ಹುಣಸೂರು: ರಾಜ್ಯದ ಚೆಸ್ಕಾಂ ಸೇರಿದಂತೆ
ಯಾವುದೇ ವುದ್ಯುತ್ ನಿಗಮಗಳನ್ನು,ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಬಾರದು ಎಂದು ಹುಣಸೂರು ವಿದ್ಯುತ್ ನಿಗಮದ ಕಚೇರಿ ಸಿಬ್ಬಂದಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಕರ್ನಾಟಕದ ರೈತರಿಗೆ ಕೃಷಿ ಪಂಪ್ಸೆಟ್ಗಳಿಗಾಗಿ ಸರ್ಕಾರ ಉಚಿತ ಅಥವಾ ಸಬ್ಸಿಡಿ ಆಧಾರಿತ ವಿದ್ಯುತ್ ಪೂರೈಸುತ್ತಿದೆ. ಈ ವ್ಯವಸ್ಥೆಯ ಆರ್ಥಿಕ ನೆಲೆಗಟ್ಟು ಎಸ್ಕಾಂಗಳ ಒಟ್ಟು ಆದಾಯವಾಗಿದೆ.
ಹೀಗೆ ವಿದ್ಯುತ್ ನಿಯಮಗಳನ್ನು ಖಾಸಗೀಕರಣ ಮಾಡಿದರೆ ರಾಜ್ಯದ ರೈತ ಸಮುದಾಯದ ಹಿತಾಸಕ್ತಿಯನ್ನು ಕಡೆಗಣಿಸಿದಂತಾಗುತ್ತದೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಕಲ್ಯಾಣ ಯೋಜನೆಗಳ ನಿರಂತರತೆ, ಕೃಷಿ ಮತ್ತು ಗ್ರಾಮೀಣ ಗ್ರಾಹಕರ ಹಿತಾಸಕ್ತಿ, ಉದ್ಯೋಗಾವಕಾಶಗಳ ಸಂರಕ್ಷಣೆ ಹಾಗೂ ಇತರೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ತಿಳಿಸಿದರು.
ವಿದ್ಯುತ್ ಗ್ರಾಹಕರು, ಸಾರ್ವಜನಿಕ ಹಣಕಾಸು, ಸಾಮಾಜಿಕ ಕಲ್ಯಾಣ ಬಾಧ್ಯತೆಗಳು ಹಾಗೂ ಕರ್ನಾಟಕದ ವಿದ್ಯುತ್ ವಿತರಣಾ ವ್ಯವಸ್ಥೆಯ ದೀರ್ಘಕಾಲೀನ ಸ್ಥಿರತೆಯ ಮೇಲೆ ವ್ಯಾಪಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಇಲಾಖೆ ನೌಕರರ ಪ್ರತಿಭಟನೆಗೆ ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಬೆಂಬಲ ವ್ಯಕ್ತಪಡಿಸಿದೆ.
ಈ ಬಗ್ಗೆ ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜತೆ ಮಾತನಾಡಿ ವಿದ್ಯುತ್ ಇಲಾಖೆ ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಸಧ್ಯದಲ್ಲೇ ಬೆಂಗಳೂರಿನ ಕಾವೇರಿ ಭವನದ ಬಳಿ ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.
