ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ: ಜಿ.ಟಿ.ದೇವೇಗೌಡ

Spread the love

ಮೈಸೂರು: ಮಹಿಳೆಯೊಬ್ಬರು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆ ಇದ್ದ ಸಮಾಜದಲ್ಲಿ ದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದು ಅಂದುಕೊಂಡಿದ್ದನ್ನು ಸಾಧಿಸಿದ ಗಟ್ಟಿಗಿತ್ತಿ ಸಾವಿತ್ರಿಬಾಯಿ ಫುಲೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರಿನ ಶ್ರೀರಾಂಪುರದಲ್ಲಿರುವ ಟಿ.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ಸಾವಿತ್ರಿಬಾಯಿಫುಲೆ ಶೀಕ್ಷಕಿಯರ ಸಂಘದವತಿಯಿಂದ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಸಾವಿತ್ರಿಬಾಯಿಫುಲೆ ವಿಚಾರ ಸಂಕಿರಣ ಮತ್ತು ರಾಜ್ಯ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿತ್ರಿಬಾಯಿ ಫುಲೆ ಅವರು ಭಾರತದ ಮೊಟ್ಟಮೊದಲ ಶಿಕ್ಷಕಿ, ಆಧುನಿಕ ಶಿಕ್ಷಣದ ಜನನಿ. ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಜೊತೆಗೆ ಸಾಹಿತಿ. ಮಹಾರಾಷ್ಟ್ರದಲ್ಲಿ ತರಬೇತಿ ಹೊಂದಿದ ಮೊದಲ ಶಿಕ್ಷಕಿ ಎಂದು ತಿಳಿಸಿದರು.

ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಚಳವಳಿಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪತಿ ಜ್ಯೋತಿ ಬಾ ಫುಲೆ ಅವರ ಜೊತೆಗೂಡಿ ಹದಿನಾಲ್ಕು ಶಾಲೆಗಳನ್ನು ಸ್ಥಾಪಿಸಿದವರು.
ಸಾವಿತ್ರಿ ಬಾಯಿ ಪುಲೆ ವರು ಪಾಠ ಮಾಡಲು ಶಾಲೆಗೆ ಹೊರಟಾಗ ಊರಿನ ಜನರು ಲೇವಡಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಲ್ಲು ತೂರುವುದು, ಸಗಣಿ ಎರಚುವುದು, ಮೈಮೇಲೆ ಕೆಸರು ಸುರಿಯುವುದು ಹೀಗೆ ಕಿರುಕುಳ ಕೊಟ್ಟಿದ್ದನ್ನು ಸಹಿಸಿಕೊಂಡು ಕೈಚೀಲದಲ್ಲಿ ಇನ್ನೊಂದು ಸೀರೆ ಇಟ್ಟುಕೊಂಡು ಮಕ್ಕಳು ಬರುವ ಮೊದಲೇ ಶಾಲೆಗೆ ಹೋಗಿ ಸೀರೆ ಬದಲಾಯಿಸಿ ಪಾಠ ಮಾಡಲು ಸಿದ್ಧರಾಗುತ್ತಿದ್ದರು. ಅವರ ಈ ಎಲ್ಲಾ ಹೋರಾಟದಲ್ಲೂ ಭುಜಕ್ಕೆ ಭುಜ ಕೊಟ್ಟು ನಿಂತವರು ಪತಿ ಜ್ಯೊತಿಬಾ ಪುಲೆ ಅವರು ಎಂದು ಜಿ.ಟಿ.ಡಿ ಹೇಳಿದರು.

ಬ್ರಿಟಿಷ್ ಸರ್ಕಾರ ಅವರ ಕಾರ್ಯವನ್ನು ಮೆಚ್ಚಿ ಭಾರತದ ಮೊದಲ ಶಿಕ್ಷಕಿ ಎಂಬ ಮನ್ನಣೆ ನೀಡಿತು. ಸ್ತ್ರೀಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಈ ದಂಪತಿಗಳ ಹಂಬಲವಾಗಿತ್ತು. ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ ಅವರು, ಮಹಿಳೆಯರಿಗಾಗಿಯೇ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿದರು ಎಂದು ವಿವರಿಸಿದರು.

ಪ್ಲೇಗ್ ರೋಗಿಗಳ ಸೇವೆ ಮಾಡುತ್ತಲೇ ಸ್ವತಃ ಆ ರೋಗಕ್ಕೆ ಬಲಿಯಾದರು ಸಾವಿತ್ರಿ ಬಾಯಿ ಫುಲೆ.ಅವರು ನಮ್ಮೆಲ್ಲರಿಗೂ ಆದರ್ಶ ತೋರಿದ ಧೀಮಂತ ಮಹಿಳೆ.

ಸಮಾರಂಭದಲ್ಲಿ ಉಪ ನಿರ್ದೇಶಕ ಜವರೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ರಾಷ್ಟ್ರೀಯ ಅಧ್ಯಕ್ಷೆ ಡಾ. ಲತಾ ಎಸ್. ಮುಳ್ಳೂರು, ಜಿಲ್ಲಾಧ್ಯಕ್ಷೆ ಸರಸ್ವತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ್, ಮಹೇಶ್, ಮಹದೇವ್, ರವಿಪ್ರಸನ್ನ, ರವಿಪ್ರಸನ್ನ, ಶಿವಮೂರ್ತಿ ಮತ್ತಿತರರು ಹಾಜರಿದ್ದರು.