ಉಕ್ಕಿ ಹರಿದ ಕಾವೇರಿ; ಜಮೀನು ಮುಳುಗಡೆ-ಪ್ರವಾಹ ಭೀತಿಯಲ್ಲಿ ಜನತೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೆಗಾಲ: ಕಾವೇರಿ ನದಿ ಉಕ್ಕಿ  ಹರಿಯುತ್ತಿರುವುದರಿಂದ ಕೊಳ್ಳೇಗಾಲ
ತಾಲ್ಲೂಕಿನ ನದಿ ತೀರದ ಗ್ರಾಮಗಳು ಮತ್ತೊಮ್ಮೆ ಪ್ರವಾಹದ ಭೀತಿ ಎದುರಿಸುವಂತಾಗಿದೆ.

ಕೊಳ್ಳೇಗಾಲ ತಾಲ್ಲೂಕಿನ ಹಳೇ ಹಂಪಾಪುರ ಹಾಗೂ ಮುಳ್ಳೂರು ಗ್ರಾಮಗಳಲ್ಲಿ ಜಮೀನುಗಳು ಪ್ರವಾಹದಿಂದ ಜಲಾವೃತವಾಗಿದ್ದು ಗ್ರಾಮದ ಅಂಚಿನಲ್ಲಿ ನೀರು ಹರಿಯುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಸತತವಾಗಿ ಪ್ರವಾಹ ಭೀತಿ ಎದುರಿಸುತ್ತಿರುವ ಈ ಗ್ರಾಮಗಳು ಕಳೆದ 20 ದಿನಗಳ ಹಿಂದೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಜಮೀನುಗಳು ಮುಳುಗಡೆಯಾಗಿ ಗ್ರಾಮದ ಅಂಚಿನಲ್ಲಿ ನೀರು ಹರಿಯುತ್ತಿದ್ದುದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿತ್ತು.

ರಾತ್ರಿ ಜಮೀನುಗಳು ಮುಳುಗಡೆಯಾಗಿರುವುದರಿಂದ
ಮತ್ತೊಮ್ಮೆ ಪ್ರವಾಹ ಭೀತಿ ಎದುರಿಸುವಂತಾಗಿದೆ.

ಕರ್ನಾಟಕ ರಾಜ್ಯದ ಹಾಗೂ ಕೇರಳದ ಕರಾವಳಿ ತೀರದ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಿಂದ ವರುಣ ನಿರಂತರವಾಗಿ ಆರ್ಭಟಿಸುತ್ತಿರುವುದರಿಂದ ಕಬಿನಿ ಹಾಗೂ ಕೆ ಆರ್ ಎಸ್ ಜಲಾಶಯಗಳಿಗೆ  ನಿರಂತರವಾಗಿ ಹರಿದು ಬರುತ್ತಿದೆ.

ಹಾಗಾಗಿ ಜಲಾಶಯಗಳು ಅದಾಗಲೇ ತುಂಬಿ ಭರ್ತಿಯಾಗಿದ್ದು 2 ಜಲಾಶಯಗಳಿಂದ 1.25 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನೀರನ್ನು ಕಾವೇರಿ, ಕಪಿಲ ನದಿಗಳಿಗೆ ಹರಿ ಬಿಡಲಾಗುತ್ತಿದೆ.
           
ಕೆ ಆರ್ ಎಸ್ ಜಲಾಶಯದಿಂದ 80 ಸಾವಿರ ಕ್ಯೂಸೆಕ್, ಹಾಗೆಯೇ ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ನದಿಗಳಿಗೆ ಹರಿಬಿಡಲಾಗುತ್ತಿದೆ.

ಕಬಿನಿ ಹಾಗೂ ಕೆ.ಆರ್,ಎಸ್ 2 ಅಣೆಕಟ್ಟೆಗಳಿಂದ 1.25 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನದಿಗಳಿಗೆ ನೀರು ಹರಿದು ಬರುತ್ತಿರುವುದರಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

ಕಬಿನಿ ಹಾಗೂ ಕಾವೇರಿ ನದಿಗಳು ಟಿ.ನರಸೀಪುರದ ಬಳಿ ಒಂದಾಗುತ್ತವೆ. ಇದರಿಂದ ಮುಂದೆ ಸಾಗುವ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಹಾಗಾಗಿ ಕೆಳಭಾಗದಲ್ಲಿರುವ ಕೆಲವು ನದಿ ಪಾತ್ರದ ಗ್ರಾಮಗಳು ಪ್ರತಿವರ್ಷ ಪ್ರವಾಹ ಭೀತಿ ಎದುರಿಸುತ್ತವೆ.

ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ಹಳೇ ಹoಪಾಪುರ ಗ್ರಾಮಗಳ ರೈತರ ಜಮೀನುಗಳು ಪ್ರವಾಹದಿಂದ ಜಲಾವೃತವಾಗಿದ್ದು ಈ ಗ್ರಾಮಗಳೊಡನೆ ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಗ್ರಾಮಗಳ ಜನ ಕಳೆದ ಭಾರಿಯಂತೆ ಈ ಭಾರಿಯು ಮಳುಗಡೆಯ ಭೀತಿ ಎದುರಿಸುತ್ತಿದ್ದಾರೆ.

ನಿನ್ನೆ ವರೆಗೂ ನದಿ ಪಾತ್ರದಲ್ಲಿ ತುಂಬಿ ಹರಿಯುತ್ತಿದ್ದ ನೀರು ಇಂದು ಜಮೀನುಗಳಿಗೂ ನುಗ್ಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನದಿಗಳಿಗೆ ನೀರನ್ನು ಹರಿ ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲಾದರು ಅಪಾಯದ ಮಟ್ಟ ಮೀರ ಬಹುದು ಎಂದು ಜನ ಆತಂಕಕ್ಕೊಳಗಾಗಿದ್ದಾರೆ.

ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಈಗಾಗಲೆ ಕಟ್ಟೆಚ್ಚರ ವಹಿಸಿದೆ ಜನರಿಗೆ ಆತಂಕಪಡದಂತೆ ಮನವಿ ಮಾಡಿದೆ.