ಶ್ರೀಲಂಕಾದಲ್ಲಿ ಭಾರೀ ಮಳೆ;ಭೂಕುಸಿತ-ಸಾವಿನ ಸಂಖ್ಯೆ 607ಕ್ಕೆ ಏರಿಕೆ

ಕೊಲೊಂಬೊ: ಈಗಾಗಲೇ ಭಾರಿ ಮಳೆ ಪ್ರವಾಹ ಮತ್ತು ಭೂ ಕುಸಿತಕ್ಕೆ ನಲುಗಿರುವ ಶ್ರೀಲಂಕಾದಲ್ಲಿ ಮತ್ತೆ ಬಾರಿ ಮಳೆಯಾಗಿದ್ದು, ಭಾರೀ ಭೂಕುಸಿತವಾಗಿದೆ.

ದಿತ್ವಾ ಚಂಡಮಾರುತದಿಂದ ಉಂಟಾದ ವಿಕೋಪಕ್ಕೆ ನಲುಗಿರುವ ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 607ಕ್ಕೆ ಏರಿದೆ.
ಭಾರಿ ಮಳೆಯಿಂದಾಗಿ ಬೆಟ್ಟಗಳು ಮತ್ತಷ್ಟು ನೀರಿನಿಂದ ಆವೃತ್ತವಾಗಿ ಅಸ್ಥಿರಗೊಳ್ಳಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಕಳೆದ 24 ಗಂಟೆಗಳಿಂದ ಸುಮಾರು 150ಮಿಲಿ ಮೀಟರ್​ಗಿಂತ ಹೆಚ್ಚಿನ ಮಳೆಯಾಗಿದ್ದು, ಇದು ಹೀಗೇ ಮುಂದುವರಿದರೆ, ಭೂ ಕುಸಿತ‌ ಹೆಚ್ಚಾಗಲಿದೆ.
ಈ ಪ್ರಕೃತಿ ವಿಕೋಪದಿಂದ 607 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ದೃಢಪಡಿಸಿದೆ. ಈ ಹಿಂದೆ ಲೆಕ್ಕಕ್ಕೆ ಸಿಗದ ಅನೇಕರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ, ಆದರೆ ಸಂತ್ರಸ್ತರ ಸಂಖ್ಯೆ ಎರಡು ಮಿಲಿಯನ್‌ಗಿಂತಲೂ ಹೆಚ್ಚಾಗಿದೆ.
ದಾಖಲೆಯ ಮಳೆಯಿಂದಾಗಿ ಪ್ರವಾಹ ಮತ್ತು ಮಾರಕ ಭೂಕುಸಿತಗಳು ಸಂಭವಿಸಿವೆ. ಈ ಪ್ರಕೃತಿ ವಿಕೋಪವು ಇತಿಹಾಸದಲ್ಲೇ ಅತ್ಯಂತ ಸವಾಲಿನ ನೈಸರ್ಗಿಕ ವಿಕೋಪ ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ತಿಳಿಸಿದ್ದಾರೆ.
ಶ್ರೀಲಂಕಾದ ಸೇನೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆಗೆ ಸಹಾಯ ಮಾಡಲು ಸಾವಿರಾರು ಸೈನಿಕರನ್ನು ನಿಯೋಜಿಸಿದೆ.

ಸಂತ್ರಸ್ತರಿಗೆ ಮನೆಗಳನ್ನು ಪುನರ್ನಿರ್ಮಿಸಲು ಮತ್ತು ಜೀವನೋಪಾಯವನ್ನು ಕಾಪಾಡಿಕೊಳ್ಳಲು ಉದಾರ ಪರಿಹಾರವನ್ನು ನೀಡಲು ದಿಸಾನಾಯಕೆ ಹಲವು ಕ್ರಮಗಳನ್ನು ಘೋಷಿಸಿದ್ದಾರೆ.

ಅವಘಡದಲ್ಲಿ ಸಿಲುಕಿಕೊಂಡಿದ್ದ ಸುಮಾರು 300 ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.