ಅಂಬೇಡ್ಕರ್ ಪ್ಲೆಕ್ಸ್ ವಿರೂಪ, ಬುದ್ದನ ಪ್ರತಿಮೆ ದ್ವಂಸ: ಆರೋಪಿ ಬಂಧನ

Spread the love

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಜಿಲ್ಲೆಯ ಜ್ಯೋತಿಗೌಡನಪುರ ಗ್ರಾಮದಲ್ಲಿರುವ ಲುಂಬಿಣಿ ಬುದ್ಧ ವಿಹಾರದಲ್ಲಿದ್ದ ಬುದ್ಧ ವಿಗ್ರಹ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಗ್ರಹ ಒಡೆದು ಹಾಕಿದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದ ಪ್ಲೆಕ್ಸ್ ಹರಿದುಹಾಕಿದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.

ಜ್ಯೋತಿಗೌಡನಪುರ ಗ್ರಾಮದ ಮುಖಂಡರಾದ ಜೆ.ಸಿ.ರಾಘವೇಂದ್ರ ಪ್ರಸನ್ನ‌ ಅವರು ನೀಡಿದ ದೂರಿನ ಮೇರೆಗೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಪ್ರಾರಂಭಿಸಿದ ಪೊಲೀಸರು ಅದೇ ಗ್ರಾಮದ ಮಂಜುನಾಥ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಸಾಕ್ಷ್ಯ ಕಲೆ ಹಾಕಿ ಬಂದಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧೀಕ್ಷಕರಾದ
ಡಾ. ಬಿ.ಟಿ. ಕವಿತಾ ತಿಳಿಸಿದರು.

ಪ್ರಕರಣ ಅತೀಸೂಕ್ಷ್ಮವಾಗಿದ್ದರಿಂದ ಆರೋಪಿಗಳ ಪತ್ತೆಗೆ ಡಾ. ಬಿ.ಟಿ. ಕವಿತಾ, ಅವರ ಮಾರ್ಗದರ್ಶನದಲ್ಲಿ ಒಟ್ಟು 7 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು.

ಜ್ಯೋತಿಗೌಡನಪುರ ಹಾಗೂ ಸುತ್ತ ಮುತ್ತಲ ವ್ಯಾಪ್ತಿಯಲ್ಲಿ 86 ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಪರಿಶೀಲಿಸಿ, ಒಟ್ಟು 1877 ಕಾಲ್‌ಡೀಟೇಲ್ಸ್ ರೆಕಾರ್ಡ್ಸ್‌ಗಳು ಹಾಗೂ 24 ಸ್ಥಳಗಳ ಸೆಲ್ ಐ.ಡಿ. ಟವರ್‌ಡಂಪ್ ವಿವರಗಳನ್ನು ಪಡೆದು ಪರಿಶೀಲಿಸಲಾಯಿತು.

ಇತರೆ ತಾಂತ್ರಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ತನಿಖೆಯಲ್ಲಿ ಅಳವಡಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಯಿತು.

ಚಾಮರಾಜನಗರ ಟೌನ್‌ ಸುತ್ತಮುತ್ತಲ ಲಾಡ್ಜ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತಪಾಸಣೆ ಮಾಡಿ ಮಾಹಿತಿ ಕಲೆಹಾಕಿದ ಸ್ಥಳೀಯ ಬೀಟ್ ಸಿಬ್ಬಂದಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು, ಸ್ಥಳೀಯ ಬಾತ್ಮೀದಾರರುಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಯಿತು ಎಂದು ‌ವಿವರಿಸಿದರು.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಸುಮಾರು 2 ತಿಂಗಳ ಹಿಂದೆ ಮದ್ಯಪಾನ ಮಾಡಿ ಗ್ರಾಮದ ರಮೇಶಣ್ಣ ಅವರ ಅಂಗಡಿ ಬಳಿ ಪರಿಶಿಷ್ಟ ಜನಾಂಗದ ಮಹಿಳೆಯರೊಂದಿಗೆ ಜಗಳ ಮಾಡಿಕೊಂಡಿದ್ದ, ಆ ಸಮಯದಲ್ಲಿ ಆರೋಪಿತ ತನ್ನ ಚಪ್ಪಲಿಯಿಂದ ಮಹಿಳೆಗೆ ಹೊಡೆದಿದ್ದಾನೆ.

ಈ ಘಟನೆಗೆ ಸಂಬಂದಿಸಿದಂತೆ ಗ್ರಾಮದ ಬಸವನಕಟ್ಟಿ ದೇವಸ್ಥಾನದಲ್ಲಿ ಊರಿನ ಯಜಮಾನರು ನ್ಯಾಯ ಪಂಚಾಯಿತಿ ಸೇರಿಸಿ, ಆತನಿಗೆ 60,000 ರೂ. ದಂಡ ಹಾಕಿದ್ದಾರೆ, ಅದಕ್ಕೆ ಆರೋಪಿ ಹಾಗೂ ಆತನ ಮನೆಯವರು ಒಪ್ಪಿಕೊಂಡು, ತನ್ನ ಮನೆಯಲ್ಲಿ ಇದ್ದ ಚಿನ್ನವನ್ನು ಗಿರವಿ ಇಟ್ಟು 30.000 ರೂ ದಂಡ ಪಾವತಿಸಿದ್ದಾರೆ.

ಉಳಿದ ದಂಡದ ಹಣವನ್ನು ತನ್ನ ಹೋಂಡಾ ಶೈನ್ ಮೋಟಾರ್ ಬೈಕನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ದಂಡ ಕಟ್ಟಿದ್ದಾನೆ.

ಇದೇ ವೈಷಮ್ಯದಿಂದ ಆರೋಪಿಯು 23/10/2025 ರಂದು ರಾತ್ರಿ ಮದ್ಯಪಾನ ಮಾಡಿ ಮೇಲಿನ ಕೃತ್ಯವನ್ನು ಎಸಗಿರುವುದು ಖಚಿತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ದೃಢಪಟ್ಟಿದೆ.ಹಾಗಾಗಿ ಆರೋಪಿಯನ್ನು ಬಂಧುಸಿ ಮುಂದಿನ ಕಾನೂನುಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕಿ ಡಾ. ಬಿ.ಟಿ. ಕವಿತ ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ, ಶಶಿಧರ್ ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಸ್ನೇಹರಾಜ್, ಕೊಳ್ಳೇಗಾಲ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಧರ್ಮೇಂದ್ರ ಅವರ ನೇತೃತ್ವದಲ್ಲಿ .ಶ್ರೀಕಾಂತ್, (ಸಿಪಿಐ ಯಳಂದೂರು ವೃತ್ತ,) ಸಿ.ಪಿ.ನವೀನ್, (ಪಿ.ಐ., ಪೂರ್ವ ಠಾಣೆ, ಚಾಮರಾಜನಗರ,) ಚಿಕ್ಕರಾಜಶೆಟ್ಟಿ, (ಪಿ.ಐ., ರಾಮಾಪುರ ಠಾಣೆ,) ಎಸ್.ಎಲ್.ಸಾಗರ್, (ಸಿಪಿಐ ಸಂತೇಮರಹಳ್ಳಿ ವೃತ್ತ, ) ಸಿ.ಆನಂದಮೂರ್ತಿ, (ಪಿಐ, ಹನೂರು ಠಾಣೆ,) ತಾಜುದ್ದಿನ್, (ಪಿಎಸ್‌ಐ ಸಂತೇಮರಹಳ್ಳಿ ಠಾಣೆ,)
ಮಂಜುನಾಥ್, (ಪಿಎಸ್‌ಐ, ಮಹಿಳಾ ಠಾಣೆ,) ಆರ್.ವೆಂಕಟೇಶ್, (ಪೂರ್ವ ಠಾಣೆ, ಚಾಮರಾಜನಗರ,) ಮಹೇಶ್, (ಪಿಎಸ್‌ಐ, ತೆರಕಣಾಂಬಿ ಠಾಣೆ) ಹಾಗೂ ಚಾಮರಾಜನಗರ ಉಪವಿಭಾಗ ಹಾಗೂ ಕೊಳ್ಳೇಗಾಲ ಉಪವಿಭಾಗದ ಠಾಣೆಗಳ ಅಪರಾಧ ವಿಭಾಗದ ಸಿಬ್ಬಂದಿ, ಜಿಲ್ಲಾ ಪೊಲೀಸ್ ಕಚೇರಿ ಹಾಗೂ ಮೈಸೂರು ಜಿಲ್ಲೆಯ ತಾಂತ್ರಿಕ ವಿಭಾಗದ ಸಿಬ್ಬಂದಿ,ಎಸ್ಒಸಿಒ ತಂಡ, ಶ್ವಾನದಳ, ಬೆರಳುಮುದ್ರೆ ಘಟಕ ಹಾಗೂ ಚಾಮರಾಜನಗರ ಪೂರ್ವ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು ಅಲ್ಲದೆ ೪೫ ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗವಹಿಸಿ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ ಎಂದು ವಿವರಿಸಿದರು.