ಮಾನವ-ವನ್ಯಜೀವಿ ಸಂಘರ್ಷ ತಹಬಂದಿಗೆ ಬಾರದಿದ್ದರೆ ಸಫಾರಿ ಬಂದ್: ಈಶ್ವರ ಖಂಡ್ರೆ

Spread the love

ಚಾಮರಾಜನಗರ, ನ.2: ಬಂಡೀಪುರ, ಮೈಸೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಇದು ತಹಬಂದಿಗೆ ಬಾರದಿದ್ದರೆ ಸಫಾರಿಯನ್ನು ಸಂಪೂರ್ಣ ಬಂದ್ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಚಾಮರಾಜನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವನ್ಯಜೀವಿ- ಮಾನವ ಸಂಘರ್ಷ ಇರುವ ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಸಿಬ್ಬಂದಿ ಕೊರತೆ ಎನ್ನುತ್ತೀರಿ. ಹಾಗಾದರೆ ಸಫಾರಿಗೆ ನಿಯೋಜಿಸಿರುವ ಸಿಬ್ಬಂದಿಯನ್ನೇ ಅಲ್ಲಿಗೆ ನಿಯೋಜಿಸಬೇಕಾಗುತ್ತದೆ ಎಂದು ಹೇಳಿದರು.

ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಕಂದಾಯ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಮನ್ವಯದ ಕೊರತೆ, ಪರಸ್ಪರ ದೋಷಾರೋಪವನ್ನು ಸರ್ಕಾರ ಕ್ಷಮಿಸುವುದಿಲ್ಲ ಸಬೂಬುಗಳಿಗೆ ಅವಕಾಶವಿಲ್ಲ ಎಂದು ಕಠಿಣವಾಗಿ ಹೇಳಿದರು.

ಆನೆ, ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ನಿಮಗೂ ತಿಳಿದಿದೆ. ಹೆಚ್ಚುತ್ತಿರುವ ಪ್ರಾಣಿಗಳಿಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಆದರೆ ಇರುವ ಕಾಡಿನಲ್ಲೇ ವನ್ಯಜೀವಿಗಳಿಗೆ ಸೂಕ್ತ ಆಹಾರ ಸಿಗುವಂತೆ ಮಾಡಲು ಕಾರ್ಯಯೋಜನೆ ರೂಪಿಸಿ ಎಂದು ಆದೇಶಿಸಿದರು.

ಮಾಂಸಹಾರಿ ಕಾಡು ಪ್ರಾಣಿಗಳಿಗೆ ಕಾಡಿನೊಳಗೆ ಜಿಂಕೆ, ಕಡವೆ ಇತ್ಯಾದಿ ಲಭಿಸಬೇಕಾದರೆ, ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲು, ಸೊಪ್ಪು ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಲಾಂಟನಾ, ಸನ್ನಾ ಇತ್ಯಾದಿ ಕಳೆ ತೆಗೆದು ಹೆಚ್ಚು ಸೊಪ್ಪು, ಹುಲ್ಲು ಲಭಿಸುವಂತೆ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಇತ್ತೀಚೆಗೆ ಸರಗೂರಿನಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ಸರಗೂರು ಅಥವಾ ಎಚ್.ಡಿ.ಕೋಟೆ ಇಲ್ಲವೆ ನಂಜನಗೂಡಿನಲ್ಲಿ ಮಾಡಿಸಬಹುದಾಗಿತ್ತು. ಮೈಸೂರಿಗೆ ತರುವ ಅಗತ್ಯವೇನಿತ್ತು. ಅನಗತ್ಯವಾಗಿ ಸರ್ಕಾರದ ಮೇಲೆ ಸಚಿವರ ಮೇಲೆ ಆರೋಪ ಬರುವಂತೆ ಮಾಡಬೇಡಿ. ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಂದು ಕಡಕ್ಕಾಗಿ ಹೇಳಿದರು.

ಮಾನವ-ವನ್ಯಜೀವಿ ಸಂಘರ್ಷದಲ್ಲಿ ಯಾರೂ ಮೃತಪಡುವುದು ಬೇಡ. ಒಂದೊಮ್ಮೆ ಯಾರಾದರೂ ಮೃತಪಟ್ಟರೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ತ್ವರಿತವಾಗಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಕುಟುಂಬಕ್ಕೆ ಆದಷ್ಟು ಶೀಘ್ರ ಪಾರ್ಥಿವ ಶರೀರ ಒಪ್ಪಿಸಿ, ಅಂತ್ಯಕ್ರಿಯೆ ಆಗುವವರೆಗೂ ಇದ್ದು ಪರಿಸ್ಥಿತಿ ನಿಯಂತ್ರಣದಲ್ಲಿಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಕೆ. ವೆಂಕಟೇಶ್, ಡಾ. ಎಚ್.ಸಿ. ಮಹದೇವಪ್ಪ, ಲೋಕಸಭಾ ಸದಸ್ಯರಾದ ಸುನೀಲ್ ಬೋಸ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಎಚ್.ಎಂ. ಗಣೇಶ್ ಪ್ರಸಾದ್, ದರ್ಶನ್ ಧ್ರುವ ನಾರಾಯಣ್, ಅನಿಲ್ ಚಿಕ್ಕಮಾದು,ಸಿ.ಎನ್.ಮಂಜೇಗೌಡ ಹಾಗೂ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು, ಮೈಸೂರು, ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.