ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿದ್ಯುತ್ ದೀಪಾಲಂಕಾರಕ್ಕೆ ಈ ಬಾರಿ ಹೊಸ ಮೆರುಗು ನೀಡಿ, ಆಕರ್ಷಕ ಪರಿಕಲ್ಪನೆಯಲ್ಲಿ ಮೂಡಿಬರುವಂತೆ ಸಿದ್ಧತೆ ಮಾಡಬೇಕೆಂದು ಶಾಸಕರು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೆಸ್ಕ್ ಸಭಾಂಗಣದಲ್ಲಿ ನಡೆದ ದಸರಾ ವಿದ್ಯುತ್ ದೀಪಾಲಂಕಾರ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವರ್ಷಕ್ಕಿಂತ ಈ ಬಾರಿ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಕಡಿಮೆ ಅವಧಿಯಲ್ಲಿ ಸಮರೋಪಾದಿಯಲ್ಲಿ ಸಿದ್ಧತೆ ಕೈಗೊಂಡು, ಕಳೆದ ಮೂರು ವರ್ಷಗಳಲ್ಲಿ ಕಾಣದಂತಹ ಹೊಸ ವಿನ್ಯಾಸ ಮತ್ತು ಪರಿಕಲ್ಪನೆಯ ದೀಪಾಲಂಕಾರ ಮಾಡಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆ ಹಾಗೂ ನಿರೀಕ್ಷೆಗಳಿಗೆ ತಕ್ಕಂತೆ ದೀಪಾಲಂಕಾರ ಮಾಡಬೇಕಿದೆ. ಪ್ರತಿಯೊಬ್ಬರು ತಮ್ಮಲ್ಲಿರುವ ಹೊಸ ಆಲೋಚನೆಗಳನ್ನು ಹಂಚಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಹಿಂದಿನ ವರ್ಷಗಳಲ್ಲಿ ದೀಪಾಲಂಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರ ಸಲಹೆ ಪಡೆದು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ದೀಪಾಲಂಕಾರ ಅಳವಡಿಸುವ ವೇಳೆ ಮರಗಳಿಗೆ ಮೊಳೆ ಹೊಡೆಯಬಾರದು, ಮರಗಳಿಗೆ ಹಾನಿಯಾಗದ ರೀತಿಯಲ್ಲಿ ಕೆಲಸ ಮಾಡಬೇಕು. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ, ಎಲ್ಲ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡು ದೀಪಾಲಂಕಾರವನ್ನು ಯಶಸ್ವಿಗೊಳಿಸಬೇಕು ಎಂದು ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ಸಭೆಯಲ್ಲಿ ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಅವರು ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ತಾಂತ್ರಿಕ ನಿರ್ದೇಶಕ ಎಲ್. ಲೋಕೇಶ್ ಸೇರಿದಂತೆ ಅಧಿಕಾರಿಗಳು ಮತ್ತು ವಿದ್ಯುತ್ ಗುತ್ತಿಗೆದಾರರು ಉಪಸ್ಥಿತರಿದ್ದರು.
