ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದಾಗಿ ಎಲ್ಲ ಐದು ಮಹಾನಗರಪಾಲಿಕೆಗಳು ನೆಗೆದು ಬಿದ್ದುಹೋಗಿವೆ, ಎಲ್ಲ ಅಧಿಕಾರಗಳನ್ನು ಕೇವಲ ಮುಖ್ಯಮಂತ್ರಿಗೆ ನೀಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೌನ್ಸಿಲ್‌ಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಇದು ಸಂವಿಧಾನ ವಿರೋಧವಾಗಿರುವುದರಿಂದ ನಾವು ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಯನ್ನು ತರಾತುರಿಯಲ್ಲಿ ಕರೆಯಲಾಗಿದೆ. ಸಭೆ ಇರುವ ಒಂದು ದಿನದ ಮುನ್ನ ಆಹ್ವಾನ ನೀಡಲಾಗಿದೆ. ಕನಿಷ್ಠ 7 ದಿನಕ್ಕೆ ಮುನ್ನ ಸಭೆಯ ಬಗ್ಗೆ ಹಾಗೂ ಅಜೆಂಡಾ ಬಗ್ಗೆ ಮಾಹಿತಿ ನೀಡಬೇಕಿತ್ತು. ಮಧ್ಯಾಹ್ನ 12 ಗಂಟೆಗೆ ಅಜೆಂಡಾ ಕೊಟ್ಟಿದ್ದಾರೆ, ಅದನ್ನು ಓದಲು ಸಮಯ ಕೂಡ ಇಲ್ಲ. ಸಂವಿಧಾನದ 74 ನೇ ತಿದ್ದುಪಡಿ ಪ್ರಕಾರ, ಮಹಾನಗರ ಪಾಲಿಕೆಯಲ್ಲಿ ಮೇಯರ್ ಹಾಗೂ ಪಂಚಾಯತ್‌ನಲ್ಲಿ ಅಧ್ಯಕ್ಷರೇ ಪ್ರಮುಖರಾಗಿರುತ್ತಾರೆ. ಆದರೆ ಬೆಂಗಳೂರಿನಲ್ಲಿ ಐದು ಪಾಲಿಕೆಯಲ್ಲಿ ಮುಖ್ಯಮಂತ್ರಿಯೇ ಮುಖ್ಯರಾಗುತ್ತಾರೆ. ಹಾಗಾದರೆ ಮೇಯರ್‌ಗಳ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಬೆಂಗಳೂರು ಮೂಲಸೌಕರ್ಯಕ್ಕೆ ಎಂಜಿನಿಯರ್‌ಗಳನ್ನು ನೇಮಿಸಿದ್ದು, ಕಾರ್ಪೊರೇಶನ್ ಬದಲಾಗಿ ಇವರೇ ಎಲ್ಲ ಕಾಮಗಾರಿಗಳನ್ನು ಮಾಡುತ್ತಾರೆ. ಮುಖ್ಯಮಂತ್ರಿಯೇ ಯೋಜನೆಗಳನ್ನು ಅನುಮೋದನೆ ಮಾಡಿ, ಅವರೇ ಜಾರಿ ಮಾಡುತ್ತಾರೆ. ನಿಯಮ ಪ್ರಕಾರ, ಪಾಲಿಕೆಯ ಕೌನ್ಸಿಲ್ ಯೋಜನೆಗಳನ್ನು ಅನುಮೋದನೆ ಮಾಡಬೇಕು ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು ಎಂದು ಘೋಷಣೆ ಮಾಡಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ರಿಂಗ್ ರಸ್ತೆಯಲ್ಲಿ ರಾಶಿ ಕಸ ಬಿದ್ದಿದೆ. ಎಲ್ಲ ರಸ್ತೆಗಳಲ್ಲಿ ಹಳ್ಳ ಇದೆ. ಇಂತಹ ಸಮಸ್ಯೆಗಳನ್ನು ಇಟ್ಟುಕೊಂಡು ಸಭೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.
ಈಗಿರುವ ಕಾರ್ಪೊರೇಶನ್‌ನಲ್ಲಿ ಕೌನ್ಸಿಲ್ ಸಭೆ ಮಾಡಬಹುದು. ಹಾಗಾದರೆ ಉಳಿದ ನಾಲ್ಕು ಪಾಲಿಕೆಗಳಲ್ಲಿ ಕೌನ್ಸಿಲ್ ಸಭೆ ನಡೆಸಲು ಅವಕಾಶ ಎಲ್ಲಿದೆ ಅಂತಹ ಸಭಾಂಗಣ ಎಲ್ಲೂ ಇಲ್ಲ. ಚುನಾಯಿತ ಪ್ರತಿನಿಧಿಗಳು ಸಭೆ ಮಾಡಲು ಸ್ಥಳಾವಕಾಶವೇ ಇಲ್ಲದೆ ಐದು ಪಾಲಿಕೆ ಮಾಡಲಾಗಿದೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಬಿಬಿಎಂಪಿಯ ಕಂದಾಯ ವಿಭಾಗದಲ್ಲಿ 858 ಅಧಿಕಾರಿ/ನೌಕರರು ಇದ್ದರು. ಐದು ಭಾಗ ಮಾಡಿದರೆ 1,482 ಅಧಿಕಾರಿ/ನೌಕರರು ಬೇಕಾಗುತ್ತದೆ. ಅಂದರೆ ಇನ್ನೂ ಸುಮಾರು 700 ಅಧಿಕಾರಿಗಳನ್ನು ನೇಮಕ ಮಾಡಬೇಕು. 6326 ಹುದ್ದೆಗಳನ್ನು ಹೊಸದಾಗಿ ಸೃಜಿಸಬೇಕಾಗುತ್ತದೆ. ಅಂದರೆ 4 ಸಾವಿರ ಜನರನ್ನು ಹೊಸದಾಗಿ ನೇಮಕ ಮಾಡಬೇಕು. ಇಷ್ಟೊಂದು ಅಧಿಕಾರಿ/ನೌಕರರನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿ ಸಿದರು.
ಬೆಂಗಳೂರಿಗೆ ಮಾರಕವಾದ ಈ ಕ್ರಮವನ್ನು ಖಂಡಿಸಿ ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ. ಬಿಜೆಪಿಯ ಎಲ್ಲ ಶಾಸಕರೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಮುಂದೆ ಕಾನೂನು ಹೋರಾಟ ಕೂಡ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕರು ತಿಳಿಸಿದರು.