ಹೈದರಾಬಾದ್: ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 24 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ತೆಲಂಗಾಣದ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಆರ್‌ಟಿಸಿ ಬಸ್ ಹಾಗೂ ಟ್ರಕ್ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಪರಿಣಾಮ ಬಸ್‌ನಲ್ಲಿ 24 ಮಂದಿ ಸಾವನ್ನಪ್ಪಿದ್ದು, 25 ಜನ ಗಾಯಗೊಂಡಿದ್ದಾರೆ
ಜಲ್ಲಿಕಲ್ಲು ತುಂಬಿದ್ದ ಟ್ರಕ್ ಎದುರಿನಿಂದ ಬರುತ್ತಿದ್ದ ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕ ಅತೀ ವೇಗವಾಗು ಚಾಲನೆ ಮಾಡಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಅಪಘಾತ ನಡೆದ ಸ್ಥಳದ ಬಳಿ ಅಪಾಯಕಾರಿ ತಿರುವು ಇದ್ದು, ಇದೇ ಪ್ರದೇಶದಲ್ಲಿ ಅತಿ ವೇಗದಲ್ಲಿ ಬಂದ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಬಸ್ ಪ್ರಯಾಣಿಕರು, ಬಸ್ ಮತ್ತು ಟಿಪ್ಪರ್ ಚಾಲಕರು ಮೃತಪಟ್ಟಿದ್ದಾರೆ.
ಒಂದು ವರ್ಷದ ಮಗು ಸೇರಿದಂತೆ 11 ಮಹಿಳೆಯರು ಮತ್ತು 9 ಪುರುಷರು ಸಾವನ್ನಪ್ಪಿದ್ದಾರೆ, 24 ಜನರು ಗಾಯಗೊಂಡಿದ್ದು 5 ಜನರ ಸ್ಥಿತಿ ಗಂಭೀರವಾಗಿತ್ತು,ಅವರಲ್ಲಿ ನಾಲ್ಕು ಮಂದಿ ಚೆವೆಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ,ಅಲ್ಲದೆ ಮೃತರ ಕುಟಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

