ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಮತ್ತೆ 5 ವರ್ಷ ಜೈಲು ಶಿಕ್ಷೆ

ಢಾಕಾ: ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಇನ್ನೊಂದು ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಢಾಕಾ ನ್ಯಾಯಾಲಯ ಆದೇಶಿಸಿದೆ.

ಇನ್ನೊಂದು ಪ್ರಕರಣದಲ್ಲಿ ಮಾಜಿ ಶೇಖ್ ಹಸೀನಾ ಸಹೋದರಿ ಶೇಖ್ ರೆಹಾನಾಗೆ 7 ವರ್ಷಗಳ ಜೈಲು ಶಿಕ್ಷೆ, ಬ್ರಿಟಿಷ್ ಸಂಸದೆ ತುಲಿಪ್ ಸಿದ್ದಿಕ್ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೀದ್ ಜಾಯ್ ಅವರಿಗೆ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 1,00,000 ಬಾಂಗ್ಲಾದೇಶಿ ಟಕಾ ದಂಡ ವಿಧಿಸಿದೆ.

ಶೇಖ್ ಹಸೀನಾ ಅವರ ಪುತ್ರಿ ಸೈಮಾ ವಾಜೀದ್ ಪುಟುಲ್ ಅವರಿಗೂ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ಲಾಟ್ ವಂಚನೆ ಪ್ರಕರಣದಲ್ಲಿ ಢಾಕಾದ ವಿಶೇಷ ವ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಬಾಂಗ್ಲಾದೇಶದ ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಶೇಖ್ ಹಸೀನಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಕಳೆದ ಜನವರಿಯಲ್ಲಿ ಢಾಕಾದ ಪುರ್ಬಾಚಲ್ ಪ್ರದೇಶದಲ್ಲಿ ಸರ್ಕಾರಿ ಪ್ಲಾಟ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದ ಮೇಲೆ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಿಸಿತ್ತು.

ಈಗಾಗಲೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿದೆ. 2024ರ ಜುಲೈ ದೇಶದಲ್ಲಿ ನಡೆದ ಪ್ರತಿಭಟನೆ ಹತ್ತಿಕ್ಕಲು ಅವರು ಮಾಡಿದ ಪ್ರಯತ್ನಗಳಿಗಾಗಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಅವರು ತಪ್ಪಿತಸ್ಥರೆಂದು ತೀರ್ಪು ನೀಡಲಾಗಿದೆ.

ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್​​ ಹಸೀನಾ ಅವರನ್ನು ಹಸ್ತಾಂತರಿಸಲು ಮೊಹಮದ್​ ಯೂನಸ್​ ಅವರ ನೇತೃತ್ವದಲ್ಲಿ ರಚಿತವಾಗಿರುವ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ಮನವಿ ಮಾಡಿದೆ.