ ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಏಕೆ ಅನ್ಯಾಯವಾಗುತ್ತಿದೆ ಎಂಬುದನ್ನು ತಿಳಿಸಲು ರಾಜ್ಯ ಸರ್ಕಾರ ಈ ಕೂಡಲೇ ಕಾವೇರಿ ನೀರಿನ ತಜ್ಞರ ಒಂದು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕು. ಹಾಗೂ ಕೇಂದ್ರ ಸರ್ಕಾರ ಕನ್ನಡಿಗರಿಗೆ ಮರಣಶಾಸನ ವಾಗಿರುವ ಈ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನೇ ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು.
ನಮ್ಮ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ, ಪ್ರತಿ ಬಾರಿ ಕಾವೇರಿ ಪ್ರಾಧಿಕಾರ ತಮಿಳುನಾಡು ಪರವಾಗಿಯೇ ನ್ಯಾಯ ನೀಡುತ್ತಾ ಬಂದಿದೆ. ಇದು ಅತ್ಯಂತ ದುರಂತದ ವಿಷಯ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ರಾಜ್ಯದಲ್ಲಿ ಕುಡಿಯಲು ನೀರಿಲ್ಲ,ಅದರಲ್ಲೂ ನಮ್ಮ ಮೈಸೂರಿನಲ್ಲಿ ಕೆಲವು ಪ್ರದೇಶಗಳಿಗೆ ವಾರಕ್ಕೊಮ್ಮೆ, ಎರಡು ಬಾರಿ ನೀರನ್ನು ಬಿಡಲಾಗುತ್ತಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಸಹ ಕಾವೇರಿ ಪ್ರಾಧಿಕಾರ ನಮ್ಮ ಕಾವೇರಿ ಕೊಳ್ಳಗಳ ನೀರಿನ ವಸ್ತುಸ್ಥಿತಿ ಅರಿಯದೆ, ತಮಿಳುನಾಡಿಗೆ ಬೆಳೆ ಬೆಳೆಯಲು ನೀರನ್ನು ಬಿಡಲು ಹೇಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಪ್ರತಿಭಟನಾ ನಿರತರು ಹೇಳಿದರು.
ಈಗಾಗಲೇ ಹಲವಾರು ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಜೊತೆಗೆ ಕಾವೇರಿ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಕೂಡಲೇ ರಾಜ್ಯ ಸರ್ಕಾರ ಕಾವೇರಿ ನೀರು ಬಿಡುವ ವಿಚಾರವಾಗಿ ಮೇಲ್ಮನವಿ ಸಲ್ಲಿಸಿ, ರಾಜ್ಯದ ಜಲಾಶಯಗಳ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.
ಪ್ರಭುಶಂಕರ್ ಎಂ ಬಿ , ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ , ಶಿವಲಿಂಗಯ್ಯ, ಮಧುವನ ಚಂದ್ರು, ಹೊನ್ನೇಗೌಡ, ಶೋಭಾ ರಾಣಿಗೌಡ, ಶಿಲ್ಪ, ಸುಜಾತ, ನಾಗರಾಜು, ದರ್ಶನ್ ಗೌಡ, ರಾಧಾಕೃಷ್ಣ, ರಂಗಪ್ಪ, ಗಣೇಶ್ ಪ್ರಸಾದ್, ಪ್ರದೀಪ್ ಆರ್, ಆನಂದ್, ತ್ಯಾಗರಾಜ್, ನಾಗೇಂದ್ರ, ನಾಗೇಶ್, ರವೀಶ್ , ರಾಮಕೃಷ್ಣೇಗೌಡ, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
