(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ನನಗೆ ಒಂದು ಅವಕಾಶ ನೀಡಿದ್ದೀರಿ ಅದಕ್ಕಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನಿಮ್ಮ ಋಣ ತೀರಿಸುತ್ತೇನೆ ಎಂದು ಶಾಸಕ ಎಂ. ಆರ್ ಮಂಜುನಾಥ್ ಮನದಾಳದಿಂದ ನುಡಿದರು.
ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಮಾರಮ್ಮನ ದೇವಸ್ಥಾನದಿಂದ ಈಶ್ವರನ ದೇವಸ್ಥಾನದವರೆಗೆ ಕಾವೇರಿ ನದಿಗೆ ತೆರಳುವ ರಸ್ತೆಗೆ ಡಾಂಬರೀಕರಣ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆ ಹಾಗೂ ಮಳೆ ಪರಿಹಾರ ಯೋಜನೆಯ ಅಡಿಯಲ್ಲಿ ಎರಡು ಕೋಟಿ ವೆಚ್ಚದಲ್ಲಿ
ಗುದ್ದಲಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿದರು.
ಈ ರಸ್ತೆ ಹದಗೆಟ್ಟಿದ್ದರಿಂದ ಬಹಳಷ್ಟು ಜನರಿಗೆ ಕಾವೇರಿ ನದಿ ಹಾಗೂ ಶಿವನ ದೇವಸ್ಥಾನಕ್ಕೆ ಹೋಗಿ ಬರಲು ಸಂಕಷ್ಟವಾಗುತ್ತಿತ್ತು. ಎರಡು ಕೋಟಿ ರೂ ವೆಚ್ಚದಲ್ಲಿ ಈ ರಸ್ತೆಗೆ ಡಾಂಬರೀಕರಣ ಮಾಡಲು ನಿರ್ಧರಿಸಲಾಗಿತ್ತು ಆದರೆ ಇದು ದೊಡ್ಡ ಗ್ರಾಮವಾದ್ದರಿಂದ ಈ ರಸ್ತೆಯನ್ನು ಸಿಸಿ ರಸ್ತೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು,ಜತೆಗೆ ಸಿಸಿ ರಸ್ತೆಗೆ ಬೇಕಾಗುವ ಹೆಚ್ಚುವರಿ ಅನುದಾನವನ್ನು ಹೊಂದಿಸಿ ಕೊಡುವುದಾಗಿ ಭರವಸೆ ನೀಡಿದರು.
ಇದು ದೊಡ್ಡ ಗ್ರಾಮವಾಗಿದ್ದು ಇಲ್ಲಿನ ಆಸ್ಪತ್ರೆ ಯಲ್ಲಿನ ಕೊರತೆ ನೀಗಿಸಲು ಪ್ರಯತ್ನಿಸೋಣ ಇಲ್ಲಿ ವೈದ್ಯರು ಮತ್ತು ಸಿಬ್ಬಂದಿ ಉಳಿಯಲು ವಸತಿ ಹಾಗೂ ಮೂಲಭೂತ ಸೌಕರ್ಯವಾಗಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಸಿಗುವ ಹಾಗೆ ಮಾಡಲು ಒಂದು ಸೂಕ್ತ ಸ್ಥಳ ನೋಡಿ ಎಂದು ಶಾಸಕರು ಸಲಹೆ ನೀಡಿದರು.
ಗ್ರಾಮದ ಮೂಲಭೂತ ಸೌಲಭ್ಯಕ್ಕೆ ನನ್ನ ವಿಶೇಷ ಅನುದಾನದಲ್ಲಿ ಈಗಾಗಲೇ ಅನುದಾನ ನೀಡಿದ್ದೇನೆ ಪ ಜಾತಿ ಮತ್ತು ಪ ಪಂಗಡಗಳ ಬಡಾವಣೆಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿಗಳ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಸಾಮಾನ್ಯ ವರ್ಗದ ಜನರು ವಾಸಿಸುವ ಬೀದಿಗಳ ರಸ್ತೆಗಳು ಅಭಿವೃದ್ಧಿ ಕಾಣಬೇಕು ಹಾಗಾಗಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಶಾಸಕರು ತಿಳಿಸಿದರು.
ಗ್ರಾಮದ ಕೋಟೆ ಬಡಾವಣೆಯ ಅಭಿವೃದ್ಧಿಗೆ ಒಂದಷ್ಟು ಅನುದಾನ ಬಿಡುಗಡೆಯಾಗಿದೆ. ಎಸ್ ಸಿ ಪಿ / ಟಿಎಸ್ ಪಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ,ಅದಕ್ಕೆ ಕಾರಣ ನಾವು ಹೇಳಲಾಗುವುದಿಲ್ಲ, ಶತಾಯ ಗತಾಯ ಬಿಡುಗಡೆ ಮಾಡಿಸಿ ಅನುದಾನ ತಂದು ಅಭಿವೃದ್ಧಿ ಮಾಡುವುದಾಗಿ ಮಂಜುನಾಥ್ ಶಪತ ಮಾಡಿದರು.
ಗ್ರಾಮದ ಹೊರವಲಯದಲ್ಲಿ ಹಾದು ಹೋಗುವ ಬೈಪಾಸ್ ಹೆದ್ದಾರಿ ಈಗಾಗಲೇ ಅಪಘಾತಗಳು ಸಂಭವಿಸಿದ್ದು ಮತ್ತೊಂದು ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ರಸ್ತೆಯಲ್ಲಿ ಕತ್ತಲು ಆವರಿಸುವುದರಿಂದ ಕೂಡಲೇ ವಿದ್ಯುತ್ ದೀಪ ಅಳವಡಿಸಿ ಸಂಪರ್ಕ ಕಲ್ಪಿಸಲಾಗುವುದು. ಕ್ಷೇತ್ರದ ನೀರಾವರಿ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 50 ಕೋಟಿ ಅನುದಾನದಲ್ಲಿ ಉಳಿದ ಹಣವನ್ನು ಬಳಸಿಕೊಂಡು ಈ ಭಾಗದ ರೈತರ ಜೀವನಾಡಿ ಧನಗೆರೆ ಜಹಗೀರ್ ದಾರ್ ಕಾಲುವೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಸತ್ಯಗಾಲ ಹಾಗೂ ಪಾಳ್ಯ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು ಈಗಾಗಲೇ ಪಾಳ್ಯದಿಂದ ಉಗನಿಯ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆಯಾಗಿದ್ದು ಈ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ, ಅದೇ ರೀತಿ ಉಗನಿಯ ಗ್ರಾಮದಿಂದ ಸತ್ಯಗಾಲದವರಿಗೆ ರಸ್ತೆ ಅಭಿವೃದ್ಧಿಯಾಗಬೇಕಿದೆ ಎಂದ ಹೇಳಿದರು.
ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ಅನುದಾನ 223 ಕೋಟಿ ರೂ.ಗಳು ಬಂದಿದೆ.
ಒಟ್ಟಾರೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಇನ್ನೂ 600 ಕೋಟಿಗೂ ಹೆಚ್ಚು ಅನುದಾನ ಬೇಕು ಎಂದು ತಿಳಿಸಿದರು
4.5 ಕೋಟಿ ಅನುದಾನ ಕ್ಷೇತ್ರದ ಗಿರಿಜನರ ವಸತಿ ಯೋಜನೆಗೆ ಬಿಡುಗಡೆಯಾಗಿದೆ. ಉಳಿದಂತೆ ಮುಂದೆ ವಸತಿ ಯೋಜನೆಗಳಿಗೆ ಪ್ರತಿ ಮನೆಗೆ 3 ರಿಂದ 3.5 ಲಕ್ಷ ರೂಗಳ ವರೆಗೆ ಅನುದಾನ (ಸಹಾಯಧನ) ಹೆಚ್ಚಳವಾಗಲಿದೆ ಹೆಚ್ಚಳವಾದ ನಂತರ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ಗ್ರಾಮಸ್ಥರು ಈಶ್ವರ ದೇವಾಲಯ ಅಭಿವೃದ್ಧಿಯಾಗಬೇಕು ಅದಕ್ಕಾಗಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಒತ್ತಾಯಿಸಿದರು.
ಇದಕ್ಕೂ ಮೊದಲು ಗ್ರಾಮದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜನರು ಪಟಾಕಿ ಸಿಡಿಸಿ ಶಾಸಕರನ್ನು ಬರ ಮಾಡಿಕೊಂಡರು.

ಇದೇ ವೇಳೆ ಶಾಸಕ ಮಂಜುನಾಥ್ ಅವರ 53 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸತ್ತೇಗಾಲದ ಗ್ರಾಮಸ್ಥರು ಬೃಹತ್ ಗಾತ್ರದ ಹಾರ ಹಾಕಿ ಕೇಕ್ ಕತ್ತರಿಸಿ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ಸುವರ್ಣ, ಸದಸ್ಯರುಗಳಾದ ಕವಿತಾ, ದೇವಿಕಾ, ವಸಂತ, ನಾಗರಾಜು, ಚಿಕ್ಕವೆಂಕಟನಾಯ್ಕ, ಗೋವಿಂದ, ಮರೀಲಿಂಗೇಗೌಡ, ಮಹದೇವ್, ಮಲ್ಲೇಶ್, ಉಮೇಶ್, ರಾಜೇಂದ್ರ, ಮಾಜಿ ಅಧ್ಯಕ್ಷರುಗಳಾದ ಶಾಂತಕುಮಾರಿ, ಕೆಂಪರಾಜು, ಪ್ರಭು, ಚೇತನ್, ಮಂಜೇಶ್ ಗೌಡ, ಕೆ ಆರ್ ಐ ಡಿ ಎಲ್ ನ ಎಇಇ ಚಿಕ್ಕಲಿಂಗಯ್ಯ, ಜೆಇ ಕಾರ್ತಿಕ್ ಹಾಗೂ ಗ್ರಾಮಸ್ಥರು ಹಾಜರಿದ್ದರು.