ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ 2026ರ ಕ್ರೀಡಾಕೂಟದ ಮಹಿಳೆಯರ ಶಾಟ್ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತದ ಪ್ಯಾರಾ ಅಥ್ಲೀಟ್, ಕನ್ನಡತಿ ಶಿಲ್ಪಾ ಕೆ.ಶೈಲಾ ಅವರನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗೌರವಿಸಿದರು.
ಬುಧವಾರ ನವದೆಹಲಿಯ ತಮ್ಮ ನಿವಾಸಕ್ಕೆ ಶಿಲ್ಪಾ ಹಾಗೂ ಅವರ ಇಬ್ಬರು ತರಬೇತುದಾರರನ್ನು ಬರಮಾಡಿಕೊಂಡು ಗೌರವಿಸಿದ ಸಚಿವರು, ಶಿಲ್ಪಾ ಅವರ ಸಾಧನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಲ್ಪಾ ಅವರ ಹಿನ್ನೆಲೆ, ಅವರ ಈವರೆಗಿನ ಸಾಧನೆ ಹಾಗೂ ಅವರ ತಂದೆ ತಾಯಿ ಇನ್ನಿತರ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ನಿಮ್ಮ ಸಾಧನೆ ಪ್ರೇರಣೆಯಾಗಿದೆ,ಇದು ಐತಿಹಾಸಿಕ. ನೀವು ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆ.ಆರ್. ನಗರ ತಾಲೂಕಿನವರು ಯುವ ತಲೆಮಾರಿಗೆ ನೀವು ಮಾದರಿ ಆಗಿದ್ದೀರಿ ಎಂದು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಶಿಲ್ಪಾ ಅವರ ತರಬೇತುದಾರರಾದ ಸತ್ಯನಾರಾಯಣ ಹಾಗೂ ಪುಷ್ಪಾ ನಿರಂಜನ್ ಪ್ರಸಾದ್ ಅವರನ್ನೂ ಸಚಿವರು ಸತ್ಕರಿಸಿದರು.
ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಸಾಮಾನ್ಯ ರೈತ ಕುಟುಂಬದ ಕುಡಿ ಶಿಲ್ಪಾ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲಿದ್ದಾಗಲೇ ಭೀಕರ ಅಪಘಾತದಲ್ಲಿ ಎಡಗಾಲು ಕಳೆದುಕೊಂಡು ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಆ ನೋವು ಮತ್ತು ಅಂಗವೈಕಲ್ಯವನ್ನು ದಿಟ್ಟತನದಿಂದ ಮೆಟ್ಟಿ ನಿಂತ ಅವರು, ತಮ್ಮ ಧೃಡ ಸಂಕಲ್ಪದೊಂದಿಗೆ ಇಡೀ ರಾಷ್ಟ್ರವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ.
ಶಿಲ್ಪಾ ಅವರ ಸಾಧನೆಯನ್ನು ಕಂಡು ನಾನು ಬಹಳ ಸಂತೋಷಪಟ್ಟಿದ್ದೇನೆ. ಗ್ರಾಮೀಣ ಪ್ರದೇಶದ ಹೆಣ್ಣುಮಗಳು, ಅದರಲ್ಲಿಯೂ ವಿಕಲಚೇತನ ಹೆಣ್ಣುಮಗಳು ಇಂತಹ ಅನನ್ಯ ಸಾಧನೆ ಮಾಡಿರುವುದು ಸಮಾಜಕ್ಕೆ ಮತ್ತು ಯುವಜನತೆಗೆ ದಾರಿದೀಪ ಎಂದು ಕುಮಾರಸ್ವಾಮಿ ಅವರು ಕೊಂಡಾಡಿದರು.
ಸದೃಢ ಇಚ್ಛಾಶಕ್ತಿ ಇದ್ದರೆ ಯಾವುದೇ ಸಾಧನೆ ಕಷ್ಟವಲ್ಲ ಎಂಬುದನ್ನು ಶಿಲ್ಪಾ ಅವರು ಸಾಭೀತುಪಡಿಸಿದ್ದಾರೆ ಎಂದು ಹೇಳಿದರು.
