ಮೈಸೂರು: ಪರಿಸರ ಜಾಗೃತಿ ಮೂಲಕ
ಕೆಆರ್ ಕ್ಷೇತ್ರದ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಕುವೆಂಪು ನಗರದ ಎಂ. ಬ್ಲಾಕ್ ಗಣಪತಿ ದೇವಸ್ಥಾನ ಪಾರ್ಕ್ ಹಾಗೂ ವಾರ್ಡ್ ನಂಬರ್ 55 ಮತ್ತು 59ರ ವ್ಯಾಪ್ತಿಯಲ್ಲಿನ ಉದ್ಯಾನವನದಲ್ಲಿ ನೂರಾರು ಮಾವು ಮತ್ತು ಬೇವಿನ ಸಸಿಯನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಕೆ.ಆರ್ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ಗಿಡಗಳನ್ನು ನೆಡುವುದು ಮುಖ್ಯವಲ್ಲ ಅದನ್ನು ಪೋಷಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಶ್ರೀವತ್ಸ ಅವರು ಸುತ್ತಮುತ್ತಲಿನ ನಾಗರಿಕರು ಮತ್ತು ಮಕ್ಕಳ ಕೈ ನಿಂದಲೇ ಸಸಿಗಳನ್ನು ಪೋಷಣೆ ಮಾಡುವ ಪ್ರತಿಜ್ಞೆ ಮಾಡಿಸುವ ಮೂಲಕ ವಿನೂತನವಾಗಿ ಪರಿಸರ ಜಾಗೃತಿ ಮೂಡಿಸಿದರು.
ಮಕ್ಕಳು ಬೆಳೆದಂತೆ ಗಿಡಗಳು ಬೆಳೆದು ಮರವಾಗಿ ಹಬ್ಬ ಹರಿದಿನಗಳಲ್ಲಿ ಬೇಕಾಗುವ ಮಾವು, ಬೇವಿನ ಸೊಪ್ಪು ಸಿಗುವುದನ್ನು ಕಂಡು ಆನಂದ ಪಡುವುದರಲ್ಲಿ ಸಂಶಯವಿಲ್ಲವೆಂದು ತಿಳಿಸಿದರು.
ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಆಚರಣೆಯನ್ನು ಬಿಜೆಪಿ ಮುಖಂಡ ಜೆ.ಎನ್. ರಾಜೇಶ್ ಅವರು ಪರಿಸರ ಜಾಗೃತಿ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅದರಲ್ಲೂ ಪರಿಸರದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಣ ಕೊಟ್ಟು ಹಬ್ಬ ಹರಿದಿನ ಗಳಲ್ಲಿ ಮಾವು ಮತ್ತು ಬೇವಿನ ಸೊಪ್ಪನ್ನು ತರುವ ಈ ಕಾಲದಲ್ಲಿ ತಾವು ನೆಟ್ಟ ಗಿಡ ಮುಂದಿನ ದಿನಗಳಲ್ಲಿ ಮರವಾಗಿ ಎಲ್ಲರಿಗೂ ಉಚಿತವಾಗಿ ಸಿಕ್ಕರೆ ಸಂತಸ ತರುವ ವಿಚಾರ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ಕೆ.ಆರ್. ಕ್ಷೇತ್ರದ ಬಿಜೆಪಿ ಅಧ್ಯಕ್ಷ ಯು.ಜಿ.ಗೋಪಾಲ ರಾಜ ಅರಸ್, ಬಿಜೆಪಿ ಮುಖಂಡ ಜೆ.ಎನ್.ರಾಜೇಶ್, ಮುಖಂಡರುಗಳಾದ ಹೇಮಂತ್, ನಾಗೇಂದ್ರ,ಚೆಲುವರಾಜ್, ಮಂಜುಳಾ,ರೂಪ, ಕಿರಣ್, ಪುಟಾಣಿ ಮಕ್ಕಳು ಮತ್ತಿತರರು ಹಾಜರಿದ್ದರು.