ಮೈಸೂರು: ಜೆ ಎಸ್ ಎಸ್ ಕಾಲೇಜಿನ ಹಿಂಬಾಗಿಲು ಬಳಿ ಕೃಷ್ಣರಾಜ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ಬೀರಪ್ಪ ಅವರು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಕೆ.ಆರ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಜೆಎಸ್ ಎಸ್ ಕಾಲೇಜಿನ ಹಿಂಬಾಗಿಲು ಬಳಿ ಕರ್ತವ್ಯದಲ್ಲಿದ್ದ ಕೆ.ಆರ್ ಸಂಚಾರಿ ಪೊಲೀಸ್ ಬೀರಪ್ಪ ಕೆ.ಆರ್ ಅವರು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯ ವಿಡಿಯೋ ಸೆರೆಹಿಡಿಯುತ್ತಿದ್ದವರ ಮೊಬೈಲ್ಗಳನ್ನು ಕಸಿದುಕೊಂಡು, ಡಿಜಿಟಲ್ ಸಾಕ್ಷ್ಯ ನಾಶಪಡಿಸಲು ಮೊಬೈಲ್ ಫ್ಲ್ಯಾಶ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯನ್ನು ಖಂಡಿಸಿ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಕೆ.ಆರ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಕರ್ತವ್ಯದಲ್ಲಿರುವ ಅಧಿಕಾರಿಗಳು ಕಾನೂನಿನ ರಕ್ಷಕರಾಗಿರಬೇಕು, ಕಾನೂನು ಉಲ್ಲಂಘಿಸುವುದಲ್ಲ,
ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕರ ಮೇಲಿನ ಹಲ್ಲೆ, ಮೊಬೈಲ್ ಕಸಿದುಕೊಳ್ಳುವಿಕೆ ಮತ್ತು ಡಿಜಿಟಲ್ ಸಾಕ್ಷ್ಯ ನಾಶದ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಸಂಚಾರಿ ಪೊಲೀಸ್ ಬೀರಪ್ಪ ಕೆ.ಆರ್ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
