ಬೆಂಗಳೂರು: ಮೈಸೂರಿನ ಮೇಲೆ ಹಿಡಿತ ತಪ್ಪುತ್ತದೆ, ತವರು ಜಿಲ್ಲೆಯಲ್ಲಿ ಇನ್ನೊಂದು ಪವರ್ ಸೆಂಟರ್ ಸೃಷ್ಟಿಯಾಗುತ್ತದೆ ಎಂಬ ದುರುದ್ದೇಶದಿಂದ 6 ಬಾರಿ ಹಿರಿಯ ಮುಸ್ಲಿಂ ಶಾಸಕರಾದ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ತಮ್ಮಂತಹ ಡೋಂಗಿ ಜಾತ್ಯಾತೀತರಿಂದ ಬಿಜೆಪಿ ಮತ್ತು ಆರ್ ಎಸ್ಎಸ್ ಸೆಕ್ಯುಲರಿಸಮ್ ಪಾಠ ಕಲಿಯುವ ಅವಶ್ಯಕತೆ ಇಲ್ಲ ಸಚಿವ ಡಾ.ಯತೀಂದ್ರ ಅವರೇ ಎಂದು ಅಶೋಕ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
ಹಿಂದೂ ರಾಷ್ಟ್ರ ಎಂದರೆ ಸಮಾಜವಾದದ ಹೆಸರಿನಲ್ಲಿ, ಜ್ಯಾತ್ಯಾತೀತತೆ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿ ಇನ್ನೊಬ್ಬರನ್ನು ತುಳಿದು ಅಧಿಕಾರ ಅನುಭವಿಸುವುದಲ್ಲ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
ಹಿಂದೂ ರಾಷ್ಟ್ರ ಅಂದರೆ ಸರ್ವೇ ಜನಾಃ ಸುಖಿನೋ ಭವಂತು.ಇದು ಎಲ್ಲರ ಒಳಿತು ಬಯಸುವುದು ಎಂದು ಅಶೋಕ್ ತಿಳಿಸಿದ್ದಾರೆ.
