ನಾಡಿನಿಂದ ಕಾಡಿನತ್ತ ಗಜಪಡೆ:ಆನೆಗಳನ್ನು ಬೀಳ್ಕೊಡಲು ಬಂದ ಜನಸಾಗರ!

Spread the love

ಮೈಸೂರು: ವಿಶ್ವ ವಿಖ್ಯಾತ ದಸರಾ‌ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಆನೆಗಳಿಗೆ ಭಾವುಕ ಬೀಳ್ಕೊಡುಗೆ ನೀಡಲಾಯಿತು.

ಮೈಸೂರು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಆನೆಗಳಿಗೆ ಪೂಜೆ ಮಾಡಿ ನಂತರ ಬೀಳ್ಕೊಡಲಾಯಿತು.

ಅಭಿಮನ್ಯು, ಭೀಮ, ಧನಂಜಯ, ಪ್ರಶಾಂತ, ಶ್ರೀಕಂಠ,ಸುಗ್ರೀವ,ಏಕಲವ್ಯ, ಮಹೇಂದ್ರ, ಗೋಪಿ,ಕಂಜನ್,ಹೇಮಾವತಿ,ರೂಪ,ಕಾವೇರಿ,ಲಕ್ಷ್ಮಿ ಆನೆಗಳಿಗೆ ಅರಣ್ಯ ಇಲಾಖೆ‌ ಅಧಿಕಾರಿಗಳು ಪೂಜೆ ಸಲ್ಲಿಸಿದರು.

ದಸರಾ ಜಂಬೂಸವಾರಿ ಯಶಸ್ವಿ ಗೊಳಿಸಿ ಮರಳಿ ತನ್ನ ಶಿಬಿರಗಳಿಗೆ ತೆರಳಿದ
ಅಭಿಮನ್ಯು ನೇತೃತ್ವದ 14 ಆನೆಗಳನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.

ಎಲ್ಲ ಆನೆಗಳನ್ನು ಖುಷಿಯಿಂದ ಕಣ್ ತುಂಬಿಕೊಂಡ‌ ಜನರು ಮೋಬೈಲ್ ಗಳಲ್ಲಿ ಫೋಟೊ ಕ್ಲಿಕ್ಕಿಸುವುದರಲ್ಲಿ ಮಗ್ನರಾದರು.

ಎಲ್ಲೆಲ್ಲೂ ಭೀಮಾ,ಅಭಿಮನ್ಯು ಎಂದು ಅಭಿಮಾನಿಗಳು ಕೂಗುತ್ತಿದ್ದರು,ಆಗ ಅಸನೆಗಳು ತಮ್ಮ ಸೊಂಡಿಲು ಎತ್ತಿ ನಮಸ್ಕರಿಸಿದವು.ಒಂದು ಕ್ಷಣ‌ ಎಲ್ಲರೂ ಭಾವುಕರಾದರು.

ಒಂದೂವರೆ ತಿಂಗಳಿನಿಂದ ಮೈಸೂರಿನಲ್ಲಿದ್ದ ಆನೆಗಳು ಲಾರಿಗಳ ಮೂಲಕ ತಮ್ಮ,ತಮ್ಮ ಶಿಬಿರಗಳಿಗೆ ತೆರಳಿದವು.

ಆನೆಗಳೊಂದಿಗೆ ಆಗಮಿಸಿದ್ದ ಮಾವುತ ಮತ್ತು ಕವಾಡಿಗಳ ಕುಟುಂಬಸ್ಥರು ವಾಪಸು ಊರಿಗೆ ಹೊರಟರು.ಎಲ್ಲರಿಗೂ ಟಾಟಾ ಮಾಡಿ ಹೊರಟರು.