ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹಿಂದೂಸ್ತಾನ್ ಮಷಿನ್ ಟೂಲ್ಸ್ (ಹೆಚ್’ಎಂಟಿ) ಕಂಪನಿ ಬಿಡುಗಡೆ ಮಾಡಿರುವ ವಿಶೇಷ ಆವೃತ್ತಿಯ ಕೈಗಡಿಯಾರಗಳ ಖರೀದಿಗೆ ಜನ ಸುಮಾರು ಎರಡೂವರೆ ಕಿ.ಮೀ. ದೂರ ಸಾಲುಗಟ್ಟಿ ನಿಂತಿದ್ದರು!
ಕನ್ನಡಿಗರ ಅಭಿಮಾನದ ಹೆಚ್ಎಂಟಿ ಕೈಗಡಿಯಾರಗಳಿಗೆ ಜನತೆ ಮುಗಿಬಿದ್ದ ಹಿನ್ನೆಲೆಯಲ್ಲಿ ಕಂಪನಿಗೆ ಮತ್ತಷ್ಟು ಹುರುಪು ಬಂದಿದೆ.
ಅಲ್ಲದೆ, ಕಾರ್ಖಾನೆಗೆ ಮರುಜೀವ ನೀಡಲು ಯತ್ನಿಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಾರ್ವಜನಿಕರಿಂದ ಬರುತ್ತಿರುವ ಬೇಡಿಕೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹೆಚ್ಎಂಟಿ ಕೈಗಡಿಯಾರಕ್ಜಾಗಿ ಜನತೆ ಸುಮಾರು ಎರಡು ಕಿಲೋಮೀಟರ್ ದೂರ ಸಾಲುಗಟ್ಟಿ ನಿಂತಿರುವುದನ್ನು ನೋಡಿದರೆ ಹೆಚ್ಎಂಟಿ ಬ್ರ್ಯಾಂಡ್ನ ಜನಪ್ರಿಯತೆ ಮತ್ತು ಗತವೈಭವ ಜನತೆಯ ಹೃದಯದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದ ಜಾಲಹಳ್ಳಿಯಲ್ಲಿರುವ ಹೆಚ್.ಎಂ.ಟಿ ಕಾರ್ಖಾನೆಯ ಆವರಣದ ಮಳಿಗೆ ಮುಂದೆ ಸರತಿ ಸಾಲಿನಲ್ಲಿ ನಿಂತು ಗ್ರಾಹಕರು ಖುಷಿಯಿಂದ ಗಡಿಯಾರ ಖರೀದಿ ಮಾಡಿದರು.
ನಗರದಲ್ಲಿ ಮೂರು ಕಡೆ ಮಳಿಗೆಗಳಿದ್ದು, ಅದರಲ್ಲಿ ಪ್ರಮುಖವಾಗಿ ಜಾಲಹಳ್ಳಿ ಮತ್ತು ಮೇಕ್ರಿ ಸರ್ಕಲ್ ಸಮೀಪದಲ್ಲಿರುವ ಹೆಚ್ಎಂಟಿ ಭವನದ ಮಳಿಗೆಯಲ್ಲಿ ಇದ್ದ ಎಲ್ಲಾ ವಾಚುಗಳು ಒಂದೇ ದಿನಕ್ಕೆ ಖಾಲಿಯಾಗಿವೆ!
ಒಂದು ಕಾಲದಲ್ಲಿ ಹೆಚ್ಎಂಟಿ ಕೈಗಡಿಯಾರ ಭಾರತದ ಹೆಮ್ಮೆಯ ವಾಚ್ ಬ್ರ್ಯಾಂಡ್ ಆಗಿತ್ತು ಮತ್ತು ‘ಭಾರತದ ಕಾಲಪಾಲಕ’ ಎಂದು ಕರೆಯಲಾಗುತ್ತಿತ್ತು. ಎಲ್ಲ ವಯೋಮಾನದ ಗ್ರಾಹಕರು ಬಿಸಿಲನ್ನು ಲೆಕ್ಕಿಸದೆ ಸಾಲಿನಲ್ಲಿ ನಿಂತಿದ್ದನ್ನು ನೋಡಿದರೆ ಹೆಚ್ಎಂಟಿ ವಾಚ್ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಹೆಚ್ ಡಿ ಕೆ ಹೇಳಿದ್ದಾರೆ.
ಕೈಗಡಿಯಾರಗಳ ಬೇಡಿಕೆ ಹೆಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್ ಅವರು ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ದಿನಾಚರಣೆ ಶುಭ ಸಂದರ್ಭದಲ್ಲಿ ಸೀಮಿತ ಸರಣಿಯ ವಿಶೇಷ ಗಡಿಯಾರಗಳನ್ನು ಬಿಡುಗಡೆ ಮಾಡಲಾಗಿತ್ತು. ತ್ರಿವರ್ಣ ಧ್ವಜ ಇರುವ ವಿಶೇಷ ವಾಚ್ ಗಳು ಹಾಗೂ ಗಂಡಭೇರುಂಡ ಕೈ ಗಡಿಯಾರಗಳು ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ ತಿಂಗಳ ಅಂತ್ಯದ ವೇಳೆಗೆ ಮತ್ತಷ್ಟು ವಾಚ್ ಗಳನ್ನು ತಯಾರಿಸಿ ಬಿಡುಗಡೆ ಮಾಡಲಾಗುವುದು ಹಾಗೂ ಅತ್ಯುತ್ತಮ ಗುಣಮಟ್ಟದ ಆಟೋಮ್ಯಾಟಿಕ್ ವಾಚ್ ಗಳನ್ನು ಕೂಡ ಮಾರಾಟಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸರತಿ ಸಾಲಿನಲ್ಲಿ ನಿಂತು ಗಡಿಯಾರ ಕೊಳ್ಳಲು ಬಿಸಿಲಿನಲ್ಲಿ ಕಾಯುತ್ತಿದ್ದ ಗ್ರಾಹಕರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿದೆ. ಹೆಚ್ಎಂಟಿ ಗಡಿಯಾರ ಎನ್ನುವುದು ಕೇವಲ ಸಮಯ ನೋಡಿಕೊಳ್ಳುವ ಸಾಧನವಷ್ಟೇ ಅಲ್ಲದೆ, ಅವರ ಭಾವನಾತ್ಮಕ ಅಂಶವೂ ಆಗಿದೆ ಎಂಬುದು ನನಗೆ ಅರ್ಥವಾಯಿತು ಎಂದು ರಮೇಶ್ ಅವರು ಹೇಳಿದ್ದಾರೆ.
