ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ಅವರು ರಾಜಕೀಯ ಪ್ರಭಾವ ಬಳಸಿ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಆಮ್ ಆದ್ಮಿ ಪಕ್ಷದ ಮುಖಂಡರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.
ಅಧಿಕಾರದ ದುರ್ಬಳಕೆ, ಬೆದರಿಕೆ ಹಾಗೂ ದೌರ್ಜನ್ಯಗಳ ಮೂಲಕ ವಿರೋಧದ ಧ್ವನಿಯನ್ನು ಅಡಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಪ್ ಮುಖಂಡರು ತೀವ್ರವಾಗಿ ಖಂಡಿಸಿದರು.
ಆಮ್ ಆದ್ಮಿ ಪಕ್ಷದ ಯಶವಂತಪುರ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಶಶಿಧರ್ ಆರಾಧ್ಯ ಅವರು ಮಾತನಾಡಿ ಇತ್ತೀಚೆಗೆ ಕೆಂಗೇರಿ ಆಟದ ಮೈದಾನವನ್ನು ಖಾಸಗಿ ಶಾಲೆಗೆ ಹಸ್ತಾಂತರಿಸಿರುವ ಸರ್ಕಾರದ ಪ್ರಕ್ರಿಯೆಯನ್ನು ಖಂಡಿಸಿ ಹೋರಾಟವನ್ನು ನಡೆಸಿ,ಕೊನೆಗೂ ಆಟದ ಮೈದಾನವನ್ನು ಖಾಸಗಿಯವರ ಸ್ವತ್ತಾಗಲು ಬಿಡದೆ ನಾಗರೀಕರಿಗೆ ಉಳಿಸಿಕೊಳ್ಳಲಾಯಿತು. ಇದರಿಂದ ಆಕ್ರೋಶಗೊಂಡ ಶಾಸಕರು ಸುಮ್ಮನೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವ ಮೂಲಕ ಬೆದರಿಕೆ ದೌರ್ಜನ್ಯದ ಹಾದಿಯನ್ನು ಹಿಡಿದಿರುವುದು ನಿಜಕ್ಕೂ ಶೋಭೆ ತರುವುದಿಲ್ಲ ಎಂದು ಹೇಳಿದರು.
ಯಶವಂತಪುರ ಕ್ಷೇತ್ರವು ಸಂವಿಧಾನದ ಆಡಳಿತಕ್ಕೆ ಒಳಪಟ್ಟ ಕ್ಷೇತ್ರ, ಯಾರೊಬ್ಬರ ಖಾಸಗಿ ‘ರಿಪಬ್ಲಿಕ್’ ಅಲ್ಲ. ನಾನು ದೂರು ನೀಡಿದ ವ್ಯಕ್ತಿಯನ್ನು ಜೀವನದಲ್ಲಿ ನೋಡಿಲ್ಲ. ಆದರೂ ಸುಳ್ಳು ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿರುವುದು ಕಾನೂನಿನ ಮೇಲಿನ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.
ಶಾಸಕರು ತಮ್ಮ ಅಧಿಕಾರವಧಿ ಪೂರ್ತಿ ತಮ್ಮ ವಿರೋಧಿಗಳನ್ನು ಹತ್ತಿಕ್ಕಲು ಈ ರೀತಿಯ ನೂರಾರು ಸುಳ್ಳು ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದು ನಿಜಕ್ಕೂ ಅಕ್ಷಮ್ಯ. ರಾಜಕೀಯವಾಗಿ ಎದುರಿಸಲು ಸಾಧ್ಯವಾಗದವರು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ
ಪಡಿಸಿಕೊಳ್ಳುತ್ತಿದ್ದಾರೆ,ಇಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ನ್ಯಾಯಾಲಯದಲ್ಲೂ, ಜನರ ನ್ಯಾಯಪೀಠದಲ್ಲೂ ಸತ್ಯವನ್ನು ಸಾಬೀತುಪಡಿಸುತ್ತೇವೆ ಎಂದು ಶಶಿಧರ್ ತಿಳಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ವಕೀಲ ನಂಜಪ್ಪ ಕಾಳೇಗೌಡ ಅವರು ಮಾತನಾಡಿ,ಇದೇ ರೀತಿಯಲ್ಲಿ ಹೇರೋಹಳ್ಳಿ ಕೆರೆ ಕಲುಷಿತಗೊಂಡಿರುವ ಕುರಿತು ಹೋರಾಟ ನಡೆಸಿದ್ದ ಪಕ್ಷದ ಹಿರಿಯ ಮುಖಂಡ ಡಾ. ಸತೀಶ್ ಕುಮಾರ್ ಅವರ ವಿರುದ್ಧವೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರುಪಯೋಗ
ಪಡಿಸಿಕೊಂಡು ಸುಳ್ಳು ಪ್ರಕರಣ ದಾಖಲಿಸಲಾಗಿತ್ತು ಎಂಬುದು ಅತ್ಯಂತ ಗಂಭೀರ ವಿಷಯ. ಕಾನೂನನ್ನು ರಾಜಕೀಯ ಸೇಡಿನ ಆಯುಧವಾಗಿ ಬಳಸುವ ಯಾವುದೇ ಪ್ರಯತ್ನವನ್ನು ನಾವು ನ್ಯಾಯಾಂಗದ ಮುಂದೆ ಪ್ರಶ್ನಿಸುತ್ತೇವೆ ಎಂದು ಹೇಳಿದರು.
ಈ ಪ್ರಕರಣಗಳ ಕುರಿತು ರಾಜ್ಯಪಾಲರು, ಮುಖ್ಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಮಗ್ರ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಅಧಿಕಾರದ ಅಹಂಕಾರ ಎಷ್ಟೇ ದೊಡ್ಡದಾಗಿದ್ದರೂ ಸಂವಿಧಾನ ಅದಕ್ಕಿಂತ ದೊಡ್ಡದು. ಯಶವಂತಪುರವನ್ನು ಎಂದಿಗೂ ‘ಸೋಮಶೇಖರ್ ರಿಪಬ್ಲಿಕ್’ ಆಗಲು ಬಿಡುವುದಿಲ್ಲ ಎಂದು ನಂಜಪ್ಪ ಕಾಳೇಗೌಡ ಎಚ್ಚರಿಸಿದರು.
