ಮೈಸೂರು ಸೆ 1: ಮಗು ಹೊಟ್ಟೆಯಲ್ಲಿರುವಾಗಲೇ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆ,ಅದಕ್ಕಾಗಿ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆ ಅಭಿನಂದನಾರ್ಹ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ ಮೈಸೂರು ವತಿಯಿಂದ ಆಯೋಜಿಸಿದ್ದ
ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ
ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.
ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮತ್ತು ಪ್ರಗತಿ ಕಾಣಬೇಕಾಗಿದೆ. ಇದಕ್ಕಾಗಿ ನಮ್ಮ ಸರ್ಕಾರ ಈಗಾಗಲೇ ವರುಣ ಕ್ಷೇತ್ರದಲ್ಲಿ 10 ಎಕರೆ ಜಾಗ ಒದಗಿಸಿದೆ. ಇಷ್ಟಲ್ಲದೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸಲು ನಾವು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಏಷ್ಯಾದ ಅತ್ಯುತ್ತಮ ಸಂಸ್ಥೆಗಳಲ್ಲೊಂದಾಗಿರುವುದು ನಮ್ಮ ಜಿಲ್ಲೆಯ ಮತ್ತು ರಾಜ್ಯದ ಹೆಮ್ಮೆ.
ಧ್ವನಿಯಿಲ್ಲದವರಿಗೆ ಧ್ವನಿಯಾಗಿರುವ, ಕಿವಿ ಕೇಳದೆ ಮೌನವಾಗಿರುವವರಿಗೆ ಮಾತಿನ ಚೈತನ್ಯ ತುಂಬಿರುವ ಇಂಥ ಸಂಸ್ಥೆಯು ಮೈಸೂರಿನಲ್ಲಿರುವುದು ಹಾಗೂ ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಖುಷಿ ವ್ಯಕ್ತಪಡಿಸಿದರು.
1966ರಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ, ಚಿಕಿತ್ಸೆ, ಪುನರ್ವಸತಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಒದಗಿಸುತ್ತಿರುವ ಮಹತ್ವದ ರಾಷ್ಟ್ರೀಯ ಸಂಸ್ಥೆಯಾಗಿದೆ ಎಂದು ಹೇಳಿದರು.
ನಮ್ಮ ರಾಜ್ಯ ಸರ್ಕಾರದ ಪ್ರಾಯೋಜಿತ ಕಾಕ್ಲಿಯರ್ ಇಂಪ್ಲಾಂಟ್ ಕಾರ್ಯಕ್ರಮವಾದ ‘ಶ್ರವಣ ಸಂಜೀವಿನಿ’ ಯೋಜನೆಗೆ 2024-25ರ ಬಜೆಟ್ಟಿನಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ದುಬಾರಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸಲು 32 ಕೋಟಿ ರೂ ಮೀಸಲಿಟ್ಟಿದೆ ಎಂದು ಸಿಎಂ ಮಾಹಿತಿ ನೀಡಿದರು.
ಮಗು ಭ್ರೂಣಾವಸ್ಥೆಯಲ್ಲಿರುವಾಗಲೇ ಅದರ ಸಂವಹನದ ಸಮಸ್ಯೆಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಗಳಿಸಲು ನಮಗೆ ಸಾಧ್ಯವಾಗಿರುವುದು ಇಂತಹ ಪ್ರೀಮಿಯರ್ ಸಂಸ್ಥೆಗಳಿಂದಾಗಿ, ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡುವ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ತರ ಕೆಲಸವನ್ನು ಈ ಸಂಸ್ಥೆಯು ಮಾಡುತ್ತಿದೆ. ವಜ್ರ ಮಹೋತ್ಸವದ ಈ ಸಂದರ್ಭದಲ್ಲಿ ಈ ಸಂಸ್ಥೆಯಲ್ಲಿದ್ದುಕೊಂಡು ಸ್ವಸ್ಥ ಸಮಾಜದ ಏಳಿಗೆಗಾಗಿ ದುಡಿದ-ದುಡಿಯುತ್ತಿರುವ ತಜ್ಞರು, ಪ್ರಾಧ್ಯಾಪಕರು, ಸಹಾಯಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಹೇಳಿದರು.
60 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ವಾಕ್ ಮತ್ತು ಶ್ರವಣದೋಷದ ಸಮಸ್ಯೆಗಳು ಶಾಶ್ವತವಾಗಿ ಬಾರದಂತೆ ತಡೆಯಲು ಅಗತ್ಯವಿರುವ ಎಲ್ಲ ಸಂಶೋಧನೆಗಳನ್ನು ಕೈಗೊಂಡು ಜಗತ್ತಿಗೆ ಬೆಳಕು ನೀಡಲಿ ಎಂದು ಸಿದ್ದರಾಮಯ್ಯ ಹಾರೈಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮ ಉದ್ಘಾಟಿಸಿದರು.
ರಾಜ್ಯಪಾಲ ಥೇವರ್ ಚಂದ್ ಗೆಹ್ಲೋಟ್, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವೆ ಅನುಪ್ರಿಯಾ ಪಟೇಲ್, ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉಪಸ್ಥಿತರಿದ್ದರು.