ದೇವರಾಜ ಅರಸರಂತಹ ಮೇರು ವ್ಯಕ್ತಿತ್ವದ ರಾಜಕಾರಣಿಗಳನ್ನೇ ಆರಿಸಿ: ಕೃಷ್ಣಮೂರ್ತಿ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ದಿವಂಗತ ಡಿ ದೇವರಾಜ ಅರಸು ಅವರು ಬಡವರ ಪರವಾದ ಧೀಮಂತ ನಾಯಕ ಅಂತಹ ಮೇರು ವ್ಯಕ್ತಿತ್ವದ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಬಹಳ ವಿರಳ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಅರಸು ಅವರಂತಹ ಮೇರು ವ್ಯಕ್ತಿತ್ವವಿರುವ ನಾಯಕರುಗಳನ್ನೇ ಮುಂದಿನ ಚುನಾವಣೆಗಳಲ್ಲಿ ಆಯ್ಕೆ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಲಯ ವತಿಯಿಂದ ಪಟ್ಟಣದಲ್ಲಿ ನಡೆದ ಹಿಂದುಳಿದ ವರ್ಗಗಳ ನೇತಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ, ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕೇಕ್ ಕತ್ತರಿಸಿ ಕೃಷ್ಣಮೂರ್ತಿ ಅವರು ಮಾತನಾಡಿದರು.

ಡಿ.ದೇವರಾಜು ಅರಸು ಅವರು ಬಹಳ ನಿಷ್ಠೆ, ಪ್ರಾಮಾಣಿಕತೆಯಿಂದ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದವರು. 1952 ರಲ್ಲಿ ಡಿ ದೇವರಾಜ ಅರಸರು ಹುಣಸೂರು ಕ್ಷೇತ್ರದಿಂದ ಪ್ರಥಮ ಭಾರಿಗೆ ಆಯ್ಕೆ ಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಅದೇ ವೇಳೆ ನಮ್ಮ ತಂದೆ ದಿವಂಗತ ಬಿ.ರಾಚಯ್ಯ ನವರು ಸಹ ಯಳಂದೂರು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರೊಡನೆ ದಿ. ರಾಜಶೇಖರಮೂರ್ತಿ, ದಿ.ಗುರುಪಾದಸ್ವಾಮಿ ಅವರು ಸೇರಿದಂತೆ ಇನ್ನೂ ಅನೇಕ ನಾಯಕರು ಜೊತೆಗಿದ್ದರು ಎಂದು ಸ್ಮರಿಸಿದರು.

1952 ರಿಂದ 57 ಹಾಗೂ1957 ರಿಂದ 62 ರ ವರೆಗೆ ಎರಡು ಅವಧಿಗೆ 10 ವರ್ಷಗಳ ಕಾಲ ಸತತವಾಗಿ ಶಾಸಕರಾಗಿ, ಸಚಿವರಾಗಿ ದಕ್ಷತೆಯಿಂದ ಆಳ್ವಿಕೆ ಮಾಡಿದರು. ನಂತರ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ರಾಜ್ಯದ್ಯಂತ ಹಿಂದುಳಿದ ವರ್ಗಗಳ ಹಾಗೂ ಇನ್ನಿತರ ಜನಾಂಗದವರ ಅಭಿವೃದ್ಧಿಗಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ದೇವರಾಜ ಅರಸು ಅವರು ಬಾಯಲ್ಲಿ ಹೇಳಿದ ಮಾತನ್ನೇ ಅಧಿಕಾರಿಗಳು ಆದೇಶ ಮಾಡುತ್ತಿದ್ದರು ಎಂದು ಶಾಸಕರು ತಿಳಿಸಿದರು.

ಅಧಿಕಾರಿಗಳ ವಿಶ್ವಾಸಕ್ಕೆ ತಗೆದುಕೊಂಡು ಉತ್ತಮವಾದ ಕೆಲಸವನ್ನು ಮಾಡಿಸುತ್ತಿದ್ದರು ಅವರ ನಂತರ 1962 ರಿಂದ 70 ರ ವರೆಗೆ ಎಸ್.ಆರ್. ಕಂಠಿ ನಿಜಲಿಂಗಪ್ಪ ಅವರು ಆಳ್ವಿಕೆ ನಡೆಸಿದರು ಎಂದು ಸ್ಮರಿಸಿದರು.

ಅರಸುರವರು ರಾಜಕೀಯ ಕ್ಷೇತ್ರದಲ್ಲಿ ರಾಜಕಾರಣ ಮಾಡಿದವರು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಯವರನ್ನು ಚಿಕ್ಕಮಗಳೂರು ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸುವ ಮೂಲಕ ಅವರಿಗೆ ರಾಜಕೀಯ ಪುನರ್ ಜನ್ಮ ಕೊಟ್ಟವರು. ಅಂತಹ ಮೇರು ವ್ಯಕ್ತಿತ್ವದ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಬಹಳ ವಿರಳ, ಅವರಂತಹ ಮೇರು ವ್ಯಕ್ತಿತ್ವವಿರುವ ನಾಯಕರುಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕೆಂದು ಜನರಲ್ಲಿ ಮನವಿ ಮಾಡಿದರು.

ಅಂದು ಮೈಸೂರು ರಾಜ್ಯವಾಗಿದ್ದ ಕರ್ನಾಟಕ ರಾಜ್ಯ ಏಕೀಕರಣಕ್ಕೆ ಅರಸು ಅವರ ಕೊಡುಗೆ ಅಪಾರ,ಏಕೀಕರಣ ಸಂದರ್ಭದಲ್ಲಿ ರಾಜ್ಯದ ಅನೇಕ ಭಾಗಗಳು ನೆರೆ ರಾಜ್ಯಗಳ ಆಡಳಿತ ಕ್ಕೊಳಪಟ್ಟಿದ್ದವು. ಗಡಿ ವಿಸ್ತೀರ್ಣ ಹಾಗೂ ನೀರಿನ ಹಂಚಿಕೆ ವಿಚಾರಕ್ಕೆ ನೆರೆ ರಾಜ್ಯಗಳೊಡನೆ ವ್ಯಾಜ್ಯಗಳು ನಡೆದವು. ನೀರಿನ ಹಂಚಿಕೆ ವಿಚಾರಕ್ಕೆ ಮೊದಲು ಹೋರಾಟ ಮಾಡಿದ್ದು ಚಾಮರಾಜನಗರ ಜಿಲ್ಲೆ. ಈ ವೇಳೆ ಬಹಳ ಹೋರಾಟ ನಡೆದು ಮನುಷ್ಯ ಮನುಷ್ಯನನ್ನೇ ದಹಿಸಿ ಬಿಟ್ಟಿದ್ದ. ಇಂದು ಕೂಡ ಗಡಿ ವಿಚಾರದಲ್ಲಿ ಅನೇಕ ಹೋರಾಟ ಗಳು ನಡೆಯುತ್ತಿವೆ ಎಂದು ಶಾಸಕ ಕೃಷ್ಣಮೂರ್ತಿ ವಿಷಾದಿಸಿದರು.

ವಿ.ಪಿ.ಸಿಂಗ್ ಪ್ರಧಾನಿ ಯಾಗಿದ್ದ ಸಂದರ್ಭದಲ್ಲಿ ಮಂಡಲ್ ಆಯೋಗ ಜಾರಿಯಾಯಿತು. ಈ ವೇಳೆ ರಾಜ್ಯದಲ್ಲಿ ಆನೇಕರು ವಿರೋಧಿಸಿದರು. ಆದರೆ ಮಂಡಲ್ ಆಯೋಗದ ಜಾರಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಿಸುವ ಸಲುವಾಗಿ ಎಂಬುದನ್ನು ತಿಳಿಯ ಪಡಿಸಿದಾಗ ಜನರಿಗೆ ಅರಿವಾಯಿತು. ಆಯೋಗ ರಚನೆಯಾಗಿ ಎಲ್ಲಾ ವರ್ಗದ ಎಲ್ಲಾ ಸಮುದಾಯದ ಜನರಿಗೂ ಮೀಸಲಾತಿ ದೊರೆತು ಉತ್ತಮ ಜೀವನವನ್ನು ನಡೆಸುವಂತಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಮೀಸಲಾತಿ ಒದಗಿಸಿಕೊಟ್ಟ ಏಕೈಕ ಮುಖ್ಯಮಂತ್ರಿ ಎಂದರೆ ದೇವರಾಜ ಅರಸುರವರು. ಇಂದಿನ ರಾಜಕಾರಣಿಗಳು ನೆನಪು ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದ್ದಾರೆ. ಅವರ ಕಾಲದಲ್ಲಿ ಅನೇಕ ಸುಧಾರಣೆಯನ್ನು ತಂದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ಕೇವಲ ಅತಿ ಶೂದ್ರರಿಗೆ ಮಾತ್ರ ಕೊಟ್ಟಿಲ್ಲ ಎಲ್ಲಾ ಸಮುದಾಯದವರಿಗೂ ಸಮಾನವಾಗಿ ಮೀಸಲಾತಿಯನ್ನು ಒದಗಿಸಿಕೊಟ್ಟಿದ್ದಾರೆ ಎಂದು ಶಾಸಕರು ಹೇಳಿದರು

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹೆಚ್. ಡಿ. ವಿಶ್ವನಾಥ್ ಅವರು ದಿವಂಗತ ಡಿ.ದೇವರಾಜ ಅರಸು ಅವರ ಕುರಿತು ಸುಧೀರ್ಘ ಭಾಷಣ ಮಾಡಿದರು. ಇದೇ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಡಿಗ್ರಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದ ಮಕ್ಕಳನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಡಿ‌.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 2022-23 ಸಾಲಿನ ಬಾಲಕಿಯರ ವಿದ್ಯಾರ್ಥಿನಿಲಯದ ಹೆಚ್ಚುವರಿ ಕಟ್ಟಡವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು

ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ರೇಖಾ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಕುಂತೂರು, ಜಿ.ಪಂ ಮಾಜಿ ಉಪಾಧ್ಯಕ್ಷ ಯೋಗೀಶ್, ಡಿ ವೈಎಸ್ ಪಿ ಧರ್ಮೇಂದ್ರ, ಜಿಲ್ಲಾ ಬಿಸಿಎಂ ಅಧಿಕಾರಿ ವಿಶ್ವನಾಥ್, ತಾಲ್ಲೂಕು ಅಧಿಕಾರಿ ಶಿವರಾಜು, ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಗ್ರೇಡ್ 2 ತಹಶೀಲ್ದಾರ್ ಕುಮಾರ್, ಬಿಇಒ ಎಂ.ಮಂಜುಳ, ಕೆ.ಆರ್.ಐ.ಡಿ.ಎಲ್ ಸಹಾಯಕ ಕಾರ್ಯ ಪಾಲಕ ಅಭಿಯಂತರ ಚಿಕ್ಕಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.