ಹುಣಸೂರು: ಹುಣಸೂರು ನಗರಸಭಾ ಮೈದಾನದಲ್ಲಿ ಮನರಂಜನಾ ವಸ್ತುಪ್ರದರ್ಶನ ನಡೆಯುತ್ತಿದ್ದು,ಇದರ ಅವಧಿ ಮುಗಿದಿದ್ದರೂ, ಇನ್ನೂ ತೆರವುಗೊಳಿಸಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾ. ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪಮಾಡಿದ್ದಾರೆ.
ಈ ಜಾಗ ಸರ್ಕಾರಿ ಸ್ವತ್ತಾಗಿದ್ದು, ಈ ಹಿಂದೆಯೂ ವಸ್ತುಪ್ರದರ್ಶನ ಅಳವಡಿಸಲು ನಾವು ವಿರೋಧಿಸಿದ್ದರೂ ಅಧಿಕಾರಿಗಳು ಒಂದು ತಿಂಗಳ ಕಾಲಾವಕಾಶ ನೀಡಿ ಅನುಮತಿ ನೀಡಿದ್ದರಿಂದ ವಸ್ತುಪ್ರದರ್ಶನ ನಡೆಯುತ್ತಿದೆ.
ಇದು ಸರ್ಕಾರಿ ಆಟದ ಮೈದಾನವಾಗಿದೆ.ಇಲ್ಲಿ ವಸ್ತುಪ್ರದರ್ಶನ ನಡೆಯುತ್ತಿರುವುದರಿಂದ ಮಕ್ಕಳಿಗೆ ಆಟವಾಡಲು ಹಾಗೂ ಸಾರ್ವಜನಿಕರು ವಾಯುವಿಹಾರ ಮಾಡಲು ಬಹಳ ತೊಂದರೆಯಾಗಿದೆ ಚೆಲುವರಾಜು ತಿಳಿಸಿದ್ದಾರೆ.
ಈಗಾಗಲೇ ವಸ್ತುಪ್ರದರ್ಶನದ ಅವಧಿ ಮುಗಿದಿರುವುದರಿಂದ ಇನ್ನು ಎರಡು ದಿನಗಳ ಒಳಗಾಗಿ ನಗರಸಭಾ ಮೈದಾನದಲ್ಲಿ ಅಳವಡಿಸಲಾಗಿರುವ ವಸ್ತುಪ್ರದರ್ಶನವನ್ನು ತೆರವುಗೊಳಿಸಬೇಕೆಂದು ಅವರು
ಒತ್ತಾಯಿಸಿದ್ದಾರೆ.
ಒಂದು ವೇಳೆ ಈ ಅವಧಿಯೊಳಗಾಗಿ ವಸ್ತುಪ್ರದರ್ಶನವನ್ನು ತೆರವುಗೊಳಿಸದಿದ್ದಲ್ಲಿ ಇನ್ನು ಮುಂದೆ ಏನೇ ಆದರೂ ನಗರಸಭೆ ಅಧಿಕಾರಿಗಳು, ಆಯುಕ್ತರು ಜವಾಬ್ದಾರರು ಎಂದು ಅವರು ಎಚ್ಚರಿಸಿದ್ದಾರೆ.
ಹಾಗೂ ಈ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಚೆಲುವರಾಜು ತಿಳಿಸಿದ್ದಾರೆ.