ಮೈಸೂರು: ಆಷಾಡ ಮಾಸದ ಕಡೆಯ ಶುಕ್ರವಾರದಂದು ಚಾಮುಂಡಿ ಬೆಟ್ಟದಲ್ಲಿ ಭಕ್ತರ ಸಾಗರ ಹರಿದು ಬಂದಿದೆ.
ಮುಂಜಾನೆಯಿಂದಲೇ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ಈ ಬಾರಿ ದೇವಿಯನ್ನು ಮಹಾಲಕ್ಷ್ಮಿ ರೂಪದಲ್ಲಿ ಅಲಂಕರಿಸಲಾಗಿದೆ. ತಿಳಿ ನೀಲಿ ಬಣ್ಣದ ರೇಷ್ಮೆ ಸೀರೆ, ಚಿನ್ನಾಭರಣಗಳನ್ನು ಧರಿಸಿ ತಾಯಿ ಎಲ್ಲರನ್ನ ಆಶೀರ್ವದಿಸುತ್ತಿದ್ದಾಳೆ.
ವಿವಿಧ ಬಗೆಯ ತಾಜಾ ಪುಷ್ಪಗಳಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗಿದೆ ಉತ್ಸವಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ಭಕ್ತರಿಗೆ ದರ್ಶನಕ್ಕೆ ಇಡಲಾಗಿದೆ.
ಕಳೆದ 4 ಶುಕ್ರವಾರಗಳಿಂದಲೂ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ, ಹವನಗಳು ನಡೆಯುತ್ತಾ ಬಂದಿದೆ. ಕಡೆಯ ಶುಕ್ರವಾರವಾದ್ದರಿಂದ ಭಕ್ತರ ಸಂಖ್ಯೆ ಇನ್ನೂ ಹೆಚ್ಚಿಗಿದೆ, ಬೆಳಗ್ಗೆ 4 ಗಂಟೆಯಿಂದಲೇ ಭಕ್ತರು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು.
ದೇವಸ್ಥಾನ ಆವರಣ, ಮೆಟ್ಟಿಲುಗಳು ಮತ್ತು ರಸ್ತೆಗಳ ಉದ್ದಕ್ಕೂ ಭಕ್ತರ ಕ್ಯೂ ಇತ್ತು. ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ಎಲ್ಲರೂ ಭಕ್ತಿಯಿಂದ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಪೊಲೀಸ್ ಮತ್ತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಹಾಗೂ ಅನೌನ್ಸ್ಮೆಂಟ್ ವ್ಯವಸ್ಥೆ ಮಾಡಲಾಗಿದೆ.
ಆಷಾಡದ ಪ್ರತಿ ಶುಕ್ರವಾರವೂ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವುದು ಮೈಸೂರಿನ ಸಂಪ್ರದಾಯ. ಈ ಬಾರಿಯೂ ನಾಲ್ಕೂ ಶುಕ್ರವಾರಗಳು ಅದ್ದೂರಿಯಾಗಿ ಆಚರಿಸಲ್ಪಟ್ಟಿದೆ ಕಡೆಯ ದಿನದಂದು ಮಹಾಲಕ್ಷ್ಮಿ ಸ್ವರೂಪದಲ್ಲಿ ಕಂಗೊಳಿಸಿದ ದೇವಿಯನ್ನು ನೋಡಿ ಭಕ್ತರು ಪುಳಕಿತರಾದರು.
ಒಟ್ಟಾರೆ ಆಷಾಡ ಶುಕ್ರವಾರಗಳು ಮೈಸೂರಿನಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಸಂಪನ್ನಗೊಂಡವು. ಮುಂದಿನ ದಿನಗಳಲ್ಲಿ ನವರಾತ್ರಿ ಹಬ್ಬಕ್ಕೆ ಚಾಮುಂಡಿ ಬೆಟ್ಟ ಮತ್ತಷ್ಟು ಸಿಂಗಾರಗೊಳ್ಳಲಿದೆ.
